ಈ ಬಾರಿಯ ಕಪಲ್ಸ್ ಕಿಚನ್‌ನಲ್ಲಿ ಹಿರಿಯ-ಕಿರಿಯ ಜೋಡಿಯ ದರ್ಬಾರ್..!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಪಲ್ಸ್ ಕಿಚನ್‌ನಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ತಮ್ಮ ಇಷ್ಟದ ಅಡುಗೆಯನ್ನು ಮಾಡಿ ತಮ್ಮ ಪ್ರೀತಿಯ ಹೆಂಡತಿಗೆ ಉಣ ಬಡಿಸಿದ್ದಾರೆ. ಇದರ ಜೊತೆಗೆ ತಮ್ಮ ಜೀವನದ ಬಗ್ಗೆ ಹಾಗೂ ತಾವು ಮದುವೆಯಾದ ದಿನದಿಂದ ಯಾವ ರೀತಿ ಪ್ರೀತಿಯನ್ನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಮುಕ್ತ ಮನಸ್ಸಿನಿಂದ ಪ್ರೇಕ್ಷಕರ ಬಳಿ ಹೇಳಿಕೊಳ್ಳುತ್ತಿದ್ದಾರೆ.
ಅದೇ ರೀತಿ ಈ ವಾರದ ಕಪಲ್ ಕಿಚನ್‌ನಲ್ಲಿ ವೀಣಾ ಹಾಗೂ ಅವರ ಪತಿ ಸುಂದರ್ ಇಬ್ಬರೂ ಸಹ ಭಾಗಿಯಾಗಿ ಮಾಸ್ಟರ್ ಆನಂದ್ ಅವರ ಜೊತೆ ಹರಟೆ ಹೊಡೆದು ಅಡುಗೆಯನ್ನು ಮಾಡಿದ್ದಾರೆ. ತಮ್ಮಿಬ್ಬರ ದಾಂಪತ್ಯದ ಗುಟ್ಟು ಏನು ಎಂಬುದನ್ನು ಸಹ ವೇದಿಕೆಯ ಮೇಲೆ ತಿಳಿಸಿದ್ದಾರೆ. ಚಲನಚಿತ್ರಗಳಲ್ಲೂ ಸಹ ಎಲ್ಲರನ್ನೂ ನಕ್ಕು ನಗಿಸುವ ಸುಂದರ್ ಅವರು ಹೆಂಡತಿಯನ್ನು ಅಷ್ಟೇ ಚೆನ್ನಾಗಿ ನಗಿಸುತ್ತಾರೆ. ಜೊತೆಗೆ ಸಂಸಾರವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಗೇಬ್ರಿಯೆಲಾ ಹಾಗೂ ಸುಹಾಸ್ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಮದುವೆಯಾದವರು. ಇವರು ಮದುವೆಯಾದಾಗ ಹೇಗಿರುತ್ತಾರೆ ಎಂದು ಜನರು ಅಂದುಕೊಂಡಿದ್ದರು ಈಗ ಜನರ ನಿರೀಕ್ಷೆ ಹುಸಿಯಾಗಿದೆ. ಯಾಕೆಂದರೆ ಇಬ್ಬರೂ ಸಹ ತುಂಬಾ ಚೆನ್ನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಬ್ಬರ ಬಾಂಡಿಂಗ್ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಲು ಕಪಲ್ಸ್ ಕಿಚನ್ ನೋಡಬೇಕಿದೆ.
ಮಗನಿಗಾಗಿ ಅಡುಗೆ ಕಲಿತ ಸುಂದರ್! ಮಿಕ್ಸ್ ಕಾಳುಗಳ ದೋಸೆ ಸೂಪರ್ ಟೇಸ್ಟಿ!
ನಟ ಸುಂದರ್ ಅವರು ತಮ್ಮ ಮಗನಿಗಾಗಿ ಅಡುಗೆ ಕಲಿತೆ ಎಂದು ತಿಳಿಸಿದ್ದಾರೆ. ಜೊತೆಗೆ ಎಲ್ಲಾ ಕಾಳುಗಳನ್ನ ಹಾಕಿ ರುಚಿಯಾದ ದೋಸೆಯನ್ನ ಮಾಡಿ ಮಾಸ್ಟರ್ ಆನಂದ್‌ಗೆ ನೀಡಿದ್ದಾರೆ. ಇದೇ ವೇಳೆ ವೀಣಾ ಅವರು ಒಂದು ಸುಂದರವಾದಂತಹ ಪ್ರಸಂಗವನ್ನು ನೆನಪಿಸಿಕೊಂಡು ನಕ್ಕು ನಲಿದಿದ್ದಾರೆ. ಈ ಹಿರಿಯ ಜೋಡಿಗಳು ಜೋಡಿ ಹಕ್ಕಿಯಾಗಿ ತಮ್ಮ ಸುಖ ಸಂಸಾರದ ಗುಟ್ಟನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ.

ನನ್ನ ಹೆಂಡತಿ ನನಗೆ ಬೆನ್ನೆಲುಬಾಗಿ ನಿಂತು ಸಪೋರ್ಟ್ ಮಾಡುತ್ತಾಳೆ. ನಾನು ಇವತ್ತು ಏನಾದರೂ ಆಗಿದ್ದೇನೆ ಎಂದರೆ ಅದು ನನ್ನ ಹೆಂಡತಿಯ ಸಪೋರ್ಟ್‌ಯಿಂದ. ನಾನು ಅಷ್ಟೇ ಅವಳಿಗೆ ಸಪೋರ್ಟ್ ಮಾಡುತ್ತೇನೆ. ಇಬ್ಬರೂ ಸಹ ಚಲನಚಿತ್ರಗಳಲ್ಲಿ ನಟಿಸಿದ್ದೇವೆ. ನಮಗೆ ನಮ್ಮ ಕೆಲಸದಲ್ಲಿ ತೃಪ್ತಿ ಇದೆ ಎಂದು ವೀಣಾ, ಸುಂದರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರು ವೀಳ್ಯದೆಲೆ ಪಲಾವ್! ಗೇಬ್ರಿಯೆಲಾ ರ್ಯಾಂಪ್ ಸಾಂಗ್
ಗೇಬ್ರಿಯೆಲಾ ಯಾರಿಗೆ ತಾನೇ ಗೊತ್ತಿಲ್ಲ.. ಕಮಲಿ ಸೀರಿಯಲ್‌ನಲ್ಲಿ ವಿಲನ್ ಪಾತ್ರ ಮಾಡಿ ಎಲ್ಲರಿಗೂ ಸಹ ಅಚ್ಚು ಮೆಚ್ಚಾಗಿದ್ದವರು. ಈಗಲೂ ಅನೇಕ ಪಾತ್ರದಲ್ಲಿರುವಂತೆ ಜನರು ಅವರನ್ನು ಕಾಣುತ್ತಾರೆ ಎಂದು ಹಲವಾರು ಕಾರ್ಯಕ್ರಮದಲ್ಲಿ ಗೇಬ್ರಿಯೆಲಾ ಅವರೇ ತಿಳಿಸಿದ್ದಾರೆ. ಹೊಸದಾಗಿ ಮದುವೆಯಾದ ಜೋಡಿ ಕಿಚನ್ ಕಪಲ್ಸ್‌ಗೆ ಬಂದು ತಮ್ಮ ಮಾತುಗಳನ್ನ ಹಂಚಿಕೊಂಡಿದ್ದಾರೆ. ಗೇಬ್ರಿಯಲಾಗೆ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮದುವೆಗೆ ಮುಂಚೆ ಗೊತ್ತಿರಲಿಲ್ವಂತೆ.
ಸುಹಾಸ್ ಕಿಚನ್ ಕಪಲ್‌ನಲ್ಲಿ ಮೈಸೂರು ವಿಳ್ಯೆದೆಲೆ ಪಲಾವ್ ಮಾಡಿದ್ದಾರೆ. ಇದರ ಜೊತೆಗೆ ಅಡುಗೆ ಮಾಡಲು ಯಾವ ವಸ್ತುಗಳನ್ನೆಲ್ಲ ಹಾಕಿ ಅಡುಗೆ ಮಾಡುತ್ತಾರೆ ಎಂದು ಮಾಸ್ಟರ್ ಆನಂದ್ ಗೇಬ್ರಿಯೆಲಾರನ್ನು ಕೇಳಿ ಕಾಲು ಎಳೆದಿದ್ದಾರೆ. ಅವರು ಕೆಲವೊಂದು ಪದಾರ್ಥಗಳ ಬಗ್ಗೆ ಹೇಳಲು ತೊದಲಿಸಿದ್ದಾರೆ. ನಂತರ ಗೇಬ್ರಿಯೆಲಾ ರ್ಯಾಂಪ್ ಸಾಂಗ್ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಒಂದು ಮೆರುಗು ನೀಡಿದ್ದಾರೆ. ಕಪಲ್ಸ್ ಕಿಚನ್ ಅಡುಗೆ, ಮದುವೆ ಬೆಸುಗೆ ಎಂದು ರ್ಯಾಂಪ್ ಸಾಂಗ್ ಹಾಡಿದ್ದಾರೆ.
ಕಪಲ್ಸ್ ಕಿಚನ್‌ಗೆ ಬರುವ ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಿ ನಡೆದ ಕೆಲವೊಂದು ಸಂತೋಷದ ದಿನಗಳ ಬಗ್ಗೆ ಮೆಲುಕು ಹಾಕುತ್ತಾರೆ. ಅಷ್ಟೇ ಅಲ್ಲದೆ ಹೊಸ ಹೊಸ ನಳಪಾಕವನ್ನ ಮಾಡಿ ನಾವೇನು ಯಾರಿಗೂ ಕಮ್ಮಿ ಇಲ್ಲ ಎಂದು ತಮ್ಮ ಹೆಂಡತಿಯರ ಮುಂದೆ ತೋರಿಸುತ್ತಿದ್ದಾರೆ. ಮಾಸ್ಟರ್ ಆನಂದ್ ಅವರ ನಿರೂಪಣೆಯಲ್ಲಿ ಕಪಲ್ಸ್ ಕಿಚನ್ ಕಾರ್ಯಕ್ರಮ ತರಲೆ, ತಮಾಷೆ ಹಾಗೂ ತುಂಟಾಟದಿಂದ ಕೂಡಿದ್ದು ಪ್ರೇಕ್ಷಕರನ್ನು ರಂಜಿಸುತ್ತಿದೆ.


Click it and Unblock the Notifications











