Vadhu ; ವಧು ಧಾರಾವಾಹಿಯಲ್ಲಿ ನಟಿಸುತ್ತಿರುವ ನಾಯಕ ಮತ್ತು ನಾಯಕಿ ಯಾರು ಗೊತ್ತಾ..?
ಇದೇ ಸೋಮವಾರದಿಂದ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ. ಅದೇ ವಧು. ಡಿವೋರ್ಸ್ ಲಾಯರ್ ನ ಮದುವೆ ಕಥೆ ಇದಾಗಿದೆ. ಈ ಧಾರಾವಾಹಿಯ ಮೊದಲ ಪ್ರೊಮೋದಲ್ಲಿ ಟಿಎನ್ ಸೀತಾರಾಮ್ ಅವರು ಕಾಣಿಸಿಕೊಂಡಿದ್ದರು. ಹೊಸದಾಗಿ ಲಾಯರ್ ಆಗಿ ಜೀವನ ಆರಂಭಿಸುತ್ತಿರುವ ವಧುವಿಗೆ ಶುಭ ಕೋರಿದ್ದರು. ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಆಸೆಯಿಂದ ಮಗಳಿಗೆ ವಧು ಎಂದು ಹೆಸರಿಟ್ಟಿದ್ದು, ವಧು ಡಿವೋರ್ಸ್ ಲಾಯರ್ ಆಗಿ ಕೆಲಸವನ್ನು ಆರಂಭಿಸಿದ್ದಾಳೆ.
ತುಂಬು ಕುಟುಂಬದಲ್ಲಿರುವ ವಧುವಿನ ಅತ್ತಿಗೆಗೆ ಮೊದಲು ಈ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಗಾಕಿದರೆ ಸಾಕು ಎಂಬಂತೆ ತಲೆಕೆಡಿಸಿಕೊಂಡಿದ್ದಾಳೆ. ಇದೇ ವೇಳೆಗೆ ಸಾರ್ಥಕ್ ತನಗೆ ಡಿವೋರ್ಸ್ ಬೇಕು ಎಂದು ವಧು ಮನೆಯ ಬಾಗಿಲನ್ನು ತಟ್ಟಿದ್ದಾನೆ. ವಧು ಡಿವೋರ್ಸ್ ಲಾಯರ್ ಆಗಿದ್ದರೂ ದಾಂಪತ್ಯವನ್ನು ಮುರಿಯುವ ಬದಲು ಆದಷ್ಟು ಜೋಡಿಗಳನ್ನು ಒಂದು ಮಾಡುವ ಆಸೆಯನ್ನು ಹೊಂದಿದ್ದಾಳೆ. ಈಗ ಸಾರ್ಥಕ್ ಮತ್ತು ಪ್ರಿಯಾಂಕಾಳ ಡಿವೋರ್ಸ್ ಕೇಸ್ ತೆಗೆದುಕೊಂಡಿದ್ದು, ಇಬ್ಬರನ್ನೂ ಬೇರೆ ಮಾಡುತ್ತಾಳಾ ಅಥವಾ ಒಂದು ಮಾಡಲು ಹೋಗಿ ಸಾರ್ಥಕ್ ಜೊತೆಗೆ ಸಪ್ತಪದಿ ತುಳಿಯುತ್ತಾಳಾ ಎಂಬುದೇ ಪ್ರಶ್ನೆಯಾಗಿದೆ.

ನಾಯಕ ನಟ ಅಭಿಷೇಕ್ ಹಿನ್ನೆಲೆ
ಇನ್ನೂ ಈ ಧಾರಾವಾಹಿಯ ನಾಯಕ ಸಾರ್ಥಕ್ ನಿಜವಾದ ಹೆಸರು ಅಭಿಷೇಕ್ ಶ್ರೀಕಾಂತ್. ಅಭಿಷೇಕ್ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸರಿಸುಮಾರು 70ಕ್ಕೂ ಅಧಿಕ ಆಡಿಷನ್ ಗಳನ್ನು ನೀಡಿರುವ ಅಭಿಷೇಕ್ ಗೆ ಈ ವಧು ಧಾರಾವಾಹಿಯು ಕೆರಿಯರ್ ಬದುಕಿನಲ್ಲಿ ಹೊಸ ತಿರುವನ್ನು ನೀಡುವ ನಿರೀಕ್ಷೆ ಇದೆ. ಇನ್ನು ನಟ ಅಭಿಷೇಕ್ ಬೆಂಗಳೂರಿನವರೇ ಆಗಿದ್ದು, ಇಂಜಿನಿಯರಿಂಗ್ ಓದಿದ್ದರೂ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಕಿರುತರೆಯಲ್ಲಿ ಶಾಂತಂ ಪಾಪಂ, ಯಜಮಾನಿ, ಲಕ್ಷಣ, ನನ್ನ ದೇವರು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದು, ಇದೀಗ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೋಟಿ ಎಂಬ ಸಿನಿಮಾದಲ್ಲೂ ಅಭಿಷೇಕ್ ಅವರು ನಟಿಸಿದ್ದಾರೆ.
ಕನ್ನಡ ಪ್ರೇಮಿ ಸೋನಿ ಮುಲೇವಾ
ಪ್ರೊಮೋದಲ್ಲಿ ಡಿವೋರ್ಸ್ ಪಡೆಯಲು ಮೇಕಪ್ ಮಾಡಿಕೊಳ್ಳುತ್ತಿರುವ ಪ್ರಿಯಾಂಕಾಳ ನಿಜವಾದ ಹೆಸರು ಸೋನಿ ಮುಲೇವಾ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಮಹಾನಟಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ರಾಜಸ್ಥಾನದವರಾದ ನಟಿ ಸೋನಿ ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರಿನಲ್ಲಿಯೇ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಹೊಂದಿರುವ ನಟಿ ಡಿಪ್ಲೋಮಾ ಇನ್ ಥಿಯೇಟರ್ ಆರ್ಟ್ಸ್ ಮಾಡಿಕೊಂಡಿದ್ದಾರೆ. ಅಲ್ಲದೇ, ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿದ್ದು, ಪಾರು ಮತ್ತು ಹಿಟ್ಲರ್ ಕಲ್ಯಾಣ ಸೀರಿಯಲ್‌ಗೆ ಆಡಿಷನ್ ಕೂಡ ನೀಡಿದ್ದರಂತೆ. ಸದ್ಯ ವಧು ಧಾರಾವಾಹಿಯಲ್ಲಿ ನಟಿಸಿದ್ದು, ಸೋನಿ ಅವರ ಆಸೆಗಳು ನೆರವೇರಲಿ ಎಂದು ಹಾರೈಸೋಣ.
ನಾಯಕಿ ದುರ್ಗಶ್ರೀ ಪ್ರಾಜೆಕ್ಟ್ ಗಳು
ವಧು ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದುರ್ಗಶ್ರೀ ಅವರನ್ನು ಕಿರುತೆರೆಗೆ ಪರಿಚಯ ಮಾಡಿಸಿದ್ದೆ ಪುನೀತ್ ರಾಜ್ ಕುಮಾರ್. ನಟಿ ದುರ್ಗಶ್ರೀ ಅವರು ನೇತ್ರಾವತಿ ಎಂಬ ಸೀರಿಯಲ್ ನಲ್ಲಿ ನಟಿಸಿದ್ದರು. ಇದನ್ನು ಹೊರತು ಪಡಿಸಿ ನಟಿ ದುರ್ಗಶ್ರೀ ಅವರು ತೆಲುಗು ಕಿರುತೆರೆಯಲ್ಲಿ ಚಿರಪರಿಚಿತರಾಗಿದ್ದಾರೆ. ಈಗಾಗಲೇ ಜೆಮಿನಿ ಟಿವಿಯಲ್ಲಿ ಅರ್ಧಾಂಗಿ, ಸ್ಟಾರ್ ಮಾದಲ್ಲಿ ಮಾಧುರನಗಾರಿಲೊ ಹಾಗೂ ಜೀ ತೆಲುಗು ವಾಹಿನಿಯಲ್ಲಿ ವೈಷ್ಣವಿ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಚಿತ್ರದುರ್ಗದ ದುರ್ಗಶ್ರೀ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಬಿಕಾಂ ಓದಿರುವ ನಟಿ ದುರ್ಗಶ್ರೀ ಅವರು ಸದ್ಯ ವಧು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











