ತೆಲುಗು ಕಿರುತೆರೆಯಲ್ಲಿಯೂ ಕನ್ನಡದ ಜೋಡಿಗೆ ಫುಲ್ ಡಿಮ್ಯಾಂಡ್, ಅಭಿ-ದೀಪಿಕಾ ಅಲ್ಲೇನು ಮಾಡ್ತಿದ್ದಾರೆ..?
ಒಂದು ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದವರು ಮತ್ತೊಂದು ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ ಎಂಬುದು ಸತ್ಯ. ಕೆಲವೊಮ್ಮೆ ಒಂದು ಧಾರಾವಾಹಿಯಲ್ಲಿ ಅತ್ತೆ ಸೊಸೆಯಾಗಿ ನಟಿಸಿದ್ದರೆ, ಮತ್ತೊಂದರಲ್ಲಿ ಅಮ್ಮ ಮಗಳಾಗಿ ಕಾಣಿಸಿಕೊಳ್ಳುತ್ತಾರೆ. ಒಂದರಲ್ಲಿ ಗಂಡ ಹೆಂಡತಿಯಾಗಿ ನಟಿಸಿದ್ದರೆ, ಮತ್ತೊಂದರಲ್ಲಿ ಶತ್ರುಗಳಾಗಿ, ಇಲ್ಲವಾದಲ್ಲಿ ಇನ್ಯಾವುದರಲ್ಲಾದರೂ ಸಂಬಂಧಿಕರಾಗಿ ಕಾಣಿಸಿಕೊಳ್ಳಬಹುದಷ್ಟೇ. ಅದನ್ನು ಹೊರತು ಪಡಿಸಿದರೆ, ಒಂದು ಧಾರಾವಾಹಿಯಲ್ಲಿ ಗಂಡ-ಹೆಂಡತಿಯಾಗಿ ನಟಿಸಿದವರು, ಮತ್ತೊಂದರಲ್ಲಿನ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬುದೇ ಕಷ್ಟ. ಹಾಗಿದ್ದ ಬೇರೆ ಧಾರಾವಾಹಿಯಲ್ಲೂ ಗಂಡ ಹೆಂಡತಿಯಾಗಿ ನಟಿಸುವುದು ಬಹಳ ಕಷ್ಟ.
ಎರಡು ಧಾರಾವಾಹಿಯಲ್ಲಿ ನಟಿಸುತ್ತಿರುವ ಜೋಡಿಗಳು
ಈಗ ಯಾಕೆ ಈ ವಿಚಾರ ಎಂದರೆ ಅಪರೂಪದಲ್ಲಿ ಅಪರೂಪ ಎಂಬಂತೆ ಈಗ ಜೋಡಿಯೊಂದು ಎರಡು ಧಾರಾವಾಹಿಯಲ್ಲಿ ಒಟ್ಟೊಟ್ಟಿಗೆ ಗಂಡ-ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಶ್ರೀರಸ್ತು ಶುಭಮಸ್ತು ಧಾರಾವಾಹಿ ಎಲ್ಲರೂ ನೋಡುತ್ತಿರುತ್ತೀರಾ. ಇದರಲ್ಲಿ ಮಾಧವ್ ಎರಡನೇ ಮಗ ಅಭಿ ಹಾಗೂ ಅವಳ ಪತ್ನಿ ದೀಪಿಕಾ ಈಗ ಮತ್ತೊಂದು ಧಾರಾವಾಹಿಯಲ್ಲೂ ಗಂಡ ಹೆಂಡತಿಯಾಗಿ ನಟಿಸಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿ ಪಾಸಿಟಿವ್ ರೋಲ್ ನಲ್ಲಿ ನಟಿಸಿದ್ದಾರೆ. ಇನ್ನು ಈ ಜೋಡಿಗಳು ಈಗ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಪೆ ಮಾ ಜೀವನ ಜ್ಯೋತಿ ಎಂಬ ಧಾರಾವಾಹಿಯಲ್ಲಿ ಪತಿ-ಪತ್ನಿಯಾಗಿ ಬಣ್ಣ ಹಚ್ಚಿದ್ದಾರೆ.

ದರ್ಶಿನಿ, ನಕುಲ್ ನಟನೆಯ ಧಾರಾವಾಹಿಗಳು
ಇನ್ನು ದೀಪಿಕಾ ಅವರ ನಿಜವಾದ ಹೆಸರು ದರ್ಶಿನಿ ಡೆಲ್ಟಾ, ಅಭಿ ಪಾತ್ರಧಾರಿಯ ಹೆಸರು ನಕುಲ್ ಶರ್ಮಾ. ದರ್ಶಿನಿ ಡೆಲ್ಟಾ ಅವರು ಪಾಪೆ ಮಾ ಜೀವನ ಜ್ಯೋತಿ ಧಾರಾವಾಹಿಯಲ್ಲೂ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರೆ. ಈ ಧಾರಾವಾಹಿಯಲ್ಲೂ ನಕುಲ್ ಶರ್ಮಾ ಹಾಗೂ ದರ್ಶಿನಿ ಡೆಲ್ಟಾ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನು ನಟಿ ದರ್ಶಿನಿ ಮೂಲತಃ ಡ್ಯಾನ್ಸರ್. ಪ್ರಭುದೇವ್, ಮಾಸ್ಟರ್ ಜಾನಿ ಮುಂತಾದ ಕೊರಿಯೋಗ್ರಫರ್ ಗಳೊಂದಿಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ದರ್ಶಿನಿ ಅವರು ಕೆಲಸ ಮಾಡಿದ್ದಾರೆ. ಸಿನಿಮಾರಂಗದ ದಿಗ್ಗಜರಾದ ಅಲ್ಲು ಅರ್ಜುನ್, ಧನುಷ್, ಯಶ್, ನಟ ಜೂನಿಯರ್ ಎನ್ಟಿಆರ್ ಮುಂತಾದವರ ಸಿನಿಮಾಗಳಿಗೆ ದರ್ಶಿನಿ ಅವರು ಡಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ. ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಮಲೈಕಾ ಅವರ ಡ್ಯಾನ್ಸ್ಗೂ ಇವರು ಕೋರಿಯೋಗ್ರಾಫಿ ಮಾಡಿದ್ದಾರೆ.
ನಕುಲ್ ಶರ್ಮಾ ಸಾಫ್ಟ್ ಪಾತ್ರ
ಇನ್ನು ನಕುಲ್ ಶರ್ಮಾ ಉದಯೋನ್ಮುಖ ನಟ. ನಕುಲ್ ಅವರಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಒಳ್ಳೆಯ ವೇದಿಕೆಯಾಗಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟ ನಕುಲ್ ಶರ್ಮಾ ಅವರ ನಟನೆ ಬಹಳ ಸಾಫ್ಟ್ ಆಗಿದ್ದು, ನೋಡುವವರಿಗೆ ಮನೆಯ ಮಕ್ಕಳು ಹಠ ಮಾಡಿದಂತೆ ಕಾಣುತ್ತದೆ. ಅಭಿ ಮಾಡುವ ಹಠವನ್ನು ನೋಡಿದರೆ, ಎಂಥವರಿಗೂ ಸಮಾಧಾನ ಮಾಡಬೇಕು ಅನಿಸುತ್ತದೆಯೇ ಹೊರತು ಕೂಗಾಡಬೇಕು, ಶಿಕ್ಷಿಸಬೇಕು ಎಂಬುದು ಯಾರಿಗೂ ಅನಿಸದು. ನಕುಲ್ ಅವರು ಅಷ್ಟು ಅದ್ಭುತವಾಗಿ ನಟಿಸುತ್ತಿದ್ದಾರೆ.
ಸಿನಿಮಾ, ಧಾರಾವಾಹಿಗಳಲ್ಲಿ ನಟನೆ
ನಟ ನಕುಲ್ ಶರ್ಮಾ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುವ ಮುನ್ನ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಧ್ರುವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅಲ್ಲದೇ, ಎಡಕಲ್ಲು ಗುಡ್ಡದ ಮೇಲೆ ಹಾಗೂ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಚಿತ್ರದಲ್ಲೂ ನಕುಲ್ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ ಶ್ರೀರಸ್ತು ಶುಭಮಸ್ತು ಮತ್ತು ಪಾಪೆ ಮಾ ಜೀವನ ಜ್ಯೋತಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications