ಹೊಸ ಧಾರಾವಾಹಿಯಲ್ಲಿ ಒಂದಾದ ಹಳೆಯ ನಟಿಯರು, ಯಾವುದು ಗೊತ್ತಾ..?
ಸುಮಾರು ವರ್ಷಗಳಿಂದ ಪರಭಾಷೆ ಕಿರುತೆರೆಯಲ್ಲಿ ನಮ್ಮ ಕನ್ನಡದ ಕಲಾವಿದರು ನೆಲೆ ಕಂಡುಕೊಂಡಿದ್ದರು. ಇದೀಗ ಅವರೆಲ್ಲಾ ಮತ್ತೆ ಕರುನಾಡಿಗೆ ಮರಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕನ್ನಡದ ಕಲಾವಿದರು ಪರಭಾಷೆಗಳಿಂದ ವಾಪಸ್ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಸಾಲಿಗೆ ಹಿರಿಯ ನಟಿಯರು ಸೇರಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ನಾಯಕಿ ಪಾತ್ರದ ಮೂಲಕ ಮೆಗಾ ಸೀರಿಯಲ್ ಗಳಲ್ಲಿ ನಟಿಸಿ ಜನಮನ ಗೆದ್ದ ಈ ನಟಿಯರು ಇದೀಗ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೊಸ ಧಾರಾವಾಹಿಯಲ್ಲಿ ಹಿರಿಯ ನಟಿಯರು
ಹೌದು.. ಉದಯ ಟಿವಿಯಲ್ಲಿ ಹೊಸ ಧಾರಾವಾಹಿಯ ಪ್ರೊಮೋ ಹರಿ ಬಿಡಲಾಗಿದೆ. ಈ ಧಾರಾವಾಹಿಯ ಕಥೆ ಕೊಂಚ ಡಿಫರೆಂಟ್ ಆಗಿದೆ. ತನ್ನವರ ಪ್ರೀತಿಗೆ ತಲೆ ಬಾಗಲು ಸದಾ ಮುಂದು, ಅನ್ಯಾಯ ಕಂಡರೆ ಸಿಡಿದು ಬೀಳುತ್ತಾಳೆ ನಮ್ಮ ಸಿಂಧು, ನ್ಯಾಯಕ್ಕಾಗಿ ಸಿಂಧು ಭೈರವಿ ಆಗುವ ಹೊಸ ಕಥೆ. ಅದೇ ಸಿಂಧುಭೈರವಿ.. ಇದೇ ಹೆಸರಿನಲ್ಲಿ ಈಗಾಗಲೇ ಪರಭಾಷೆಯಲ್ಲಿ ಧಾರಾವಾಹಿಯೊಂದು ಪ್ರಸಾರವಾಗಿತ್ತು. ಆದರೆ, ಆ ಕಥೆಗೂ ಈ ಹೊಸ ಕಥೆಗೂ ಬಹಳ ವ್ಯತ್ಯಾಸವಿದೆ. ಇನ್ನು ಉದಯ ಟಿವಿಯಲ್ಲಿ ಸಿಂಧುಭೈರವಿ ಧಾರಾವಾಹಿ ಅತೀ ಶ್ರೀಘ್ರದಲ್ಲಿ ಪ್ರಸಾರ ಕಾಣಲಿದೆ. ಆದರೆ, ಈ ಧಾರಾವಾಹಿಯ ವಿಶೇಷವೆಂದರೆ ಹಿರಿಯ ಕಿರುತೆರೆ ಜೋಡಿಗಳು ನಟಿಸಲಿದ್ದು, ಬಹಳ ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದಾರೆ.

ನಟಿ ಸುಚಿತ್ರಾ ಕೆಎಸ್ ನಟನೆ
ನಿಮಗೆ ಕಿರುತೆರೆ ನಟಿಯರಾದ ಸುಚಿತ್ರಾ ಕೆಎಸ್, ರೇಖಾಕೃಷ್ಣ ಅವರ ಹೆಸರು ಎಲ್ಲೋ ಕೇಳಿದಂತೆ ಅನಿಸಬಹುದು. ಅದೇ ಅವರ ಭಾವಚಿತ್ರವನ್ನು ಕಂಡಾಗ ಇವರು ಗೊತ್ತು ಎನ್ನುವಷ್ಟು ಹತ್ತಿರವಾಗಿರುವ ನಟಿಯರು. ದಶಕಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಮೆಗಾ ಧಾರಾವಾಹಿಗಳ ಮೂಲಕ ಕಮಾಲ್ ಮಾಡಿದ ನಟಿಯರು. ಇದೀಗ ಜೋಡಿಗಳಾಗಿ ಸಿಂಧು ಭೈರವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟಿ ಸುಚಿತ್ರಾ ಕೆಎಸ್ ಅವರು ಈ ಹಿಂದೆ ಕನ್ನಡದ ಮಾಂಗಲ್ಯ, ರಂಗೋಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಈ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಚಿತ್ರಾ ಅವರು ಕನ್ನಡದ ಗಂಡುಗಲಿ ಕುಮಾರ ರಾಮ, ಪ್ರೀತ್ಸೋದು ತಪ್ಪಾ, ಎಲೆಕ್ಷನ್, ಶಿವಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಸಿಂಧು ಭೈರವಿ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ.
ನಟಿ ರೇಖಾ ಕೃಷ್ಣಪ್ಪ ಖಳನಾಯಕಿ..?
ಇನ್ನು ನಟಿ ರೇಖಾ ಕೃಷ್ಣಪ್ಪ ಅವರ ಬಗ್ಗೆ ಹೇಳುವುದೇ ಬೇಡ. ಮಾಯಾಮೃಗ ಧಾರಾವಾಹಿಯಲ್ಲಿ ಶ್ರೀಲಕ್ಷ್ಮೀ ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಮಲೆನಾಡಿನ ಹುಡುಗಿ ರೇಖಾ ಅವರು ಈಶ್ವರಿ ಎಂಬ ಧಾರವಾಹಿಯಲ್ಲಿ ಮಿಂಚಿದವರು. ಇನ್ನು ಶಕ್ತಿ, ಈಶ್ವರಿ, ಬಾಳು, ಬೆಳಗಿತು, ಮಾಯಾಮೃಗ ಸೇರಿದಮತೆ ಸುಮಾರು 50ಕ್ಕೂ ಅಧಿಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಲ್ಲಿ ನಟಿ ರೇಖಾ ಕೃಷ್ಣಪ್ಪ ಅವರು ಅಭಿನಯಿಸಿದ್ದಾರೆ. ಸದ್ಯ ಉದಯ ಟಿವಿಯ ಸಿಂಧುಭೈರವಿ ಧಾರವಾಹಿಯ ಮೂಲಕ ಖಳನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
ಸಿಂಧುಭೈರವಿ ನಾಯಕ-ನಾಯಕಿ ಯಾರು..?
ಇನ್ನು ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿ ಇಂಚರಾ ಶೆಟ್ಟಿ ಕಾಣಿಸಿಕೊಂಡಿದ್ದು, ಸದ್ಯ ಇವರು ತೆಲುಗಿನ ಬೊಮ್ಮರಿಲೂ ಸೀರಿಯಲ್ ನಲ್ಲೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಇವರೊಂದಿಗೆ ನಟಿ ಚಂದನಾ ರಾಘವೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ನಾಯಕನ ಪಾತ್ರದಲ್ಲ ಮನೆದೇವ್ರು ಧಾರಾವಾಹಿಯ ಅಜಯ್ ಕಾಣಿಸಿಕೊಂಡಿದ್ದು, ನಟ ಬಾಲರಾಜ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಧಾರಾವಾಹಿಯ ಪ್ರಸಾರದ ಬಗ್ಗೆ ಇನ್ನು ಮುಂದೆ ಅಷ್ಟೇ ತಿಳಿದು ಬರಬೇಕಿದೆ.


Click it and Unblock the Notifications











