ಶುಭಾ ಪುಂಜಾ ಲಂಗಾದ ಬಗ್ಗೆ ಯೋಗರಾಜ್ ಭಟ್ರ ಕಾಮಿಡಿ; ವೀಡಿಯೋ ವೈರಲ್
ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಸಾಹಿತ್ಯ, ಸಂಭಾಷಣೆಯಿಂದ ಕೂಡ ಪ್ರೇಕ್ಷಕರ ಮನಗೆದ್ದವರು. 'ಮನದ ಕಡಲು' ಬಳಿಕ ಭಟ್ರು ಯಾವುದೇ ಹೊಸ ಸಿನಿಮಾ ಆರಂಭಿಸಿಲ್ಲ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರರಾಗಿ ಕೂಡ ಅವರು ಗಮನ ಸೆಳೆಯುತ್ತಿದ್ದಾರೆ. 'ಕಾಮಿಡಿ ಕಿಲಾಡಿಗಳು' ಸೀಸನ್-5ರಲ್ಲಿ ಮತ್ತೆ ಸ್ಕಿಟ್‌ಗಳನ್ನು ನೋಡ್ತಾ ಕೂತಿದ್ದಾರೆ.
ಈ ಭಾರಿ ರಕ್ಷಿತಾ ಪ್ರೇಮ್ ಬದಲು ಜಗ್ಗೇಶ್ ಹಾಗೂ ಯೋಗರಾಜ್ ಭಟ್ರ ಜೊತೆ ನಟಿ ತಾರಾ ತೀರ್ಪುಗಾರರಾಗಿ ಬಂದಿದ್ದಾರೆ. ವೀಕೆಂಡ್‌ಗಳಲ್ಲಿ ಶೋ ಪ್ರಸಾರವಾಗುತ್ತಿದೆ. ಈ ವಾರ ನಟಿ ಶುಭಾ ಪೂಂಜಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ. ಅವರೊಟ್ಟಿಗೆ ಭಟ್ರು 'ಮುಂಗಾರು ಮಳೆ' ಚಿತ್ರದ ಸೂಪರ್ ಹಿಟ್ ಸೀನ್ ಸ್ಪೂಫ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗಿದೆ. ಗಣೇಶ್ ಸೇಂದಿ ಕುಡಿಯುತ್ತಾ ಮಳೆಯಲ್ಲಿ ನೆನೆಯುತ್ತಾ ಪೂಜಾ ಗಾಂಧಿ ಅವರನ್ನು ನೋಡಿ ಮಾತನಾಡುವ ಸನ್ನಿವೇಶ ಅದು.

ಮಂಗಳೂರು ನಂದಿನಿಯಾಗಿ ಶುಭಾ ಪೂಂಜಾ ಎದುರು ಬಯಲುಸೀಮೆಯ ಪ್ರೀತಮ್ ಆಗಿ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಭಟ್ರು ಡೈಲಾಗ್ ಹೊಡೆದು ರಂಜಿಸಿದ್ದಾರೆ. ಶುಭಾ ಪೂಂಜಾ ತುಂಡು ಲಂಗಾ ತೊಟ್ಟು ಬಂದಿದ್ದು ಅವರನ್ನು ನೋಡಿ "ಲಂಗಾ ಹಾರಿಸಿಬಿಡ್ರಿ ಗಾಳಿಗೆ, ಚೊರೆನೆ ಚೊಟ್ ಅಂತಾವು ಗಂಡು ಜನ್ಮ" ಎಂದು ಭಟ್ರು ಡೈಲಾಗ್ ಹೊಡೆದಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನ ನೋಡಿದ್ದೇವೆ. ಕೆಲ ಸಿನಿಮಾಗಳಲ್ಲಿ ಗಂಭೀರವಾಗಿ ಕಾಣಿಸಿಕೊಂಡಿರುವುದು ಇದೆ. ತಮಾಷೆಯಾಗಿ ಮಾತನಾಡಿ ನಗಿಸುತ್ತಾರೆ. ಆದರೆ ಈ ರೀತಿ ಯಾವತ್ತೂ ವೇದಿಕೆಯಲ್ಲಿ ನಟನೆ ಮಾಡಿದ್ದು ನೋಡಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ವೀಕೆಂಡ್ ಈ ಎಪಿಸೋಡ್ ಪ್ರಸಾರ ಆಗಲಿದೆ. ಮದುವೆ ಬಳಿಕ ಶುಭಾ ಪೂಂಜಾ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. ಬಹಳ ದಿನಗಳ ಬಳಿಕ ವೇದಿಕೆ ಏರಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಬಹಳ ನಿರೀಕ್ಷೆ ಮೂಡಿಸಿದ್ದ 'ಮನದ ಕಡಲು' ಸಿನಿಮಾ ಕೂಡ ತೆರೆಮೇಲೆ ಮ್ಯಾಜಿಕ್ ಮಾಡಲಿಲ್ಲ. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ನಟಿ ರಮ್ಯಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆ ಬಳಿಕ ಯಾವುದೇ ಮಾಹಿತಿ ಸಿಗಲಿಲ್ಲ. 'ಮುಂಗಾರು ಮಳೆ' ಹಾಗೂ 'ಮನದ ಕಡಲು' ಚಿತ್ರಗಳನ್ನು ನಿರ್ಮಿಸಿದ್ದ ಇ. ಕೃಷ್ಣಪ್ಪ ಈ ಚಿತ್ರಕ್ಕೂ ಹಣ ಹೂಡುತ್ತಾರೆ. ರಮ್ಯಾ ತಮ್ಮ ಆಪಲ್‌ಬಾಕಸ್ ಬ್ಯಾನರ್ ಮೂಲಕ ಕೈ ಜೋಡಿಸುತ್ತಾರೆ ಎನ್ನಲಾಗಿತ್ತು.
ಕಾಮಿಡಿ ಕಿಲಾಡಿಗಳು-5ರಲ್ಲಿ ಈ ವಾರ 'ಜೂನಿಯರ್ v/s ಸೀನಿಯರ್' ರೌಂಡ್ ನಡೀತಿದೆ. ಅಂದರೆ ಈ ಹಿಂದಿನ ಸೀಸನ್‌ನಲ್ಲಿ ವೀಕ್ಷಕರನ್ನು ರಂಜಿಸಿದ್ದ ಸ್ಪರ್ಧಿಗಳು ಈ ಬಾರಿಯ ಸ್ಪರ್ಧಿಗಳ ಜೊತೆ ಸೇರಿ ಒಟ್ಟಾಗಿ ನಗಿಸೋಕೆ ಬರ್ತಿದ್ದಾರೆ. ನಯನಾ ಕೂಡ ಮತ್ತೆ 'ಕಾಮಿಡಿ ಕಿಲಾಡಿಗಳು' ವೇದಿಕೆ ಏರಿದ್ದಾರೆ. ಆಕೆ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಸ್ಕಿಟ್ ಪ್ರೋಮೊಸ ಸಹ ರಿಲೀಸ್ ಆಗಿದೆ.
ದಾವಣಗೆರೆಯ ಮಾನಸಿ ಅನು, ಮಂಗಳೂರಿನ ಸಂಕೇತ್, ಕೋಲಾರದ ಮಾನ್ಸಿ ಸೇರಿದಂತೆ ಸಾಕಷ್ಟು ಕಿಲಾಡಿಗಳು ಈ ಬಾರಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಂದಹಾಗೆ ಮಾಸ್ಟರ್ ಆನಂದ್ ಬದಲು ನಿರಂಜನ್ ದೇಶಪಾಂಡೆ ಶೋ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶುಭಾ ಪುಂಜಾ ಜೊತೆ ನಿರಂಜನ್ ಡ್ಯಾನ್ಸ್ ಮಾಡಿದ್ದಾರೆ. ಹೊಸ ಕಿಲಾಡಿಗಳ ಜೊತೆ ಹಳೆ ಕಿಲಾಡಿಗಳು ಕೈಜೋಡಿಸಿರುವುದರಿಂದ ಈ ವೀಕೆಂಡ್ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ.


Click it and Unblock the Notifications











