ಬಿಗ್ ಬಾಸ್ ಗೆಲ್ಲಲು ಬಿಗ್ ಪ್ಲಾನ್; ಮನೆಯಲ್ಲಿದ್ದೇ ರಣತಂತ್ರ- ಟ್ರೋಫಿ ಗೆಲ್ಲಲು ₹16 ಲಕ್ಷ ಖರ್ಚು ಮಾಡಿದ ಸ್ಫರ್ಧಿ?
ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ ಜನಪ್ರಿಯತೆ ಕಡಿಮೆ ಆಗಲಿಲ್ಲ.
ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ''ಬಿಗ್ ಬಾಸ್'' ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಹಲವರ ಕನಸು. ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ.

ಇನ್ನೂ ''ಬಿಗ್ ಬಾಸ್'' ಮನೆಗೆ ಹೋಗಲೇಂದೇ.. ''ಬಿಗ್ ಬಾಸ್''ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ''ಬಿಗ್ ಬಾಸ್'' ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕ ಎಂದುಕೊಂಡವರು ಕೂಡ ಇದ್ದಾರೆ. ಹೀಗೆ ಅಂದುಕೊಂಡ ಹಲವು ಜನರಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಹೊರತು ಪಡಿಸಿದರೆ ಬಹುತೇಕರು ''ಬಿಗ್ ಬಾಸ್'' ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಹಣವನ್ನು ಕೂಡ ನೀರಿನಂತೆ ಚೆಲ್ಲುತ್ತಾರೆ. ತಾವು ಮನೆಯ ಒಳಗಡೆ ಹೋಗುವ ಮೊದಲು ತಮ್ಮ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲೆಂದೇ ಒಂದು ತಂಡವನ್ನು ನೇಮಕ ಮಾಡುತ್ತಾರೆ. ಕೇಳಿದಷ್ಟು ಹಣವನ್ನು ಕೂಡ ನೀಡುತ್ತಾರೆ.
ಹೀಗೆ ಸ್ಫರ್ಧಿಯಿಂದ ಹಣ ಪಡೆಯುವ ಈ ಪಿಆರ್ ತಂಡ ತಮಗೆ ಹಣ ನೀಡಿದ ವ್ಯಕ್ತಿ ''ಬಿಗ್ ಬಾಸ್'' ಮನೆಯಲ್ಲಿ ಕುಂತರು.. ನಿಂತರು.. ಸೋಶಿಯಲ್ ಮೀಡಿಯಾದಲ್ಲಿ ಮಹತ್ತರ ಸಾಧನೆ ಮಾಡಿದವರಂತೆ ವರ್ಣನೆ ಮಾಡಲು ಶುರು ಮಾಡುತ್ತೆ. ಹೂ*ಸು ಬಿಟ್ಟರೂ ಅಬ್ಬಾ ಎಂಥಾ ಸುವಾಸನೆ ಎಂದು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತೆ. ಒಂದರ್ಥದಲ್ಲಿ ಸ್ಫರ್ಧಿಗಳ ಗೆಲುವು ಮತ್ತು ಸೋಲಿನಲ್ಲಿ ಇವರ ಪಾತ್ರ ಬಹುಮುಖ್ಯವಾಗಿರುತ್ತೆ.
ಹೀಗಾಗಿಯೇ ಕನ್ನಡವೂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಅಣಬೆಯಂತೆ ಹುಟ್ಟಿಕೊಂಡ ಈ ಪಿಆರ್ ಏಜೆನ್ಸಿಗಳಿಗೆ ಎಲ್ಲಲ್ಲಿದ ಬೇಡಿಕೆ ಇದೆ. ಸದ್ಯ ಇದೇ ಏಜೆನ್ಸಿಯ ಸಹಾಯದ ಮೂಲಕ ಅನುಮೋಲ್ ಗೆದ್ದಿದ್ದಾರೆ ಎನ್ನುವ ವಾದ ಹಲವರದ್ದು. ಇದಕ್ಕೆ ಪೂರಕವಾಗಿ ಖುದ್ದು ಅನುಮೋಲ್ ಹೌದು ನಾನು ದುಡ್ಡು ಕೊಟ್ಟು ಗೆದ್ದಿದ್ದು, ಏನೀವಾಗ ? ಎಂದು ಹೇಳಿದ್ದಾರೆ.
ಹೌದು, ಅನುಮೋಲ್.. ಮೊನ್ನೆ ಮೊನ್ನೆ ಮುಕ್ತಾಯವಾದ ಮಲಯಾಳಂ ''ಬಿಗ್ ಬಾಸ್'' ಸೀಸನ್ 7ರ ವಿನ್ನರ್. ₹42.5 ಲಕ್ಷ ಹಣ ಜೊತೆಯಲ್ಲಿ ಎಸ್‌ಯುವಿ ಕಾರನ್ನು ಪಡೆದ ಅನುಮೋಲ್ ಅವರಿಗೆ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ''ಟೈಮ್ಸ್ ಆಫ್ ಇಂಡಿಯಾ'' ವರದಿಯ ಪ್ರಕಾರ ದಿನವೊಂದಕ್ಕೆ ₹50,000 ಸಂಭಾವನೆ ನೀಡಲಾಗಿತ್ತು. ಒಂದು ವೇಳೆ ಇದು ನಿಜಾ ಆಗಿದ್ದರೆ.. 98 ದಿನ ''ಬಿಗ್ ಬಾಸ್'' ಮನೆಯಲ್ಲಿ ಇದ್ದ ಅನುಮೋಲ್ ಹೆಚ್ಚು ಕಡಿಮೆ ಒಂದು ಕೋಟಿಗೂ ಅಧಿಕ ಹಣವನ್ನು ''ಬಿಗ್ ಬಾಸ್'' ಮೂಲಕ ಗಳಿಸಿದ್ದಾರೆ.

ಇಂಥಾ ಅನುಮೋಲ್ ತಮ್ಮ ಬಗ್ಗೆ ಸಕಾರಾತ್ಮಕ ಪ್ರಚಾರ ಮಾಡಲು ವ್ಯಕ್ತಿಯೊಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆ. ಅನುಮೋಲ್ ಅವರೇ ನನಗೆ ಈ ವಿಷಯ ಹೇಳಿದ್ದಾರೆ ಎಂದು ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಮತ್ತೊಬ್ಬ ಸ್ಫರ್ಧಿ ಬಿನ್ನಿ ಸೆಬಾಸ್ಟಿಯನ್ ಹೇಳಿದ್ದರು. 16 ಲಕ್ಷ ಹಣಕ್ಕೆ ಅನುಮೋಲ್ ಪಿಆರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ. 50 000 ಅಡ್ವಾನ್ಸ್ ಕೂಡ ನೀಡಿದ್ದಾರೆ ಎಂದು ಬಿನ್ನಿ ಹೇಳಿದ್ದರು. ಮತ್ತೊಬ್ಬ ಸ್ಫರ್ಧಿ ಆದಿಲಾ ಕೂಡ ಪಿಆರ್ ಕ್ಯಾಂಪೇನ್ ಮಾಡಲು ಹಣ ಚೆಲ್ಲಿ ಇಲ್ಲಿ ಹಣ ಗೆಲ್ಲಲು ಅನುಮೋಲ್ ಬಂದಿದ್ದಾರೆ ಎಂದು ಆರೋಪ ಮಾಡಿದ್ದರು.
ಈ ಆರೋಪಕ್ಕೆ ಪ್ರಶಸ್ತಿ ಸಮೇತ ಹೊರ ಬಂದಿರುವ ಅನುಮೋಲ್ ಉತ್ತರ ನೀಡಿದ್ದಾರೆ. ನಾನು ನನ್ನ ಕುರಿತು ಪ್ರಚಾರ ಮಾಡಲು ಪಿಆರ್ ಒಬ್ಬರನ್ನು ಆಯ್ಕೆ ಮಾಡಿದ್ದು ನಿಜಾ, ಅವರಿಗೆ ದುಡ್ಡು ನೀಡಿದ್ದು ಕೂಡ ನಿಜಾ. ಆದರೆ.. ನಮ್ಮ ನಡುವೆ ಒಪ್ಪಂದ 16 ಲಕ್ಷಕ್ಕೆ ಅಲ್ಲ ಕೇವಲ 1 ಲಕ್ಷಕ್ಕೆ ಮಾತ್ರ ಆಗಿತ್ತು ಎಂದು ಹೇಳಿದ್ದಾರೆ. ಒಂದು ಲಕ್ಷದಲ್ಲಿ ಮನೆಯ ಒಳಗಡೆ ಬರುವ ಮೊದಲು ನಾನು ನನ್ನ ಕುರಿತು ಪ್ರಚಾರ ಮಾಡಲು ಪಿಆರ್‌ಗೆ 50,000 ಮುಂಗಡ ಹಣ ನೀಡಿದ್ದೇ ಎಂದು ಹೇಳಿದ್ದಾರೆ.
ಮುಂದುವರೆದು 16 ಲಕ್ಷ ಹಣ ಪ್ರಚಾರಕ್ಕೆ ನೀಡುವಷ್ಟು ನನ್ನ ಬಳಿ ಇದ್ದಿದ್ದರೆ ನಾನ್ಯಾಕೆ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇ ಎಂದು ಕೂಡ ಅನುಮೋಲ್ ಹೇಳಿದ್ದಾರೆ. ಸದ್ಯ ಅನುಮೋಲ್ ಅವರ ಈ ಮಾತು ಮಲಯಾಳಂ ಕಿರುತೆರೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಹಣ ಇದ್ದರೆ ಏನೂ ಬೇಕಾದರೂ ಕೊಂಡುಕೊಳ್ಳಬಹುದು ಎನ್ನುವುದಕ್ಕೆ ಅನುಮೋಲ್ ಬಿಗ್ ಬಾಸ್ ಪ್ರಶಸ್ತಿ ಗೆದ್ದಿದ್ದಕ್ಕೆ ಸಾಕ್ಷಿ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











