New Year 2025 ; ಹೊಸ ಮನೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ಕಿರುತೆರೆ ನಟಿಯರು ಇವರು..!
ಅಂತೂ ಇಂತೂ 2024ಕ್ಕೆ ಮುಕ್ತಾಯ ಹೇಳಿ 2025ಕ್ಕೆ ಸ್ವಾಗತ ಕೋರಿದ್ದಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಹಲವರ ಮನೆಯಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದು, ಇಂದು ತಿಂಡಿ, ಊಟಕ್ಕೆ ಸಿಹಿ ತಯಾರಿಸಿ ಎಂಜಾಯ್ ಮಾಡುತ್ತಿದ್ದಾರೆ. 2025ಕ್ಕೆ ಕಾಲಿಟ್ಟಿರುವ ಕನ್ನಡ ಕಿರುತೆರೆಯ ಕೆಲ ನಟಿಯರು ಹೊಸ ಮನೆಯಲ್ಲಿ ಹೊಸ ವರ್ಷವನ್ನು ವೆಲ್ಕಂ ಮಾಡಿದ್ದಾರೆ. 2024ರಲ್ಲಿ ಕನ್ನಡ ಕಿರುತೆರೆಯ ಕೆಲ ನಟಿಯರು ಹೊಸ ಮನೆಯನ್ನು ಖರೀದಿಸಿ ಸಂಭ್ರಮಿಸಿದ್ದರು. 2024ರಲ್ಲಿ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಂಡ ಆ ನಟಿಯರು ಯಾರು ಎಂಬುದನ್ನು ನೋಡೋಣ ಬನ್ನಿ.
ಹೊಸ ಮನೆಯಲ್ಲಿ ಸಂಭ್ರಮಿಸಿದ ನಟಿ ಶೋಭಾ
2024ರಲ್ಲಿ ಕನ್ನಡ ಚಿತ್ರರಂಗದ ಹಲವು ತಾರೆಯರು ತಮ್ಮ ತಮ್ಮ ಸ್ವಂತ ಕನಸಿನ ಗೂಡಿಗೆ ಎಂಟ್ರಿ ಕೊಟ್ಟಿದ್ದು, ಈಗ ಅದೇ ಹೊಸ ಮನೆಯಲ್ಲಿ 2025 ಅನ್ನು ವೆಲ್ಕಂ ಮಾಡಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ಶೋಭಾ ಅವರು ಕನ್ನಡ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ನಟಿ ಶೋಭಾ ಶೆಟ್ಟಿ ಅವರು ಹೈದರಾಬಾದ್ ನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದರು. ಅಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ಫಲಾಟ್ ಅನ್ನು ಖರೀದಿ ಮಾಡಿದ್ದರು. ಇದರ ಗೃಹ ಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿ, ತಮ್ಮ ಕನಸು ನನಸಾದ ಕ್ಷಣಗಳ ಬಗ್ಗೆ ಯೂಟ್ಯೂಬ್ ಚಾನೆಲ್ ನಲ್ಲಿ ವ್ಲಾಗ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದರು.

ಪತಿ ಜೊತೆಗೆ ಹೊಸ ಮನೆಯಲ್ಲಿ ಪ್ರಿಯಾಂಕ ಚಿಂಚೋಳಿ
ಪೌರಾಣಿಕ ಪಾತ್ರಗಳಿಂದ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಇನ್ನು ಹರ ಹರ ಮಹಾದೇವ, ಜೈ ಹನುಮಾನ್, ಮನಸಾರೆ ಧಾರಾವಾಹಿ ಸೇರಿದಂತೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮದುವೆಯಾದ ಬಳಿಕ ಪತಿ ರಾಕೇಶ್ ಅವರೊಂದಿಗೆ ಲಂಡನ್ ಗೆ ಹೋಗಿ ನೆಲೆಸಿದ್ದ ಪ್ರಿಯಾಂಕಾ ಚಿಂಚೋಳಿ ಅವರು ಕಳೆದ ವರ್ಷ ಪತಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. 2024ರಲ್ಲಿ ಹೊಸ ಮನೆಯನ್ನು ಖರೀದಿ ಮಾಡಿ, ಇಬ್ಬರೂ ಕನಸು ನನಸಾಯ್ತು ಎಂದು ಹೇಳಿದ್ದರು. ಸದ್ಯ ಬೆಂಗಳೂರಿನ ಸ್ವಂತ ಮನೆಯಲ್ಲೇ ನೆಲೆಸಿರುವ ಪ್ರಿಯಾಂಕ ಹೊಸ ವರ್ಷಕ್ಕೆ ವೆಲ್ಕಂ ಮಾಡಿದ್ದಾರೆ.
ಹೊಸ ಮನೆ ಖರೀದಿಸಿದ ನಟಿಯರು
ಇನ್ನು ಸೀತಾ ರಾಮ ಧಾರಾವಾಹಿಯಲ್ಲಿ ನಟಿಸಿರುವ ಪ್ರಿಯ ಪಾತ್ರಧಾರಿ ನಟಿ ಮೇಘನಾ ಶಂಕರಪ್ಪ ಅವರು ಕೂಡ ಕಳೆದ ವರ್ಷ ಹೊಸ ಮನೆಯನ್ನು ಖರೀದಿ ಮಾಡಿ ಗೃಹಪ್ರವೇಶ ನೆರವೇರಿಸಿದ್ದರು. ಅಲ್ಲದೇ, ಮದುವೆಯಾಗುತ್ತಿರುವ ಖುಷಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು. 2025ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ಮೇಘನಾ ಅವರು ಸದ್ಯ ಹೊಸ ಮನೆಯಲ್ಲಿ ನೂತನ ವರ್ಷಕ್ಕೆ ಹಾಯ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ, ಶ್ರೀರಸ್ತು ಶುಭಮಸ್ತು ಧಾರಾವಾಹಿಯ ತುಳಸಿ ಅಲಿಯಾಸ್ ಸುಧಾರಾಣಿ ಅವರು ಕೂಡ 2024ರಲ್ಲಿ ಹೊಸ ಮನೆಗೆ ಒಡತಿಯಾದರು. ನೂತನ ನಿವಾಸಕ್ಕೆ ಶಿಫ್ಟ್ ಆದ ಸುಧಾರಾಣಿಯವರು, ತಮ್ಮ ಪತಿ ಮತ್ತು ಮಗಳ ಜೊತೆಗೆ ಹೊಸ ವರ್ಷ 2025 ಅನ್ನು ವೆಲ್ಕಂ ಮಾಡಿದ್ದಾರೆ. ಈ ಹೊಸ ಮನೆಗೆ ನಟಿ ಸುಧಾರಾಣಿ ಅವರು ಆಲಯಂ ಎಂದು ಹೆಸರಿಟ್ಟಿದ್ದಾರೆ.
ಹೊಸ ಮನೆಯಲ್ಲಿ ಹೊಸ ವರ್ಷದ ಸಂಭ್ರಮ
ಹಿರಿಯ ನಟಿ ಸಂಗೀತಾ ಅನಿಲ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದು. ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬದುಕು, ದಂಡಪಿಂಡಗಳು, ಸೇವಂತಿ, ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2024ರಲ್ಲಿ ಹೊಸ ಮನೆ ಖರೀದಿಸಿದರು. ಗೃಹಪ್ರವೇಶ ನೆರವೇರಿಸಿ ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದರು. ಹೊಸ ಮನೆಗೆ ಕಾಲಿರಿಸಿರುವ ನಟಿ ಸಂಗೀತಾ ಅನಿಲ್ ಅವರು 2025 ಅನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಇನ್ನು ನಟಿ, ನಿರೂಪಕಿ ಅನುಪಮಾ ಗೌಡ ಅವರು ಕೂಡ ಹೊಸ ಮನೆಯನ್ನು ಖರೀದಿಸಿದ್ದು, ಸದ್ಯ ಅವರು ಬಾಲಿ ಪ್ರವಾಸದಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ನಟಿ ತಾರಾ, ಮೇಘನಾ ರಾಜ್, ಶೃತಿ, ಭಾವನಾ ಬೆಳೆಗೆರೆ ಸೇರಿದಂತೆ ಹಲವು ನಟಿಯರು 2024ರಲ್ಲಿ ಹೊಸ ಮನೆಯ ಕನಸನ್ನು ನನಸು ಮಾಡಿಕೊಂಡು ಅದೇ ಮನೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ.


Click it and Unblock the Notifications











