Sony Mulewa ; ಅಮ್ಮ ಅಲ್ಲ ಹೆಂಡತಿ ಮೊದಲು ಎಂದು ಡಿವೋರ್ಸ್‌ಗಾಗಿ ಪೀಡಿಸುತ್ತಿರುವ ಪ್ರಿಯಾಂಕಾ ಹೇಳಿದ್ದೇನು?
ನನಗೆ ಕಂಪನಿಯಲ್ಲಿ ಅರ್ಧ ಪಾಲು ಬೇಕೇ ಬೇಕು ಎಂದು ಹಠ ಹಿಡಿದು, ಡಿವೋರ್ಸ್ ಗಾಗಿ ಪೀಡಿಸುತ್ತಿರುವ ಪ್ರಿಯಾಂಕ, ಸಾರ್ಥಕ್ ಮತ್ತು ಅವರ ತಾಯಿ ಯಶೋಮತಿ ಜೀವನವನ್ನು ಹಾಳು ಮಾಡಲು ಮುಂದಾಗಿದ್ದಾಳೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ವಧು ಧಾರಾವಾಹಿ ಇದಾಗಿದ್ದು, ಸದ್ಯ ಸಾರ್ಥಕ್ ನನ್ನು ಮದುವೆಯಾಗಿ ಡಿವೋರ್ಸ್ ಬೇಕು ಎಂದು ಪೀಡಿಸುತ್ತಿದ್ದಾಳೆ. ವಧು ಧಾರಾವಾಹಿಯಲ್ಲಿ ಪ್ರಿಯಾಂಕ ಪಾತ್ರ ನೆಗೆಟಿವ್ ಆಗಿದ್ದರೂ ಕೂಡ, ಈ ಪಾತ್ರವನ್ನು ಮಾಡುವುದು ಬಹಳ ಚಾಲೆಂಜಿಂಗ್ ಎಂದು ನಟಿ ಸೋನಿ ಮುಲೇವಾ ಅವರು ಹೇಳಿದ್ದಾರೆ.
ಪ್ರಿಯಾಂಕ ಅಸಲಿ ಹೆಸರು ಸೋನಿ
ಹೌದು, ಪ್ರಿಯಾಂಕ ಪಾತ್ರಕ್ಕೆ ಜೀವ ತುಂಬಿರುವ ನಟಿಯ ಹೆಸರು ಸೋನಿ ಮುಲೇವಾ. ಕಿರುತೆರೆಗೆ ಹೊಸಬರಲ್ಲದಿದ್ದರೂ, ಸದ್ಯ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಈ ಹಿಂದೆ ಗಟ್ಟಿಮೇಳ, ಮುದ್ದುಮಣಿಗಳು ಧಾರಾವಾಹಿಯಲ್ಲಿ ನಟಿಸಿದ್ದರು. ಮೂಲತಃ ರಾಜಸ್ಥಾನದ ಹುಡುಗಿಯಾಗಿರುವ ನಟಿ ಸೋನಿ ಮುಲೇವಾ ಅವರಿಗೆ ಕನ್ನಡದ ಮೇಲೆ ಅಪಾರವಾದ ಅಭಿಮಾನವಿದೆ. ಸೋನಿ ಅವರಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದಾರೆ. ಇವರ ಹೆಸರು ಆಕಾಶ್ ಮತ್ತು ಭೂಮಿಕಾ ಎಂದು ಹೇಳಲಾಗಿದೆ. ಕನ್ನಡದ ನಟಿ ಆಗಲೇಬೇಕು ಎಂದು ವಿಜಯ ವಿಠ್ಠಲ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಬಿಎ ಪದವಿ ಪಡೆದಿರುವ ಸೋನಿ ಮುಲೇವಾಗೆ ಎಂಎ ಮಾಡುವ ಆಸೆ ಇದೆ ಎಂದಿದ್ದಾರೆ. ಥಿಯೇಟರ್ ಆರ್ಟ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಈ ನಟಿಯ ಗುರು ಮಂಡ್ಯ ರಮೇಶ್.

ಚಾಲೆಂಜಿಂಗ್ ಪಾತ್ರ ಮಾಡುತ್ತಿರುವ ನಟಿ ಸೋನಿ
ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಮಹಾನಟಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಪಾರು ಮತ್ತು ಹಿಟ್ಲರ್ ಕಲ್ಯಾಣ ಸೀರಿಯಲ್ ಗೆ ಆಡಿಷನ್ ಕೂಟ್ಟು ರಿಜೆಕ್ಟ್ ಆದವರು ಇದೀಗ ವಧು ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಪ್ರಿಯಾಂಕ ಪಾತ್ರ ಬಹಳ ವಿಚಿತ್ರವಾಗಿದ್ದು, ಕ್ಷಣಕ್ಕೊಂದು ರೀತಿ ರಿಯಾಕ್ಟ್ ಮಾಡುವ ಪಾತ್ರವಾಗಿದೆ. ಸೈಲೆಂಟ್ ಆಗಿದ್ದುಕೊಂಡೇ ತನಗೆ ಬೇಕಾದಂತೆ ನಡೆದುಕೊಳ್ಳುವ ಈ ಪಾತ್ರವನ್ನು ನಿಭಾಯಿಸುವುದು ಬಹಳ ಕಷ್ಟ. ಇದು ನನಗೆ ಬಹಳ ಚಾಲೇಂಜಿಂಗ್ ಆಗಿದೆ.
ಸುಸ್ತು ಮಾಡುವ ಕಾಸ್ಟ್ಯೂಮ್
ಅಲ್ಲದೇ ಈ ಪಾತ್ರಕ್ಕಾಗಿ ಧರಿಸುವ ಕಾಸ್ಟ್ಯೂಮ್ ಕೂಡ ಕೊಂಚ ಹೆವ್ವಿಯಾಗಿದ್ದು, ಶೂಟಿಂಗ್ ಮುಗಿದ ಕೂಡಲೇ ಕಾಸ್ಟ್ಯೂಮ್ ಬದಲಾಯಿಸಿದಾಗ ಉಸ್ಸಪ್ಪ ಎನ್ನಬೇಕು ಅನಿಸುತ್ತದೆ. ಶೂಟಿಂಗ್ ಮುಗಿಯುವುದರೊಳಗೆ ಕಾಸ್ಟ್ಯೂಮ್ ಸುಸ್ತು ಮಾಡಿ ಬಿಡುತ್ತದೆ ಎಂದು ಸ್ವತಃ ಸೋನಿ ಅವರೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗಿರುವ ಸೋನಿ ಅವರು, ನಿತ್ಯ ಶೂಟಿಂಗ್ ಗಾಗಿ ತಮ್ಮದೇ ರೀತಿಯಲ್ಲಿ ಒಂದಷ್ಟು ತಯಾರಿಗಳನ್ನು ಕೂಡ ಮಾಡಿಕೊಳ್ಳುತ್ತಾರಂತೆ.
ಮಾಡೆಲ್ ಕಂ ರಂಗಭೂಮಿ ನಟಿ
ಇನ್ನು ನಟಿ ಸೋನಿ ಮುಲೇವಾ ಅವರು ಜೆರ್ಸಿ ನಂ.10 ಎಂಬ ಸಿನಿಮಾದಲ್ಲಿ ನಟಿಸಿದ್ದು, ನಟ ಚಂದನ್ ಆಚಾರ್ಯ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ, ಮಾಡೆಲ್ ಕೂಡ ಆಗಿರುವ ನಟಿ ಸೋನಿ ಅವರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದು,ಅಂತಿಮ ನಾಲ್ಕರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಸೋನಿ ಅವರು ಮಿಸ್ ಟೀನ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ಬಳಿಕ ಮಿಸ್ ಇಂಡಿಯಾ ಎಲೈಟ್ ಮಾಡೆಲ್ ಸ್ಫರ್ಧೆಯಲ್ಲಿ ಜಯಗಳಿಸಿದ್ದರು. ಫೇಸ್ ಆಫ್ ಮೈಸೂರು, ಮಿಸ್ ಟೀನ್ ಇಂಟರ್ ನ್ಯಾಷನಲ್ ಸೌತ್ ಇಂಡಿಯಾ ಹಾಗೂ 2018ರಲ್ಲಿ ಗ್ಲೆನ್ ಆನನ್ ಸೂಪರ್ ಮಾಡೆಲ್ ಸ್ಫರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಇದನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ನಾಟಕಗಳಿಗೆ ಬಣ್ಣ ಹಚ್ಚಿ ಖ್ಯಾತಿ ಗಳಿಸಿದ್ದಾರೆ.


Click it and Unblock the Notifications