ಜೀ ಕನ್ನಡದಲ್ಲಿ ಕಾಸು ಗೆಲ್ಲಲು ಹೊಸ 'ಛಾಲೆಂಜ್'
ಕಿರುತೆರೆ ವಾಹಿನಿಗಳಲ್ಲೇ ಕೊಂಚ ವಿಭಿನ್ನ, ವಿಶೇಷ ಎನ್ನುವಂಥ ಕಾರ್ಯಕ್ರಮಗಳನ್ನು ನೀಡುವಲ್ಲಿ ಜೀ ಕನ್ನಡವಾಹಿನಿ ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ರಿಯಾಲಿಟಿ ಶೋಗಳೇ ಅದಕ್ಕೆ ಸಾಕ್ಷಿ. 'ಛಾಲೆಂಜ್' ಹಾಗೂ 'ಕ್ರೇಜಿ ಕಪಲ್ಸ್' ಎಂಬ ಎರಡು ರಿಯಾಲಿಟಿ ಷೋಗಳು ಈ ಹೊಸತನಕ್ಕೆ ಸೇರ್ಪಡೆಯಾಗಲಿವೆ.
ಮೂರು ದಿನ ಹಗಲೂ ರಾತ್ರಿ ಅಂದರೆ 72 ಗಂಟೆಗಳ ಕಾಲ ನಿದ್ರೆ ಮಾಡದೇ ಕೆಲವು ಟಾಸ್ಕ್ ಗಳನ್ನು ಎದುರಿಸುವುದು ಈ ಕಾರ್ಯಕ್ರಮದ ವಿಶೇಷ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ, ನಿರೂಪಕ ಸೃಜನ ಲೋಕೇಶ್ ಕಾರ್ಯಕ್ರಮದ ನಿರೂಪಕ ರಾಜೇಶ್ ಛಾಲೆಂಜ್ ಶೋ ಬಗ್ಗೆ ಕೆಲ ಮಾಹಿತಿಗಳನ್ನು ಹೇಳಿಕೊಂಡರು.

ಇದರಲ್ಲಿ ಗೆದ್ದವರಿಗೆ ರು.10 ಲಕ್ಷಗಳ ಬಹುಮಾನ ಇದೆ. ಒಟ್ಟು 13 ವಾರಗಳ ಕಾಲ 39 ಕಂತುಗಳಲ್ಲಿ ಪ್ರಸಾರವಾಗುವ ಈ ಷೋನಲ್ಲಿ ಭಾಗವಹಿಸಲು 18 ವರ್ಷದಿಂದ 30 ವರ್ಷಗಳ ನಡುವಿನವರು ಮಾತ್ರ ಅರ್ಹರಾಗಿರುತ್ತಾರೆ.
ಇದೇ ಥರದ ಮತ್ತೊಂದು ರಿಯಾಲಿಟಿ ಷೋ ಕೂಡ ಆರಂಭವಾಗುತ್ತಿದ್ದು ಹಿರಿಯ ಕಲಾವಿದೆ ಪದ್ಮಜಾರಾವ್ ಇದರ ನೇತೃತ್ವ ವಹಿಸಿದ್ದಾರೆ. ಡಿಸೆಂಬರ್ 28 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ವಾರದಲ್ಲಿ 2 ದಿನ ರಾತ್ರಿ 9.00 ಗಂಟೆಯಿಂದ 10.00 ಗಂಟೆಗೆಯವರೆಗೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ನವ ದಂಪತಿಗಳು, ಯುವ ಪ್ರೇಮಿಗಳು, ಕೂಡ ಭಾಗವಹಿಸಲು ಅರ್ಹರು. ಹೆಸರೇ ಹೇಳುವಂತೆ ಯುವ ಪ್ರೇಮಿಗಳಿಗಾಗಿಯೇ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಹಿರಿಯ ನಟಿ ಊರ್ವಶಿ ಅವರು ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಇದರ ಮತ್ತೊಂದು ವಿಶೇಷ ಏನೆಂದರೆ ಗಂಡಂದಿರು, ಅಥವಾ ಪುರುಷರು ಟಾಸ್ಕ್ ಗಳನ್ನು ಎದುರಿಸಿದರೆ, ಹೆಂಡತಿಯರು ಅಥವಾ ಮಹಿಳೆಯರು ಜಡ್ಜ್ ಗಳಾಗಿ ಭಾಗವಹಿಸುತ್ತಾರೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಿರ್ಮಾಪಕಿ ಪದ್ಮಜಾರಾವ್ ರೋಮಿಯೋಗೆ ಟೆಸ್ಟ್, ಜ್ಯೂಲಿಯಟ್ ಗೆ ರೆಸ್ಟ್ ಎಂಬ ಕಾನ್ಸೆಪ್ಟ್ ಮೇಲೆ ಈ ಪ್ರೋಗ್ರಾಂ ನಿರೂಪಿತವಾಗಿದೆ. ಫಿಸಿಕಲ್, ಕ್ರೇಜಿ, ಕಿಚನ್, ಹೀಗೆ 4 ಟಾಸ್ಕ್ ಗಳು ಈ ಸ್ಪರ್ಧೆಯಲ್ಲಿರುತ್ತವೆ. 13 ವಾರಗಳ ಕಾಲ 26 ಕಂತುಗಳಲ್ಲಿ ಈ ಕೇಜಿಕಪಲ್ ಪ್ರಸಾರಗೊಳ್ಳಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











