ಮದುವೆಯಾದರೂ ಬೇರೆ ಬೇರೆ ವಾಸ;ಬಿಗ್ ಬಾಸ್ ಚೆಲುವೆಯ ದಾಂಪತ್ಯದಲ್ಲಿ ಬಿರುಕು? ಹಣದಾಸೆ - ಹೇಳಿದ್ದೇನು ನಟಿ ?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ.
ಆ ಪೈಕಿ ತಮ್ಮ ಕುರಿತು ಕೆಲ ಸುದ್ದಿಗಳನ್ನು ಕಂಡು.. ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ಮತ್ತೂ ಕೆಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿಸಲಾದ ಇಲ್ಲ ಸಲ್ಲದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಸುದ್ದಿ ಹಬ್ಬಿಸಿದವರ ಕುರಿತು ವ್ಯಂಗ್ಯವಾಡುತ್ತಾರೆ. ಉದಾಹರಣೆಗೆ ದಿವ್ಯಾ ಅಗರ್ವಾಲ್.

ಹೌದು, ದಿವ್ಯಾ ಅಗರ್ ವಾಲ್ ಹಿಂದಿ ಮತ್ತು ಮರಾಠಿ ಕಿರುತೆರೆ ಮತ್ತು ಬೆಳ್ಳಿತೆರೆಯ ಚೆಲುವೆ. ''MTV ಸ್ಪ್ಲಿಟ್ಸ್‌ವಿಲ್ಲಾ 10''ರಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ ದಿವ್ಯಾ, ''MTV ಏಸ್ ಆಫ್ ಸ್ಪೇಸ್'' (Ace of Space 1) ಕಾರ್ಯಕ್ರಮದಲ್ಲಿ ವಿಜೇತರಾಗಿ ಹೊರ ಹೊಮ್ಮಿದರು. ''ಬಿಗ್ ಬಾಸ್ OTT'' ಸೀಸನ್ 1 ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದರು. ''ದಿ 50'' (The 50) ರಿಯಾಲಿಟಿ ಶೋನಲ್ಲಿ ಕೂಡ ಪ್ರಬಲ ಸ್ಪರ್ಧಿಯಾಗಿ ಮಿಂಚಿದರು.
''ರಾಗಿಣಿ ಎಂಎಂಎಸ್ ರಿಟರ್ನ್ಸ್ 2''.. ''ಕಾರ್ಟೆಲ್''.. ''ಅಭಯ್ 3''.. ''ತತ್ಲುಬಾಜ್''.. ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿರುವ ದಿವ್ಯಾ ಅಗರ್ವಾಲ್ ನೃತ್ಯ ನಿರ್ದೇಶಕಿ ಕೂಡ ಹೌದು. ಇಂಥಾ ದಿವ್ಯಾ ಫೆಬ್ರವರಿ 20-2020ರಂದು ಮುಂಬೈನ ಪ್ರಸಿದ್ಧ ಹೋಟೆಲ್ ಉದ್ಯಮಿ, ತಮ್ಮ ಬಹುಕಾಲದ ಗೆಳೆಯ ಮತ್ತು ಪ್ರಿಯಕರ ಅಪೂರ್ವ ಪಡ್ಗಾಂವ್ಕರ್ ಅವರ ಜೊತೆ ಮದುವೆಯಾದರು.
ಆದರೆ.. ಈಗ ಇಬ್ಬರು ಜೊತೆಯಲ್ಲಿ ವಾಸ ಮಾಡುತ್ತಿಲ್ಲ. ಬದಲಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇವರ ಈ ಅಂತರ ಹಲವರ ಚಿಂತೆಯನ್ನು ಹೆಚ್ಚಿಸಿದೆ. ಇಬ್ಬರ ದಾಂಪತ್ಯದಲ್ಲಿ ಕೇವಲ ಎರಡೇ ವರ್ಷಕ್ಕೆ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಷ್ಟೇ ಅಲ್ಲ ಅಪೂರ್ವ ಪಡ್ಗಾಂವ್ಕರ್ ಅವರನ್ನು ದಿವ್ಯಾ ಮದುವೆಯಾಗಿದ್ದು ಕೇವಲ ಹಣಕ್ಕಾಗಿ ಮಾತ್ರ ಎಂದೆಲ್ಲ ಕೆಲವರು ಹೀಯಾಳಿಸಲು ಶುರು ಮಾಡಿದ್ದಾರೆ. ದಿವ್ಯಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಎಲ್ಲ ಅಂತೆ ಕಂತೆಯ ಮಾತುಗಳಿಗೆಲ್ಲಾ ದಿವ್ಯಾ ಅಗರ್ವಾಲ್ ಉತ್ತರ ನೀಡಿದ್ದಾರೆ.
ಈ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿವ್ಯಾ ಹೌದು ನಾವು ಇಬ್ಬರೂ ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಮುಂದುವರೆದು ನಾವು ಬೇರೆ ಮನೆಯಲ್ಲಿದ್ದೇವೆ ಅಂದ ಮಾತ್ರಕ್ಕೆ ನಮ್ಮ ನಡುವೆ ಬಿರುಕು ಮೂಡಿದೆ ಎಂದು ಅರ್ಥ ಅಲ್ಲ ಎಂದು ಹೇಳಿರುವ ದಿವ್ಯಾ ನಮ್ಮ ಇಬ್ಬರ ಕೆಲಸ ನಮ್ಮನ್ನು ದೂರ ಇರುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಅಪೂರ್ವ ಅವರದ್ದು ಹೋಟೆಲ್ ಉದ್ಯಮ, ಸಾಮಾನ್ಯಕ್ಕೆ ಅವರ ಕೆಲಸ ಮುಗಿಯುವುದೇ ರಾತ್ರಿ 2ಕ್ಕೆ, ಆ ಸಮಯದಲ್ಲಿ ನವಿ ಮುಂಬೈಯಿಂದ ಗೋರೆಗಾಂವ್‌ಗೆ ಪ್ರಯಾಣ ಮಾಡುವುದು ಕಷ್ಟ, ಇನ್ನೂ ಪೋಷಕರು ಜೊತೆಯಲ್ಲಿಯೇ ವಾಸ ಮಾಡುವುದರಿಂದ ಅವರು ಹೋಟೆಲ್ ಗೆ ಹತ್ತಿರವಾಗುವ ಮನೆಯಲ್ಲಿದ್ದಾರೆ ಎಂದು ಹೇಳಿರುವ ದಿವ್ಯಾ ನಾನು ನನ್ನ ಚಿತ್ರೀಕರಣಕ್ಕೆ ವಿರಾರ್, ನಾಯಗಾಂವ್, ಹೀಗೆ ದೂರದ ಸ್ಥಳಕ್ಕೆ ಹೋಗಬೇಕಾಗುತ್ತೆ, ಹೀಗಾಗಿ ನಾನು ನನ್ನ ಕೆಲಸ ಇರುವ ಜಾಗದ ಕಡೆ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾವು ಇನ್ನೂ ಪ್ರೇಮಿಗಳಂತೆ ಭೇಟಿಯಾಗುತ್ತೇವೆ, ಅದರಲ್ಲಿಯೂ ಒಂದು ರೀತಿಯ ಸುಖ ಇದೆ ಎಂದು ಹೇಳಿದ್ದಾರೆ. ದಿನನಿತ್ಯದ ಸಣ್ಣಪುಟ್ಟ ಮನೆಗೆಲಸಗಳ ವಿಷಯಕ್ಕೆ ಜಗಳವಾಡುವ ಬದಲು, ಈ ರೀತಿಯ ಪ್ರತ್ಯೇಕ ವಾಸ ಮಾಡುವುದರಿಂದ ನಮ್ಮ ನಡುವೆ ಪ್ರೀತಿ ಇನ್ನೂ ಮೊದಲಿನಂತೆ ಜೀವಂತವಾಗಿದೆ ಎಂದಿದ್ದಾರೆ.
ಇನ್ನೂ ಇದೇ ಹಣದಾಸೆಗೆ ಮದುವೆಯಾಗಿದ್ದಾ ? ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ದಿವ್ಯಾ "ನನ್ನನ್ನು ಗೋಲ್ಡ್ ಡಿಗ್ಗರ್ ಎನ್ನುವುದಾದರೆ ಅದಕ್ಕೆ ನನ್ನ ಅಭ್ಯಂತರ ಇಲ್ಲ, ನೀವು ನನ್ನನ್ನು ಡೈಮಂಡ್ ಡಿಗ್ಗರ್ ಎಂದು ಬೇಕಾದರೂ ಕರೆಯಬಹುದು, ಯಾಕೆಂದರೆ ನನ್ನ ಪತಿ ಅಪೂರ್ವ ನನಗೆ ಸಿಕ್ಕ ಅಮೂಲ್ಯ ವಜ್ರ ಎಂದು ಪತಿಯ ಮೇಲಿರುವ ತಮ್ಮ ಪ್ರೀತಿಯನ್ನು ದಿವ್ಯಾ ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ನಮ್ಮದೇ ಆದ ಮನೆಯಲ್ಲಿ ಶಾಂತಿಯುತ ಜೀವನ ನಡೆಸಬೇಕೆನ್ನುವುದು ನಮ್ಮ ಉದ್ದೇಶ, ನಮ್ಮ ಕನಸು ಎಂದು ಹೇಳಿರುವ ದಿವ್ಯಾ ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ, ಆದರೆ ನನ್ನ ಖಾಸಗಿ ಜೀವನ ಯಾವಾಗಲೂ ಸದ್ದು ಮಾಡುತ್ತದೆ, ನನ್ನ ವೈಯಕ್ತಿಕ ಬದುಕಿನ ಕುರಿತು ಜನರಿಗೆ ಯಾಕಿಷ್ಟು ಕುತೂಹಲ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಹಲವು ಬಾರಿ ಹೇಳಿದರೂ ಕೂಡ ಜನ ನಂಬ್ತಿಲ್ಲ ಎಂದು ಹೇಳಿರುವ ದಿವ್ಯಾ ನನ್ನ ವಿಚ್ಛೇದನದ ಸುದ್ದಿಗಾಗಿಯೇ ತುಂಬಾ ಜನ ಕಾಯುತ್ತಿರುವಂತೆ ಇದೆ ಎಂದು ಹೇಳಿದ್ಧಾರೆ. ಈ ವದಂತಿಗಳು ಎಷ್ಟು ಹರಡಿವೆಯೆಂದರೆ, ಈಗ ಅತ್ತೆ-ಮಾವಂದಿರೂ ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿರುವ ದಿವ್ಯಾ ಪ್ರತಿದಿನ ದಿವ್ಯಾ ಮತ್ತು ಅಪೂರ್ವ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿಯನ್ನು ಓದಿ ನೋಡಿ ಅವರು ಕೂಡ ನಕ್ಕು ಸುಮ್ಮನಾಗುತ್ತಾರೆ, ಅವರಿಗೂ ಕೂಡ ಇದು ರೂಢಿಯಾಗಿದೆ ಎಂದಿದ್ದಾರೆ.


Click it and Unblock the Notifications











