Bigg Boss Kannada 11 ; ಕಣ್ಣೀರು ಹಾಕಿಸಿ ಕರಾವಳಿ ಕುವರ ಧನರಾಜ್‌ನ ಬಿಗ್ ಬಾಸ್‌ಗೆ ಬರಮಾಡಿಕೊಂಡ ಕಿಚ್ಚ ಸುದೀಪ್..!
ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ಮೂಲಕ ಅನೇಕ ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಆ ಪೈಕಿ ಧನರಾಜ್ ಆಚಾರ್ಯ ಕೂಡ ಒಬ್ಬರು. ಕರಾವಳಿಯ ಹಿನ್ನೆಲೆಯಿಂದ ಬಂದು ತಮ್ಮ ಪ್ರತಿಭೆಯ ಮೂಲಕ ಜನ ಮನ ಗೆದ್ದ ಧನರಾಜ್ ಸದ್ಯ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ.
ಹೌದು, ಬಿಗ್ ಬಾಸ್ ಕಾರ್ಯಕ್ರಮದ ಹನ್ನೊಂದನೇ ಸೀಸನ್ ಗೆ ಇಂದು ಧನರಾಜ್ ಆಚಾರ್ಯ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ಇದೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಗಿಚ್ಚಿ ಗಿಲಿ ಗಿಲಿ ಸೀಸನ್ 2ರಲ್ಲಿ ಕೂಡ ಭಾಗಿಯಾಗಿದ್ದರು. ತಮ್ಮ ಕಲೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು.ಇನ್ನೂ ಧನರಾಜ್ ಕೇವಲ ಯೂಟ್ಯೂಬರ್ ಮಾತ್ರ ಅಲ್ಲ ಒಂದು ಕಾಲದಲ್ಲಿ ಟಿಕ್ ಟಾಕ್ ಸ್ಟಾರ್ ಆಗಿ ಕೂಡ ಹೆಸರು ಮಾಡಿದವರು.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಧನರಾಜ್ ತಮ್ಮ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾದವರು. ಕೇವಲ ಹಾಸ್ಯ ಮಾತ್ರ ಅಲ್ಲ ತಮ್ಮ ಸಾಮಾಜಿಕ ಕಳಕಳಿಯಿಂದ ಕೂಡ ಎಲ್ಲರಿಗೆ ಹತ್ತಿರವಾದವರು ಇವರು. ಪಂಪವೆಲ್ ಫ್ಲೈ ಓವರ್, ಕಲ್ಲಡ್ಕ ಹೆದ್ದಾರಿ, ಹೀಗೆ ಅನೇಕ ವಿಚಾರಗಳ ಕುರಿತು ಮಾತನಾಡಿದ್ದರು. ಬದಲಾವಣೆಯನ್ನೂ ತಂದವರು. ಇಂಥಾ ಧನರಾಜ್ ಅವರಿಗೆ ಇಂದು ಮನೆಯೊಳಗೆ ಕರೆದುಕೊಂಡ ಕಿಚ್ಚ ಸುದೀಪ್ ಸಖತ್ತಾಗಿಯೇ ಚಮಕ್ ಕೊಟ್ಟರು. ಧನರಾಜ್ ಆ ಕಾಲದಲ್ಲಿ ಮಾಡಿದ್ದ ''ಚಿಕ್ಕ ಬಾಸ್'' ವಿಡಿಯೋ ತುಣುಕು ತೋರಿಸಿ ಕಾಲೆಳೆದರು. ಸುದೀಪ್ ಅವರ ಆ ಸೀರಿಯಸ್ ಲುಕ್‌ಗೆ ಧನರಾಜ್ ಅರೆಕ್ಷಣ ತಬ್ಬಿಬ್ಬಾಗಿದ್ದು ಸುಳ್ಳಲ್ಲ.
ಧನರಾಜ್ ಅವರ ಪತ್ನಿ ಪ್ರಜ್ಞಾ ಕೂಡ ಸುದೀಪ್ ಅವರು ನೀಡಿದ ಚಮಕ್‌ಗೆ ಸುಸ್ತಾದರು. ಇಷ್ಟೇ ಅಲ್ಲ ಕಣ್ಣೀರನ್ನೂ ಹಾಕಿದರು. ಆ ನಂತರ ಸುದೀಪ್ ಇದೆಲ್ಲ ಕೇವಲ ತಮಾಷೆಗಾಗಿ ಎಂದು ಹೇಳಿ ನಕ್ಕು ನಗಿಸಿದರು. ಅಂದ್ಹಾಗೇ ಧನ್ ರಾಜ್ ಮತ್ತು ಅವರ ಪತ್ನಿ ಪ್ರಜ್ಞಾ ಇತ್ತೀಚೆಗಷ್ಟೇ ಅಂದರೆ ಕಳೆದ ಆಗಸ್ಟ್ 21ರಂದು ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಇದೇ ಸಮಯದಲ್ಲಿ ಬಿಗ್ ಬಾಸ್ ಕಡೆಯಿಂದ ಕರೆ ಕೂಡ ಬಂದಿದೆ. ಹೀಗಾಗಿಯೇ ಹುಟ್ಟುವಾಗಲೇ ಅದೃಷ್ಟವನ್ನೂ ತಮ್ಮ ಮಗಳು ಹೊತ್ತು ತಂದಿದ್ದಾಳೆ ಎಂದು ಭಾವಿಸಿದ್ದಾರೆ ಇಬ್ಬರು. ಬಿಗ್ ಬಾಸ್ ಮನೆಗೆ ಧನರಾಜ್ ಬರಲು ಒಪ್ಪಿಕೊಳ್ಳಲು ಇದೇ ಪ್ರಮುಖವಾದ ಕಾರಣ.
ಉಳಿದಂತೆ ಮನೆಯೊಳಗೆ ಮೂರನೇ ಸ್ಫರ್ಧಿಯಾಗಿ ಬಂದ ಧನರಾಜ್, ನರಕದ ಬದಲು ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಮನೆಯೊಳಗೆ ಹೋದ ತಕ್ಷಣ ತಮ್ಮನ್ನು ಹರಸಿ ಹಾರೈಸಿ ಬಿಗ್ ಬಾಸ್ ಮನೆಯವರೆಗೆ ಕರೆತಂದ ತಮ್ಮೆಲ್ಲ ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ಧನ್ಯವಾದವನ್ನೂ ಸಲ್ಲಿಸಿದ ಧನರಾಜ್ ನನ್ನನ್ನೂ ಪ್ರಯೋಜನಕ್ಕಿಲ್ಲ ಎಂದು ಮನೆಯಲ್ಲಿ ಯಾರಾದರೂ ಅಂದುಕೊಂಡರೆ ಅಷ್ಟೇ ಅವರ ಗ್ರಹಚಾರನೇ ಬಿಡಸ್ತೀನಿ ಎನ್ನುವ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ಧನರಾಜ್ ಬಿಗ್ ಬಾಸ್ ಮನೆಯೊಳಗೆ ತೆರಳಿದ್ದಾರೆ. ಧನರಾಜ್ ಅವರನ್ನು ಎಲ್ಲಿಯವರೆಗೆ ಕನ್ನಡಿಗರು ಈ ಮನೆಯಲ್ಲಿ ಉಳಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











