'ಅಣ್ಣಯ್ಯ' ಧಾರಾವಾಹಿ ಭಾನು ಪಾತ್ರಧಾರಿ ಮಾನಿಕಾ 10ನೇ ತರಗತಿಯಲ್ಲಿ ಗಳಿಸಿದ ಅಂಕಗಳು ಎಷ್ಟು?
ಕರ್ನಾಟಕದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿತ್ತು. ಈ ಬಾರಿ ಪರೀಕ್ಷೆ ಬರೆದಿದ್ದ ಶೇಕಡಾ 94.1ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಭ್ರಮಿಸಿದ್ದಾರೆ. ಇನ್ನು ವಾರದ ಹಿಂದೆ ಸಿಬಿಎಸ್ಸಿ 10ನೇ ತರಗತಿ ಫಲಿತಾಂಶ ಕೂಡ ಹೊರಬಿದ್ದಿತ್ತು. ದೇಶಾದ್ಯಂತ ಈ ಬಾರಿ ಸುಮಾರು 24 ಲಕ್ಷದ 71 ಸಾವಿರ ವಿದ್ಯಾರ್ಥಿಗಳು ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ಒಟ್ಟು 23 ಲಕ್ಷದ 16 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಕನ್ನಡ ಹಿರಿತೆರೆ, ಕಿರುತೆರೆ ನಟಿ ಮಾನಿಕಾ .ಎಸ್ ಕೂಡ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಸದ್ಯ ಜೀ ಕನ್ನಡ ವಾಹಿನಿಯ 'ಅಣ್ಣಯ್ಯ' ಧಾರಾವಾಹಿಯಲ್ಲಿ ಮಿಲಿಟರಿ ಮಾದಪ್ಪಣ್ಣ ಹಾಗೂ ಲೀಲಮ್ಮನ ಮಗಳಾಗಿ ಆಕೆ ನಟಿಸುತ್ತಿದ್ದಾರೆ. ಜಿಮ್ ಸೀನನ ಮುದ್ದಿನ ತಂಗಿ ಭಾನು ಪಾತ್ರದಲ್ಲಿ ಮಾನಿಕಾ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಜಗ್ಗೇಶ್ ನಟನೆಯ 'ಕಾಳಿದಾಸ ಕನ್ನಡ ಮೇಷ್ಟ್ರು' ಸೇರಿದಂತೆ 'ಜ್ಯೋತಿ' ಹಾಗೂ 'ಅಭಿರಾಮಚಂದ್ರ' ಎಂಬ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಾನಿಕಾ ಮಿಂಚಿದ್ದರು.

'ಮುದ್ದುಲಕ್ಷ್ಮಿ' ಹಾಗೂ 'ಜನನಿ' ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಮಾನಿಕಾ ನಟಿಸಿ ಮೋಡಿ ಮಾಡಿದ್ದರು. ವಾರದ ಹಿಂದೆ ಆಕೆಯ 10ನೇ ತರಗತಿ ಸಿಬಿಎಸ್ಸಿ ಪರೀಕ್ಷೆ ಫಲಿತಾಂಶ ಹೊರಬಂದಿತ್ತು. ಒಟ್ಟು 500 ಅಂಕಗಳಿಗೆ 405 ಅಂಕಗಳನ್ನು ಮಾನಿಕಾ ಪಡೆದಿದ್ದಾರೆ. ಆಪ್ತರು ಆಕೆಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಅಂದಹಾಗೆ ಇಂಗ್ಲೀಷ್ ಭಾಷಾ ವಿಷಯದಲ್ಲಿ 100 ಅಂಕಗಳಿಗೆ(ಥಿಯರಿ ಹಾಗೂ ಪ್ರಾಕ್ಟಿಕಲ್ ಸೇರಿ) 91 ಅಂಕ ಗಳಿಸಿದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ 100ಕ್ಕೆ 96 ಅಂಕ ಗಳಿಸಿದ್ದಾರೆ ಮಾನಿಕಾ.
ಅದೇ ರೀತಿ ಸಾಮಾಜಿಕ ವಿಜ್ಞಾನ ವಿಷಯದಲ್ಲಿ ಮಾನಿಕಾ 100ಕ್ಕೆ 90 ಅಂಕ ಗಳಿಸಿದ್ದಾರೆ. ಗಣಿತ(61) ಹಾಗೂ ವಿಜ್ಞಾನ(67) ವಿಷಯಗಳಲ್ಲಿ ಕೊಂಚ ಕಡಿಮೆ ಅಂಕಗಳು ಸಿಕ್ಕಿದೆ. ಈ ಎರಡೂ ವಿಷಯಗಳಲ್ಲಿ ಬಂದಿರುವ ಅಂಕಗಳಿಗೆ ತೃಪ್ತರಾಗದ ನಟಿ ಮಾನಿಕಾ ಇದೀಗ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವುದರ ಜೊತೆ ಜೊತೆಗೆ ಓದಿನಲ್ಲಿ ಕೂಡ ಮಾನಿಕಾ ಮುಂದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಮರುಮೌಲ್ಯಮಾಪನದ ಬಳಿಕ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಅಂಕ ಸಿಗುವ ನಿರೀಕ್ಷೆಯಲ್ಲಿದ್ದಾರೆ ಮಾನಿಕಾ. ಆ ಅಂಕಗಳನ್ನು ನೋಡಿಕೊಂಡು ಮುಂದೆ ಯಾವ ಕೋರ್ಸ್ ಓದಬೇಕು ಎಂದು ನಿರ್ಧರಿಸಲು ಮುಂದಾಗಿದ್ದಾರೆ. ಇನ್ನು ವಿದ್ಯಾಭ್ಯಾಸದ ಜೊತೆ ಜೊತೆಗೆ ನಟನೆ ಮುಂದುವರೆಸಲು ಮಾನಿಕಾ ತೀರ್ಮಾನಿಸಿದ್ದಾರೆ. ಮುಂದೆ ಮತ್ತಷ್ಟು ಒಳ್ಳೆ ಪಾತ್ರಗಳು ಹುಡುಕಿ ಬರುವ ಭರವಸೆಯಲ್ಲಿದ್ದಾರೆ.
ಬಹಳ ಚಿಕ್ಕ ವಯಸ್ಸಿನಲ್ಲೇ ಮಾನಿಕಾ ನಟಿಸೋಕೆ ಆರಂಭಿಸಿದರು. ಇದೀಗ 'ಅಣ್ಣಯ್ಯ' ಧಾರಾವಾಹಿಯ ಭಾನು ಪಾತ್ರ ಆಕೆಗೆ ಒಳ್ಳೆ ಹೆಸರು ತಂದು ಕೊಟ್ಟಿದೆ.


Click it and Unblock the Notifications