ನಿಮ್ಮಿಂದ ನನಗೆ ಕಳಂಕ ; ನಾಲ್ಕೇ ವಾರಕ್ಕೆ ಹಳಸಿತು ಸ್ನೇಹ- ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ, ಅಶ್ವಿನಿ ಗೌಡ ವಾಗ್ಯುದ್ದ
ಸ್ನೇಹ, ಅಪೂರ್ವ ಸಂಬಂಧ ಮತ್ತು ಅಮೂಲ್ಯವಾದ ಅನುಭವ. ಕೆಲ ಒಮ್ಮೆ ಅಗತ್ಯ ಕೂಡ ಹೌದು. ಇನ್ನೂ ಕೆಲ ಒಮ್ಮೆ ಅನಿವಾರ್ಯ ಕೂಡ ಹೌದು. ಸ್ನೇಹಿತರು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ. ಮನೆಯವರ ಬಳಿ ಹೇಳಿಕೊಳ್ಳಲಾಗದ ಎಷ್ಟೋ ಸಂಗತಿಗಳನ್ನು ಸ್ನೇಹಿತರ ಬಳಿ ಅನೇಕರು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ನಮ್ಮ ಸುಖ ಅಥವಾ ಕಷ್ಟಗಳಿಗೆ ಸಂಬಂಧಿಕರಿಗಿಂತ ಹೆಚ್ಚಾಗಿ ಸ್ನೇಹಿತರೇ ಜೊತೆಯಾಗುತ್ತಾರೆ.
ಹೀಗಾಗಿ ಒಳ್ಳೆಯ ಸ್ನೇಹಿತರು ವ್ಯಕ್ತಿಯೊಬ್ಬನ ಆಸ್ತಿಯಿದ್ದಂತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸ್ನೇಹ ಸ್ವಾರ್ಥದ ಸ್ವರೂಪ ಪಡೆದಿದೆ. ನಂಬಿಕೆ ದ್ರೋಹ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಜೀವಕ್ಕೆ ಜೀವ ಕೊಡುವ ಗೆಳೆಯ, ಗೆಳತಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಚಿಕ್ಕ ಚಿಕ್ಕ ವಿಚಾರಕ್ಕೆ ಸ್ನೇಹದಲ್ಲಿ ಭಿನ್ನಾಭಿಪ್ರಾಯ ಭುಗಿಲೇಳುತ್ತಿವೆ. ಉದಾಹರಣೆಗೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರನ್ನೇ ತೆಗೆದುಕೊಳ್ಳಿ.

ಹೌದು, ಈ ಬಾರಿಯ ''ಬಿಗ್ ಬಾಸ್'' ಶುರುವಾದ ಮೊದಲ ದಿನದಿಂದಲೇ ಮನೆಯಲ್ಲಿ ಗಳಸ್ಯ-ಕಂಠಸ್ಯ ಸ್ನೇಹಿತರಂತೆ ಇದ್ದವರು ಜಾಹ್ನವಿ ಮತ್ತು ಅಶ್ವಿನಿ ಗೌಡ. ವರ್ಷಾನು ವರ್ಷಗಳಿಂದ ಸ್ನೇಹಿತರಿದ್ದಂತೆ ಮನೆಯಲ್ಲಿ ಇದ್ದ ಇವರಿಬ್ಬರನ್ನು ಕಂಡು ಮನೆಯ ಉಳಿದ ಸ್ಫರ್ಧಿಳೇ ಕಕ್ಕಾಬಿಕ್ಕಿಯಾಗಿದ್ದರು. ಈ ಜೋಡೆತ್ತುಗಳ ಕಿರಿಕ್ ಮತ್ತು ವಾಚಾಳಿತನ ಕಂಡು ಹೈರಾಣಾಗಿದ್ದರು.
ಆದರೆ ಈಗ ಹಲವರು ನಿರೀಕ್ಷೆ ಮಾಡಿದಂತೆ ಇವರ ಸ್ನೇಹದಲ್ಲಿ ಬಿರುಕು ಮೂಡಿದೆ. ಮನೆಯಲ್ಲಿ ವಾಗ್ಯುದ್ದ ನಡೆದಿದೆ. ಎದುರಾಳಿ ಸ್ಫರ್ಧಿ ಈ ಮನೆಯಲ್ಲಿರಲು ಯಾಕೆ ಯೋಗ್ಯವಲ್ಲ ಎಂಬ ಪ್ರಶ್ನೋತ್ತರದ ಟಾಸ್ಕ್‌ನಲ್ಲಿ ಜಾಹ್ನವಿ ವಿರುದ್ಧ ಕೆಂಡ ಕಾರಿರುವ ಅಶ್ವಿನಿ ಗೌಡ ನಿಮ್ಮಿಂದ ನನಗೆ ಕಳಂಕ ಬಂದಿದೆ ಎಂದು ಹೇಳಿದ್ದಾರೆ. ನನ್ನನ್ನು ಮುಂದೆ ಬಿಟ್ಟು, ನೀವು ಹಿಂದೆಯಿಂದ ತಮಾಷೆ ನೋಡುತ್ತ, ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಬೇಕು ಅಂತ ಕಾಯ್ತಿದ್ದೀರಾ ನೀವು..? ಎಂದು ಪ್ರಶ್ನೆ ಮಾಡಿರುವ ಅಶ್ವಿನಿ ಗೌಡ ಫ್ರೆಂಡ್‌ಶಿಪ್ ಅಂತ ಹೇಳಿಕೊಂಡು ನನಗೆ ನೀವು ಬಾವಿ ತೋಡುತ್ತಿದ್ದೀರಾ ಅಂತ ಗೊತ್ತಿರಲಿಲ್ಲ. ಇಂತಹ ಸ್ನೇಹಕ್ಕೆ ನಾವು ಬ್ರೇಕ್ ಹಾಕೋದು ಒಳ್ಳೆಯದು ಎಂದು ಗುಡುಗಿದ್ದಾರೆ. ನೋವು ತಡೆಯಲಾರದೇ ಕಣ್ಣೀರನ್ನು ಕೂಡ ಹಾಕಿದ್ದಾರೆ.
ಅಶ್ವಿನಿ ಗೌಡ ಅವರ ಈ ಮಾತುಗಳಿಗೆ ಕೌಂಟರ್ ಕೂಡ ನೀಡಿರುವ ಜಾಹ್ನವಿ, ನಿಮ್ಮ ಆಟವನ್ನು ನೀವು ಆಡ್ತಿದ್ದೀರಾ, ನನ್ನ ಆಟವನ್ನು ನಾನು ಆಡ್ತಿದ್ದೀನಿ. ಕೆಲವರ ಆಟ ಫಾಸ್ಟ್ ಆಗಿ ಕಾಣಬಹುದು, ಇನ್ನೂ ಕೆಲವರ ಅಟ ಸ್ಲೋ ಆಗಿ ಕಂಡು ಅವರು ಗುರಿ ತಲುಪಬಹುದು. ನೀವು ನನ್ನ ಜೊತೆಗೆ ಇರೋದು ತಂತ್ರ ಆಗಿರಬಹುದು ಎಂದು ಹೇಳಿದ್ದಾರೆ.
ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ಈ ವಾಕ್ಸಮರ ಕಂಡು ಮನೆಯ ಉಳಿದ ಸದಸ್ಯರು ಕೂಡಾ ಅಚ್ಚರಿಗೊಂಡಿದ್ದು, ಇಬ್ಬರ ಜಗಳವನ್ನು ಪಿಳಪಿಳ ಕಣ್ಣುಬಿಟ್ಟುಕೊಂಡು ನೋಡಿದ್ದಾರೆ. ಇಬ್ಬರ ಜಗಳದಲ್ಲಿ ನಡು ಪ್ರವೇಶ ಮಾಡುವ ಧೈರ್ಯ ಯಾರೂ ಮಾಡಿದಂತೆ ಇಲ್ಲ.

ಸದ್ಯ ಈ ಪ್ರೋಮೋ ಸಖತ್ ವೈರಲ್ ಆಗುತ್ತಿದ್ದು ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬರು ಹೋ ಎರಡು ಬಕೆಟ್‌ಗಳು ಹೊಸ ಆಟ ಏನೋ ಶುರು ಮಾಡವ್ರೆ ಅಭಿಮಾನಿಗಳು ಸಮಾಧಾನದಿಂದ ನೋಡ್ರಪ್ಪಾ ಎಂದು ಹೇಳಿದರೆ ಮತ್ತೊಬ್ಬರು ಅಶ್ವಿನಿ ಜಾನ್ವಿ ಜಗಳ ನೋಡಿ ಯಾರಿಗೆಲ್ಲ ಖುಷಿ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದರ ನಡುವೆ ಇನ್ನೂ ಕೆಲವರಿಗೆ ಸೂರಜ್ ಮತ್ತು ರಾಶಿಕಾ ಲವ್ ಸ್ಟೋರಿಯ ಕುರಿತು ಚಿಂತೆ ಶುರುವಾಗಿದೆ.


Click it and Unblock the Notifications











