DKD: ರಾಯರ ಗರ್ಭಗುಡಿಯಲ್ಲಿ ಮಲಗಿದ್ದ ಅಣ್ಣಾವ್ರು? ಮರುದಿನ ಹಠ ಮಾಡಿದ್ದೇಕೆ?
ರಾಘವೇಂದ್ರ ಸ್ವಾಮಿಗೆ ಅಸಂಖ್ಯಾತ ಭಕ್ತರಿದ್ದಾರೆ. ಏನೇ ಕಷ್ಟ ಬಂದರು ರಾಯರಿದ್ದಾರೆ ಎನ್ನುವ ಒಂದು ಮಾತು ಸಾಕು ಕಷ್ಟಗಳು ದೂರಾಗುವುದಕ್ಕೆ ಎಂದೇ ಭಕ್ತರು ನಂಬಿದ್ದಾರೆ. ರಾಯರ ಮೇಲೆ ಅಣ್ಣಾವ್ರಿಗೆ ಅಪಾರ ಭಕ್ತಿ ಇತ್ತು, ನಂಬಿಕೆ ಇತ್ತು. ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಹೆಸರಿಟ್ಟಿದ್ದಕ್ಕೂ ರಾಯರ ಮೇಲಿನ ಭಕ್ತಿಯೇ ಕಾರಣ. ಇಂಡಸ್ಟ್ರಿಯಲ್ಲೂ ರಾಯರನ್ನ ನಂಬಿ ಅವರ ಪವಾಡಗಳಿಂದ ಪುಳಕಿತಗೊಂಡವರು ಇದ್ದಾರೆ.
1966ರಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದ 'ಮಂತ್ರಾಲಯ ಮಹಾತ್ಮೆ' ಸಿನಿಮಾ ರಿಲೀಸ್ ಆಗಿತ್ತು. ಸಿಂಗ್ ಠಾಕೂರ್ ಸಿನಿಮಾ ನಿರ್ದೇಶನ ಮಾಡಿದ್ದರು. ಎಸ್.ಕೆ.ಭಗವಾನ್ ಸಹನಿರ್ದೆಶನ ಮಾಡಿದ್ದರು. ಇದೀಗ ಮಂತ್ರಾಲಯ ಮಹಾತ್ಮೆ ಬಗ್ಗೆ ಶಿವಣ್ಣ ಆಶ್ಚರ್ಯಕರ ವಿಚಾರ ಹಂಚಿಕೊಂಡಿದ್ದಾರೆ

ಮಾಂಸಾಹಾರ ಬಿಟ್ಟಿದ್ದ ತಂಡ
ಈ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ಇಡೀ ಚಿತ್ರತಂಡ ಮಾಂಸಾಹಾರ ಬಿಟ್ಟಿತ್ತು. ಕಾಲಿಗೆ ಚಪ್ಪಲಿ ಬಳಸುತ್ತಿರಲಿಲ್ಲ. ಎಲ್ಲರೂ ಸ್ನಾನ ಮಾಡಿಯೇ ಕೆಲಸದಲ್ಲಿ ತೊಡಗುತ್ತಿದ್ದರು. ಪ್ರತಿದಿನ ಚಿತ್ರೀಕರಣಕ್ಕೆ ಮುಂಚೆ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಪ್ರತಿಯೊಂದು ದೃಶ್ಯದ ಚಿತ್ರೀಕರಣಕ್ಕೆ ಮುನ್ನ ರಾಜ್ ಕೆಲವು ನಿಮಿಷ ಧ್ಯಾನಾಸಕ್ತರಾಗಿರುತ್ತಿದ್ದರು. ಅವರಿಗೆ ಸಮಾಧಾನ, ಪ್ರೇರಣೆಯಾಗುತ್ತಿದ್ದಂತೆ ದೃಶ್ಯವನ್ನು ಆರಂಭಿಸಲಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಸಾರವನ್ನು ತ್ಯಜಿಸುವ, ಸನ್ಯಾಸಿಯಾಗಿ ಪರಿವರ್ತನೆಯಾಗುವ, ಸಮಾಜ ಮತ್ತು ಮತಧರ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಂದರ್ಭದ ಭಾವನೆಗಳನ್ನು ಅಣ್ಣಾವ್ರು ಪರಿಣಾಮಕಾರಿಯಾಗಿ ಅಭಿನಯಿಸಿದ್ದರು.
ಅಣ್ಣಾವ್ರ ಕಾಲಿಗೆ ಬೀಳಲು ಹೋಗಿದ್ರಂತೆ
'ಮಂತ್ರಾಲಯ ಮಹಾತ್ಮೆ' ಸಿನಿಮಾ ಎಷ್ಟರಮಟ್ಟಿಗೆ ಎಲ್ಲರನ್ನು ಭಕ್ತಿ ಭಾವಕ್ಕೆ ಪರವಶ ಮಾಡಿತ್ತು ಎಂದರೆ, ಅಂದು ರಾಯರ ಪಾತ್ರದಲ್ಲಿದ್ದ ಅಣ್ಣಾವ್ರಿಗೆ ದೀಕ್ಷೆ ಕೊಡಿಸುವ ಸನ್ನಿವೇಶದ ಚಿತ್ರೀಕರಣದಲ್ಲಿ ರಾಜ್ ಕುಮಾರ್ ಅವರು ಅಭಿನಯಿಸಿದ್ದನ್ನು ನೋಡಿ ಅಯ್ಯರ್ ಅವರು ಕಳೆದೋಗಿದ್ದರಂತೆ. 'ಮರಿ, ಮುತ್ತು.. ತಪ್ಪು ತಿಳ್ಕೊಬೇಡ, ನಾನು ನಿನ್ನ ಕಾಲು ಹಿಡ್ಕೊಬೇಕು' ಅಂತ ಗಳಗಳ ಅತ್ತುಬಿಟ್ಟು, 'ಏನಯ್ಯಾ ಆ ಕ್ಷಣ! ಪೀಠದಲ್ಲಿ ಕೂತಿದ್ದು ನೀನಾ.... ಅಥವಾ ಸ್ವತಃ ಅವರೇ ಬಂದು ಕೂತಿದ್ರಾ..!' ಅಂತ ಉದ್ವೇಗಕ್ಕೊಳಗಾಗಿದ್ದರಂತೆ.
ಡಬ್ಬಿಂಗ್ ವೇಳೆ ನೋಡಿರಲಿಲ್ಲವಂತೆ
ಈ ಸಿನಿಮಾ ಬಗ್ಗೆ ರುಕ್ಕೋಜಿ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದರಲ್ಲಿ ಸಿನಿಮಾ ಬಗ್ಗೆ ಅಣ್ಣಾವ್ರು ಹೇಳಿರೋದು ಹೀಗೆ, 'ಕೇಳಿದವರಿಗೆ ಆಶ್ಚರ್ಯವಾಗಬಹುದೋ ಏನೋ. ನಾನು ಇಷ್ಟು ಚಿತ್ರಗಳನ್ನು ಮಾಡಿಯೂ ನನ್ನದೇ ಚಿತ್ರಗಳನ್ನು ನಾನು ಹೆಚ್ಚು ನೋಡಿಯೇ ಇಲ್ಲ. ಅದಕ್ಕೆ ಕಾರಣ ಅದರಲ್ಲಿ ಕಾಣುವ ತಪ್ಪುಗಳು ಆದರೆ 'ಮಂತ್ರಾಲಯ ಮಹಾತ್ಮೆ' ಮಾತ್ರ ನಾನು ಮಾಡಿದ್ದಲ್ಲ ಅಂತ ನೋಡಿದ್ದು. ಅದನ್ನು ಮಾಡೋವಾಗ್ಲೆ ಮನಸ್ಸಿನಲ್ಲಿ ಅಂಡ್ಕೊಂಡಿದ್ದೆ. ನಾನು ಈ ಚಿತ್ರ ಮುಗಿದ ನಂತರ ರಾಯರ ದರ್ಶನ ಮಾಡಿಕೊಂಡು ಬಂದೇ ಚಿತ್ರವನ್ನು ನೋಡೇನೆ ಅಂತ ಸಂಕಲ್ಪ ಮಾಡ್ಕೊಂಡಿದ್ದೆ. ಹಾಗಾಗಿ ಡಬ್ಬಿಂಗ್ ಮಾಡೋವಾಗಲೂ ಎದುರುಗಡೆ ಸೀನ್ ನೋಡದೆಯೇ ಸೌಂಡ್ ಕೇಳಿಕೊಂಡೇ ಡಬ್ಬಿಂಗ್ ಮಾಡಿದ್ದೆ' ಎಂದಿದ್ದಾರೆ.
ಅಪ್ಪಾಜಿಗೆ ರಾಯರ ಅನುಗ್ರಹ..?
ಅಣ್ಣಾವ್ರ ಮಂತ್ರಾಲಯ ಮಹಾತ್ಮೆ ಸಮಯದಲ್ಲಿ ನಡೆದ ಪವಾಡದ ಬಗ್ಗೆ ಶಿವಣ್ಣ ಮಾತಾಡಿದ್ದಾರೆ. ಜೀ ಕನ್ನಡ ಡಿಕೆಡಿ ವೇದಿಕೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. 'ಅಪ್ಪಾಜಿ ಅಂದು ಮಂತ್ರಾಲಯದ ಗುರುಗಳ ಬಳಿ ನಾನು ಗರ್ಭಗುಡಿಯಲ್ಲಿ ಮಲಗಲಾ ಎಂದು ಕೇಳಿದ್ದರು. ಗುರುಗಳು ಹೂ ಅಂದು ಬಿಟ್ಟರು. ಅಂದು ಮಂತ್ರಾಲಯದಲ್ಲಿ ರಾಯರ ಗರ್ಭಗುಡಿಯಲ್ಲಿ ಮಲಗಿದ್ದ ಅಪ್ಪಾಜಿ ಬೆಳಗ್ಗೆ ಎದ್ದ ಕೂಡಲೇ ಭಗವಾನ್ ಅವರ ಬಳಿ ಈ ಸಿನಿಮಾ ಮಾಡಲೇಬೇಕು ಎಂದು ಹಠ ಹಿಡಿದರು. ಇದು ನಿಜಕ್ಕೂ ನಡೆದದ್ದು, ಇದು ರಾಘವೇಂದ್ರ ಸ್ವಾಮಿ ಕಥೆ ಆಗಿದ್ದು ಎಂದು ಶಿವಣ್ಣ ಅಂದಿನ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ.


Click it and Unblock the Notifications