ವರಲಕ್ಷ್ಮೀಯಾಗಿ ಮಿಂಚುತ್ತಿರುವ ನಟಿ ಪ್ರಜ್ಞಾ ಭಟ್ ಯಾರು, ಇವರ ಹಿನ್ನೆಲೆಯೇನು..?
ಮಲೆನಾಡಿನ ಕುವರಿಗಳು ಹೆಚ್ಚಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ನಟಿ ಸುಷ್ಮಾ ರಾವ್, ಶರ್ಮಿತಾ ಗೌಡ, ಮಹತಿ ವೈಷ್ಣವಿ, ಶ್ವೇತಾ ಪ್ರಸಾದ್ ಸೇರಿದಂತೆ ಹಲವು ನಟಿಯರು ಮಲೆನಾಡಿನ ಬೆಡಗಿಯರು. ಮಲೆನಾಡಿನ ಚೆಲುವೆಯರು ಭಾಷೆ, ಸವಾಲು ದಾಟಿ, ಕನ್ನಡ ಮಾತ್ರವಲ್ಲದೇ, ಪರಭಾಷೆಗಳಲ್ಲೂ ಮಿಂಚಿದ್ದಾರೆ. ಎಲ್ಲೆಲ್ಲೂ ತಮ್ಮ ತವರಿನ ಘಮಲನ್ನು ಪಸರಿಸಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ. ಈಗಾಗಲೇ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಈ ನಟಿ ಸದ್ಯ ಸುಬ್ಬ ತಂಗಿಯಾಗಿ ಮಿಂಚುತ್ತಿದ್ದಾರೆ.
ತೆಲುಗಿನ ರಿಮೇಕ್ ಧಾರಾವಾಹಿ ಕನ್ನಡದಲ್ಲೂ ಹಿಟ್
ಜೀ ಕನ್ನಡ ವಾಹಿನಿಯಲ್ಲಿಯಲ್ಲಿ ಸದ್ಯ ತೆಲುಗಿನ ಅಮ್ಮಾಯಿಗಾರು ಧಾರಾವಾಹಿಯನ್ನು ರಿಮೇಕ್ ಮಾಡಲಾಗಿದೆ. ತೆಲುಗಿನಲ್ಲಿ ಅಮ್ಮಾಯಿಗಾರು ಧಾರಾವಾಹಿ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಇದರಲ್ಲಿ ಕನ್ನಡದ ನಟ-ನಟಿಯೇ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗಟ್ಟಿಮೇಳದ ನಟಿ ಅಮೂಲ್ಯ ಅಲಿಯಾಸ್ ನಿಶಾ ಮತ್ತು ನಟ ಯಶ್ವಂತ್ ಅಮ್ಮಾಯಿಗಾರು ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಈ ಧಾರಾವಾಹಿ ಜೀ ಕನ್ನಡ ವಾಹಿನಿಯ್ಲಲಿ ರಿಮೇಕ್ ಆಗಿದ್ದು, ಶ್ರಾವಣಿ ಸುಬ್ರಹ್ಮಣ್ಯ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ನಟ ಅಮೋಘ ಮತ್ತು ನಟಿ ಆಸಿಯಾ ಫಿರ್ದೋಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಪ್ರಜ್ಞಾ ಭಟ್ ನಟನೆಯನ್ನು ಮೆಚ್ಚಿದ ವೀಕ್ಷಕರು
ಧಾರಾವಾಹಿಯಂತೂ ಸಕ್ಕತ್ತಾಗಿ ಮೂಡಿ ಬರುತ್ತಿದೆ. ಅಮ್ಮಾಯಿಗಾರು ಧಾರಾವಾಹಿಯಂತೆಯೇ ಶ್ರಾವಣಿ-ಸುಬ್ರಹ್ಮಣ್ಯ ಕೂಡ ಹಿಟ್ ಆಗಿದೆ. ಇದರಲ್ಲಿ ಸುಬ್ಬು ತಂಗಿ ವರಲಕ್ಷ್ಮೀ ಪಾತ್ರದಲ್ಲಿ ನಟಿ ಪ್ರಜ್ಞಾ ಭಟ್ ಕಾಣಿಸಿಕೊಂಡಿದ್ದಾರೆ. ಪ್ರಜ್ಞಾ ಅವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದು, ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಪ್ರಜ್ಞಾ ಅವರು ಈಗ ತಮ್ಮ ನಟನೆಯ ಮೂಲಕವೇ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಮೊದಲಿನಿಂದಲೂ ಪ್ರಜ್ಞಾ ಅವರು ಮಾಡ್ರನ್ ಹಾಗೂ ಟ್ರೆಡಿಷನಲ್ ಲುಕ್ ನಲ್ಲಿ ಸಾಕಷ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಗೆ ಬಗೆಯ ಉಡುಗೆಯಲ್ಲಿ ವಿಧ ವಿಧವಾದ ಫೋಸ್ ಕೊಟ್ಟಿದ್ದಾರೆ.
ವರಲಕ್ಷ್ಮೀ ನಟನೆಯ ಧಾರಾವಾಹಿಗಳು
ಯಾಕೆಂದರೆ ಕಿರುತೆರೆಗೆ ಬರುವ ಮುನ್ನ ನಟಿ ಪ್ರಜ್ಞಾ ಭಟ್ ಅವರು ಮಾಡೆಲ್ ಕೂಡ ಆಗಿದ್ದರು. 2015 ರಲ್ಲಿ ಮಿಸ್ ಚಿಕ್ಕಮಗಳೂರು ರನ್ನರ್ ಅಪ್ ಆಗಿರುವ ಪ್ರಜ್ಞಾ ಅವರು ಮತ್ತೆ 2016ರಲ್ಲಿ ಮಿಸ್ ಕ್ವೀನ್ ಕರ್ನಾಟಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದಾದ ಬಳಿಕ ಮಂದಾರ 2 ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಪ್ರಜ್ಞಾ ಭಟ್ ಅವರು ನಟಿಸಿದ್ದಾರೆ. ಗುಂಡಗಿನ ಕನ್ನಡಕ ಧರಿಸಿ ಇದರಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮನದರಸಿ ಎಂಬ ಗೀತಚಿತ್ರದಲ್ಲೂ ಪ್ರಜ್ಞಾ ಅವರು ಬಣ್ಣ ಹಚ್ಚಿದ್ದಾರೆ. ಇದಿಷ್ಟೇ ಅಲ್ಲದೇ, ಕಲರ್ಸ್ ಕನ್ನಡದಲ್ಲಿ ಮೂಡಿ ಬಂದಿದ್ದ ಮಾಂಗಲ್ಯಂ ತಂತುನಾನೇನಾ ಧಾರಾವಾಹಿಯಲ್ಲಿ ನಾಯಕಿಯ ತಂಗಿ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ಪಾಪ ಪಾಂಡು ಸೀರಿಯಲ್ ನಲ್ಲೂ ಪ್ರಜ್ಞಾ ಅವರು ನಟಿಸಿದ್ದಾರೆ.

ಪತಿಯ ಸಹಕಾರದೊಂದಿಗೆ ಮುಂದುವರೆದ ಪಯಣ
ಇನ್ನು ನಟಿ ಪ್ರಜ್ಞಾ ಭಟ್ ಅವರು ಕಳೆದ ವರ್ ಅಕ್ಟೋಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಪತಿಯ ಹೆಸರು ನಾಗಶ್ರಿತ್ ಭಟ್. ಪತಿಯಿಂದ ನಟನೆಗೆ ಪ್ರೋತ್ಸಾಹವಿದ್ದು, ಪ್ರಜ್ಞಾ ಅವರು ಸದ್ಯ ಶ್ರಾವಣಿ ಸುಬ್ರಹ್ಮಣ್ಯಾ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಜ್ಞಾ ಅವರಿಗೆ ಕಿರುತೆರೆಯಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸೋಣ.


Click it and Unblock the Notifications











