ಐಎಎಸ್ ಆಗು ಕನಸು ಹೊತ್ತು ಟಿಫನ್ ರೂಮ್ ಗೆ ಬಂದ ʼಲಕ್ಷ್ಮೀʼ
ಎಲ್ಲಾ ಮನರಂಜನೆ ವಾಹಿನಿಗಳಲ್ಲೂ ಹೊಸ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಲೇ ಇರುತ್ತದೆ. ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ ಮೂರು ವಾಹಿನಿಗಳಲ್ಲಿ ಸಾಲು ಸಾಲು ಧಾರಾವಾಹಿಗಳು ಪ್ರಾರಂಭವಾಗುತ್ತಿವೆ.
ಈಗ ಮೂರು ವಾಹಿನಿಗಳಲ್ಲಿ ಒಂದೊಂದು ಹೊಚ್ಚ ಹೊಸ ಧಾರಾವಾಹಿಗಳು ಪ್ರಸಾರವಾಗಲು ತುದಿಗಾಲಿನಲ್ಲಿ ನಿಂತಿವೆ. ಇತ್ತೀಚೆಗೆ ಎಲ್ಲಾ ವಾಹಿನಿಗಳಲ್ಲೂ ಲಕ್ಷ್ಮೀ ಹೆಸರಿನ ಧಾರಾವಾಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಭಿಮಾನಿಗಳು ಕನ್ಫ್ಯೂಸ್ ಆಗುವ ಸಾಧ್ಯತೆ ಇದೆ.

ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮಿ, ಲಕ್ಷ್ಮೀ ನಿವಾಸ, ಗೃಹಲಕ್ಷ್ಮೀ ಹೀಗೆ ಸಾಲು ಸಾಲು ಧಾರಾವಾಹಿಗಳು ಚಾಲ್ತಿಯಲ್ಲಿವೆ. ಈಗ ಇದಕ್ಕೆ ಮತ್ತೊಂದು ಲಕ್ಷ್ಮೀ ಹೆಸರಿನ ಧಾರಾವಾಹಿ ಸೇರ್ಪಡೆಗೊಳ್ಳಲಿದೆ.
ಕಿರುತೆರೆಯಲ್ಲಿ ಜೋರಾಗಿದೆ ಲಕ್ಷ್ಮೀ ಹವಾ..!
ಕೆಲ ವರ್ಷಗಳ ಹಿಂದೆ ಲಕ್ಷ್ಮೀಬಾರಮ್ಮ ಧಾರಾವಾಹಿ ಸಿಕ್ಕಾಪಟ್ಟೆ ಹಿಟ್ ಆಗಿದ್ದ ಸೀರಿಯಲ್. ಇದಾದ ಬಳಿಕ ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಎಂಬ ಧಾರಾವಾಹಿ ಪ್ರಸಾರ ಕಂಡಿತು. ಧಾರಾವಾಹಿ ಹಿಟ್ ಆಗುತ್ತಿದ್ದಂತೆ ಒಂದು ಧಾರಾವಾಹಿಯನ್ನು ಎರಡು ಧಾರಾವಾಹಿಯನ್ನಾಗಿ ಸ್ಪ್ಲಿಟ್ ಮಾಡಲಾಯ್ತು. ಒಂದು ಭಾಗ್ಯಲಕ್ಷಿ, ಮತ್ತೊಂದು ಲಕ್ಷ್ಮೀಬಾರಮ್ಮ. ಇವೆರಡು ಧಾರಾವಾಹಿ ಟಾಪ್ ಸ್ಥಾನದಲ್ಲೇ ಇದ್ದು, ಇತ್ತೀಚೆಗೆ ಮತ್ತೆ ಕಲರ್ಸ್ ಕನ್ನಡ ಗೃಹಲಕ್ಷ್ಮಿ ಎಂಬ ಮತ್ತೊಂದು ಧಾರಾವಾಹಿಯನ್ನು ಪ್ರಾರಂಭಿಸಿದೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿಯೂ ಈಗ ಲಕ್ಷ್ಮಿ ನಿವಾಸ ಎಂಬ ಹೆಸರಲ್ಲಿ ಹೊಚ್ಚ ಹೊಸ ಧಾರಾವಾಹಿಯು ಪ್ರಾರಂಭಗೊಂಡಿದೆ. ಈಗಾಗಲೇ ವೀಕ್ಷಕರು ಎಲ್ಲಾ ವಾಹಿನಿಗಳಲ್ಲಿ ಲಕ್ಷ್ಮೀ ಹವಾ ಜೋರಾಗಿದೆ ಎಂದು ಕಮೆಂಟ್ ಮಾಡುತ್ತಿರುವ ಹೊತ್ತಿನಲ್ಲೇ ಈಗ ಸ್ಟಾರ್ ಸುವರ್ಣ ವಾಹಿನಿಯೂ ಕೂಡ ಲಕ್ಷ್ಮಿ ಎಂಟ್ರಿಯಾಗಿದ್ದಾಳೆ.
ಬರ್ತಿದ್ದಾಳೆ ಲಕ್ಷ್ಮೀ ಟಿಫನ್ ರೂಮ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗೆ ಗೌರಿ ಶಂಕರ ಧಾರಾವಾಹಿ ಶುರುವಾಗಿತ್ತು. ಇದೀಗ ಲಕ್ಷ್ಮೀ ಟಿಫನ್ ರೂಮ್ ಎಂಬ ಹೊಸ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸ್ನೇಹದಿಂದ ಅರ್ಪಿಸುತ್ತಿದೆ ವರಲಕ್ಷ್ಮೀ-ಸರಸ್ವತಿಯರ ಸುಂದರ ಸ್ನೇಹ ಬಾಂಧವ್ಯದ ಕಥೆ ಲಕ್ಷ್ಮೀ ಟೀಫನ್ ರೂಮ್ ಶೀಘ್ರದಲ್ಲಿ ಎಂದು ಪ್ರೋಮೋ ಹರಿಬಿಟ್ಟಿದೆ. ಧಾರಾವಾಹಿಯ ಪ್ರೋಮೋ ನೋಡಿ, ಹೊಸ ಕತೆ ಎಂದು ವೀಕ್ಷಕರು ಸಂತಸ ಪಟ್ಟಿದ್ದು, ಇದೇ ಸಂದರ್ಭದಲ್ಲಿ ಇದರಲ್ಲೂ ಲಕ್ಷ್ಮೀ ಬಂದಳೇ ಎಂದು ಮೂಗು ಮುರಿದಿದ್ದಾರೆ. ಲಕ್ಷ್ಮೀ ಟಿಫನ್ ರೂಮ್ ಧಾರಾವಾಹಿಯಲ್ಲಿ ಸರಸ್ವತಿ ಮತ್ತು ವರಲಕ್ಷ್ಮೀ ಎಂಬ ಇಬ್ಬರೂ ಸ್ನೇಹಿತರು ಇರುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಒಟ್ಟಿಗೆ ಬೆಳೆಯುವ ಈ ಗೆಳತಿಯರದ್ದು, ಒಂದೇ ಮನಸ್ಥಿತಿ. ಆದರೆ, ಇಬ್ಬರ ಆಸೆಗಳು ಮಾತ್ರ ಬೇರೆ ಬೇರೆ.

ಕಲೆಕ್ಟರ್ ಆಗುವ ಕನಸು ಲಕ್ಷ್ಮೀಯದ್ದು
ಸರಸ್ವತಿಗೆ ಮದುವೆಯಾಗಿ ಸಂಸಾರ ನಡೆಸುವ ಪುಟ್ಟ ಮನಸ್ಸು. ಆದರೆ, ವರಲಕ್ಷ್ಮಿಗೆ ಚೆನ್ನಾಗಿ ಓದಿ ಕಲೆಕ್ಟರ್ ಆಗುವ ಕನಸು. ಆದರೆ, ಮನೆಯ ಪರಿಸ್ಥಿತಿ ಶ್ರೀಮಂತರ ಮನೆಗೆ ಮದುವೆಯಾಗುವ ಸ್ಥಿತಿ ವರಲಕ್ಷ್ಮೀ ಗೆ ಬರುತ್ತದೆ. ಅದೂ ಕೂಡ ಲಕ್ಷ್ಮೀ ಟಿಫನ್ ರೂಮ್ ನಡೆಸುವ ಮನೆಗೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯಲ್ಲಿ ಹೆಣ್ಣು ಮಕ್ಕಳು ಓದುವುದಕ್ಕೆ ಅವಕಾಶ ಇಲ್ಲ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕು. ಇನ್ನು ಸರಸ್ವತಿ ಅದೇ ಮನೆಗೆ ಮನೆ ಕೆಲಸದವಳಾಗಿರುತ್ತಾಳೆ. ಇವರಿಬ್ಬರ ಬದುಕು ಮುಂದೆ ಹೇಗೆ ಸಾಗುತ್ತದೆ ಎಂಬುದೇ ಧಾರಾವಾಹಿಯ ಕಥೆ.
ವಚನ್ ಹೊಸಮತ್ ನಟನೆಯ ಧಾರಾವಾಹಿ
ಇನ್ನು ಲಕ್ಷ್ಮೀ ಟಿಫನ್ ರೂಮ್ ಧಾರಾವಾಹಿಯು ಯಾವಾಗ ಪ್ರಸಾರವಾಗುತ್ತದೋ ಗೊತ್ತಿಲ್ಲ. ಆದರೆ, ಅಭಿಮಾನಿಗಳು 9.00 ಗಂಟೆಗೆ ಪ್ರಸಾರ ಮಾಡುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಧಾರಾವಾಹಿಯಲ್ಲಿ ವಚನ್ ಹೊಸಮತ್ ಎಂಬಾತ ವರಲಕ್ಷ್ಮಿ ಪತಿಯಾಗಿಯೂ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಇವರು ಮಾಡೆಲ್ ಆಗಿದ್ದು, ಮಿಸ್ಟರ್ ದಾವಣಗೆರೆ 2022ನ ಬೆಸ್ಟ್ ರ್ಯಾಂಪ್ ವಾಕ್ ಅವಾರ್ಡ್ ನ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಕೆಲ ಆಲ್ಬಂ ಸಾಂಗ್ ಗಳಲ್ಲೂ ನಟಿಸಿದ್ದಾರೆ. ಮಾಯಾಜಾಲ ಎಂಬ ಸಿನಿಮಾದಲ್ಲೂ ವಚನ್ ಹೊಸಮತ್ ಅವರು ನಟಿಸಿದ್ದಾರೆ.


Click it and Unblock the Notifications











