Lakshmi Nivasa: ಭಾವನಾಳನ್ನು ಅಮ್ಮಾ ಎನ್ನುತ್ತಾಳಾ ಖುಷಿ? ಸೌಪರ್ಣಿಕಾ ಪ್ಲಾನ್ ವರ್ಕ್ ಆಗುತ್ತಾ..?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾಳಿಗೆ ಈಗಾಗಲೇ 32 ವರ್ಷ ವಯಸ್ಸು. ಇನ್ನೂ ಕೂಡ ಆಕೆಗೆ ಮದುವೆಯೇ ಆಗಿಲ್ಲ. ಇದಕ್ಕೆ ಕಾರಣ ಅವಳ ಜಾತಕ.
ಭಾವನಾ ಆಶ್ಲೇಷ ನಕ್ಷತ್ರದಲ್ಲಿ ಜನಿಸಿರುವುದರಿಂದ ಆಕೆ ಮದುವೆಯಾಗಿ ಹೋಗುವ ಮನೆಯಲ್ಲಿ ಯಾರಾದ್ದಾದರೂ ಒಬ್ಬರ ಸಾವು ಸಂಭವಿಸುತ್ತದೆ ಎಂದು ನಂಬಲಾಗಿದೆ.

ಈ ಜಾತಕದ ಕಾರಣ ಭಾವನಾಳನ್ನು ನೋಡಲು ಬರುವ ಯಾವ ಗಂಡು ಕೂಡ ಒಪ್ಪುತ್ತಿಲ್ಲ. ಇದರಿಂದ ಶ್ರೀನಿವಾಸ-ಲಕ್ಷ್ಮೀ ಮನೆಯಲ್ಲಿ ಭಾವನಾ ಬಗ್ಗೆ ಮರುಕದ ಜೊತೆಗೆ ಬೇಸರವೂ ಇದೆ.
ಲಕ್ಷ್ಮೀ ಕೊರಗು ನೀಗಿಸಿದ ವನಜಾ
ಭಾವನಾ ಕೆಲಸ ಮಾಡುವ ಕಂಪನಿಯ ಬಾಸ್ ಶ್ರೀಕಾಂತ್ ಅರಸ್‌ಗೆ ಈಗಾಗಲೇ ಒಂದು ಮದುವೆಯಾಗಿ ಮಗು ಕೂಡ ಇದೆ. ಆದರೆ, ಹೆಂಡತಿ ಇಲ್ಲದ ಕಾರಣ ಅವನ ತಾಯಿ ವನಜಾ ಮಗನಿಗೆ ಎರಡನೇ ಮದುವೆಯನ್ನು ಮಾಡಲು ನಿರ್ಧರಿಸಿದ್ದಾಳೆ. ಶ್ರೀಕಾಂತ್ ಮಗಳು ಖುಷಿಗೆ ಭಾವನಾ ಇಷ್ಟ ಎಂಬ ಕಾರಣಕ್ಕೆ ವನಜಾ ಅವರ ಮನೆಗೆ ಹೋಗಿ ಮದುವೆಗೆ ಹೆಣ್ಣು ಕೇಳಿದ್ದಾಳೆ. ಲಕ್ಷ್ಮೀ ನಿತ್ಯ ತನ್ನ ಮಗಳ ಮದುವೆ ಆಗುತ್ತಿಲ್ಲ ಎಂದು ಕೊರಗುತ್ತಿದ್ದಳು. ತನ್ನ ಮಗಳಿಗೆ ಒಂದೊಳ್ಳೆಯ ಬದುಕನ್ನು ನೀಡಬೇಕು ಎಂದು ಬಯಸುತ್ತಿದ್ದಳು. ಆದರೆ, ಸಾಧ್ಯವಾಗುತ್ತಿಲ್ಲ ಎಂದು ನಿತ್ಯ ಕಣ್ಣೀರು ಹಾಕುತ್ತಿದ್ದಳು. ಆದರೆ, ಈಗ ವನಜಾ ಬಂದು ಸಂಬಂಧ ಕೇಳಿ ಖುಷಿಯಾಗಿದ್ದಾಳೆ.
ಮದುವೆಗೆ ಒಪ್ಪಿಗೆ ಕೊಟ್ಟ ಭಾವನಾ
ಮನೆಯಲ್ಲಿ ಎಲ್ಲರ ಬಳಿ ಕುಳಿತು ಲಕ್ಷ್ಮೀ ಈ ಸಂಬಂಧದ ಬಗ್ಗೆ ಮಾತನಾಡಿದ್ದಾಳೆ. ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಲೆಕ್ಕಾಚಾರ ಹಾಕಿದ್ದಾರೆ. ಕೆಲವರು ಎರಡನೇ ಮದುವೆ ಎಂದು ಹೇಳಿದ್ದರೆ, ಮತ್ತೆ ಕೆಲವರು ಹಣದ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ಮತ್ತೆ ಕೆಲವರು ಭಾವನಾ ಸೆಟ್ಲ್ ಆಗುವುದು ಮುಖ್ಯ ಎಂದು ಬಯಸಿದ್ದಾರೆ. ಮನೆಯವರ ಮಾತಿನಿಂದ ಭಾವನಾಳಿಗೆ ನೋವಾಗಿದೆ. ಆದರೆ ತನಗೋಸ್ಕರ ಅಮ್ಮ ಕಷ್ಟಪಡುತ್ತಿರುವುದನ್ನು ನೋಡಿ ಈ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ. ಭಾವನಾ ಮದುವೆಗೆ ಒಪ್ಪಿದ್ದಕ್ಕೆ ಮನೆಯವರೆಲ್ಲಾ ಖುಷಿ ಪಟ್ಟಿದ್ದು. ಶ್ರೀಕಾಂತ್ ಮನೆಯವರು ಕೂಡ ಮದುವೆ ಮಾತುಕತೆಗೆ ಆಗಮಿಸಿದ್ದಾರೆ.

ಸೌಪರ್ಣಿಕಾಳಿಗೆ ಇಷ್ಟವಿಲ್ಲದ ಮದುವೆ
ವನಜಾಳ ಮಗಳು ಸೌಪರ್ಣಿಕಾಳಿಗೆ ಈ ಮದುವೆ ಕೊಂಚವೂ ಇಷ್ಟವಿಲ್ಲ. ಬಡವರ ಮನೆಯ ಹುಡುಗಿ ಎಂಬುದು ಒಂದು ಕಾರಣವಾದರೆ, ಶ್ರೀಕಾಂತ್ ಅಣ್ಣನಿಗೆ ಮದುವೆಯಾದರೆ, ತನ್ನ ಬೊಕ್ಕಸಕ್ಕೆ ತೊಂದರೆಯಾಗುತ್ತದೆ ಎಂಬುದು ಮತ್ತೊಂದು ಕಾರಣವಾಗಿದೆ. ಹೀಗಾಗಿ, ಭಾವನಾ ಬಳಿ ಹೋಗಿ ನೀನು ಎಷ್ಟು ಚೆನ್ನಾಗಿದ್ದೀಯಾ. ನನ್ನ ಅಣ್ಣನಿಗಿಂತಲೂ ಒಳ್ಳೆಯ ಹುಡುಗ ಸಿಗುತ್ತಾನೆ. ಆತುರ ಪಟ್ಟು ಪಶ್ಚಾತಾಪ ಪಡುವ ಬದಲು ಯೋಚಿಸು ಎಂದು ಹೇಳಿಕೊಡುತ್ತಾಳೆ. ಆದರೆ ಭಾವನಾ ಯಾರ ಮಾತಿಗೂ ಕಿವಿ ಕೊಡುವುದಿಲ್ಲ. ಜಾತಕದ ಬಗ್ಗೆ ಯೋಚಿಸದ ವನಜಾ ಮದುವೆ ಕಾರ್ಯ ಮುಂದುವರೆಯಲಿ ಎಂದು ಹೇಳುತ್ತಾಳೆ.
ಖುಷಿಗೆ ಅಮ್ಮನಾಗುತ್ತಾಳಾ ಭಾವನಾ?
ಇದು ಎಲ್ಲರಿಗೂ ಖುಷಿ ಕೊಡುತ್ತದೆ. ಇನ್ನು ಶ್ರೀಕಾಂತ್ ಮಗಳು ಖುಷಿ ಭಾವನಾಳನ್ನು ಆಂಟಿ ಎಂದು ಕರೆಯುತ್ತಾಳೆ. ಆಗ ಭಾವನಾ ಬೇಡ ನನ್ನ ಅಮ್ಮ ಅಂತ ಕರೆಯಬೇಕು ಎಂದು ಹೇಳಿಕೊಡುತ್ತಾಳೆ. ಆದರೆ, ಭಾವನಾ ನಿಜವಾಗಲೂ ಖುಷಿಗೆ ಅಮ್ಮನಾಗುತ್ತಾಳಾ? ಇಲ್ಲವೇ ಎಂಎಲ್‌ಎ ಜವರೇಗೌಡನ ಕೊನೆಯ ಮಗನ ಹೆಂಡತಿಯಾಗುತ್ತಾಳಾ? ಎಂಬುದನ್ನು ಕಾದು ನೋಡಬೇಕಿದೆ. ಇತ್ತ ಸೌಪರ್ಣಿಕಾ ಕೂಡ ಶ್ರೀಕಾಂತ್ ಮತ್ತು ಭಾವನಾ ಮದುವೆಗೆ ಅಡ್ಡಿಯಾಗಿ ನಿಂತಿದ್ದು, ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











