ಪುಟ್ಟಕ್ಕನ ಮಕ್ಕಳು: ಧಾರಾವಾಹಿಗೆ ಬರುವುದಕ್ಕೂ ಮುನ್ನ 20 ರೂಪಾಯಿ ಭಿಕ್ಷೆ ಬೇಡಿದ್ದ ಸ್ನೇಹಾ-ಕಂಠಿ!
ಅರೇ.. ಇದೇನಿದು ಈ ರೀತಿಯೆಲ್ಲಾ ಟೈಟಲ್ ಕೊಟ್ಟಿದ್ದಾರಲ್ಲ ಅಂತ ಶಾಕ್ ಆಗಿದ್ದೀರಾ ಅಲ್ವಾ? ನಂಬರ್ ಒನ್ ಸ್ಥಾನದಲ್ಲಿರುವ ಧಾರಾವಾಹಿ, ಅದರಲ್ಲಿರುವ ಸ್ಟಾರ್‌ಗಳೆಲ್ಲಾ ಅನುಕೂಲವಂತವರೆ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡದೆ ಇರುವುದಿಲ್ಲ. ಆದರೆ ಇದನ್ನು ನಾವೂ ಹೇಳಿದ್ದಲ್ಲ ಸ್ವತಃ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಂಜನಾ ಬುರ್ಲಿ ಅಲಿಯಾಸ್ ಸ್ನೇಹಾ ಹೇಳಿರುವ ಮಾತಿದು. ಯಾಕೆ? ಏನಾಯ್ತು? ಯಾವಾಗ ಈ ರೀತಿ ಮಾಡಿದ್ದರು ಎಂಬೆಲ್ಲಾ ಪ್ರಶ್ನೆಗಳಿಗೆ ಖಂಡಿತ ಉತ್ತರ ಸಿಗುತ್ತೆ ಮುಂದೆ ಓದಿ.
ಸದ್ಯ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಿಂದಲೂ ನಂಬರ್ ಒನ್ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ. ಕಥೆಯಲ್ಲಿ ಕೊಂಚವೂ ಬೋರ್ ಆಗಿಲ್ಲ. ಟ್ವಿಸ್ಟ್ ಅಂಡ್ ಟರ್ನಿಂಗ್‌ನಲ್ಲಿ ಮುಂದೆ ಸಾಗುತ್ತಾ ಇದೆ. ಅದರಲ್ಲೂ ಕಂಠಿ ಅಂಡ್ ಸ್ನೇಹಾ ಲವ್ ಸ್ಟೋರಿ, ಸ್ನೇಹಾ ಅಂಡ್ ಬಂಗಾರಮ್ಮನ ಕುತೂಹಲದ ಭೇಟಿಗೆ ಎಲ್ಲರೂ ಕಾಯುತ್ತಿದ್ದಾರೆ.

20 ರೂಪಾಯಿ ಭಿಕ್ಷೆ ಬೇಡಿದ ಅನುಭವ ಹೇಗಿತ್ತು?
ಈ ವಿಚಾರ ಸ್ವಲ್ಪ ಶಾಕ್ ಎನಿಸದೆ ಇರುವುದಿಲ್ಲ. ಆದರೆ ಇದು ಕೂಡ ಕಲಾವಿದರಿಗೆ ನೀಡಿದ ಟಾಸ್ಕ್ ಆಗಿತ್ತಂತೆ. ಈ ಬಗ್ಗೆ ಸಂಜನಾ ಬುರ್ಲಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾದಾಗ ಖುಷಿಯಾಗಿತ್ತು. ಆದರೆ ಧಾರಾವಾಹಿ ಶುರುಗೂ ಮುನ್ನ ನಮಗೆ ಟ್ರೈನಿಂಗ್ ಅಂತ ಕಳುಹಿಸಿದ್ದರು. ಪಾತ್ರಕ್ಕೆ ತಕ್ಕ ಹಾಗೇ ನಾವೆಲ್ಲಾ ಇರಲೇಬೇಕಲ್ಲವಾ? ಹಾಗಾಗಿ ನಮ್ಮನ್ನು ಒಂದು ವಾರಗಳ ಕಾಲ ಟ್ರೈನಿಂಗ್ ಮಾಡಿಸಿದ್ದರು. ಕಾಮಿಡಿ ಕಿಲಾಡಿಗಳಲಿದ್ದ ಮೆಂಟರ್ ಒಬ್ಬರು ನನ್ನ ಮತ್ತು ಧನುಶ್ (ಕಂಠಿ) ಗೆ ಟ್ರೈನಿಂಗ್ ಕೊಟ್ಟಿದ್ದರು. ಅದು ಕೊನೆ ದಿನದ ಟ್ರೈನಿಂಗ್. ಹಿಂದಿನ ದಿನವೇ ನಾಳೆ ನಿಮಗೊಂದು ಸಪ್ರೈಸ್ ಟಾಸ್ಕ್ ಇರುತ್ತೆ ಅಂತ ಹೇಳಿದ್ದರು.
ನಾವೂ ಏನು ಅಂತ ತಲೆ ಕೆಡಿಸಿಕೊಂಡೆ ಕ್ಲಾಸ್‌ಗೆ ಹೋಗಿದ್ದೆವು. ಹೋದ ಕೂಡಲೇ ಭಿಕ್ಷೆ ಬೇಡಿಕೊಂಡು ಬನ್ನಿ ಅಂದರು. ನಮ್ಮಿಬ್ಬರಿಗೂ ಶಾಕ್. ಮುಖ ಮುಖ ನೋಡಿಕೊಂಡೆವು. ಅದರಲ್ಲೂ ಒಂದೊಂದು ರೂಪಾಯಿ ಕಾಯಿನ್ ಇಪ್ಪತ್ತು ಬೇಕು ಅಂತ ಹೇಳಿದ್ದರು. ಅದು ಭಿಕ್ಷೆ ಕೇಳುವಾಗ ಕಾರಣವೂ ಹೇಳುವ ಹಾಗಿಲ್ಲ. ನಾವೂ ಅಂಜಿಕೆಯಿಂದಲೇ ಹೋದೆವು. ಇಬ್ಬರು ಒಂದೊಂದು ಕಡೆ ಹೋಗಿ ಒಂದು ರೂಪಾಯಿ ಕೊಡುತ್ತೀರಾ ಎಂದು ಕೇಳಿದೆವು. ಮೂರು ಜನರ ಬಳಿ ಕೇಳುವ ತನಕ ಅಷ್ಟೇ ಅಂಜಿಕೆ ಇದ್ದದ್ದು ಆಮೇಲೆ ಸುಲಭ ಆಗೋಯ್ತು. ಇಪ್ಪತ್ತು ರೂಪಾಯಿ ಹೊಂದಿಸಿ, ಮೆಂಟರ್ ಹತ್ರ ಬಂದು ಜೋಡಿಸಿದೆವು. ಆ ಫೋಟೋ ಕೂಡ ಇನ್ನು ಇದೆ. ಆ ಟಾಸ್ಕ್ ಯಾಕೆ ಎಂದರೆ ಯಾವ ಪಾತ್ರವನ್ನು ಅಳುಕಿನಿಂದ ಮಾಡಬಾರದು ಎಂಬ ಕಾರಣಕ್ಕೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸ್ನೇಹಾ ನಿಜ ಜೀವನದಲ್ಲಿ ಇರುವುದು ಹೇಗೆ..?
ಪುಟ್ಟಕ್ಕನ ಮೂರು ಮಕ್ಕಳು ಮೂರು ಮುತ್ತುಗಳಿದ್ದಂತೆ. ಸಹನಾ ಮಾತು ಆಡಿದರೆ ಹೆಚ್ಚು, ನಾಚಿಕೆ ಸ್ವಭಾವ. ಸುಮ ಚಿನುಕುರಳಿ. ಇನ್ನು ಚಿಕ್ಕ ಹುಡುಗಿ ಅಲ್ಲವಾ? ಹೀಗಾಗಿ ತಂಟೆ, ತಲೆ ಹರಟೆ ಹೆಚ್ಚು. ಆದರೆ ಸ್ನೇಹಾ ಪ್ರೀತಿ ವಿಶ್ವಾಸಕ್ಕೆ ತಲೆ ಬಾಗುವ ಹೆಣ್ಣು ಅಹಂಕಾರ ಎಂದು ಬಂದರೆ ಶ್ರೀಮಂತರಿಗೂ ಎದುರು ನಿಂತು ತಿರುಗೇಟು ನೀಡುವ ಗಟ್ಟಿ ಹೆಣ್ಣು. ತಪ್ಪು ಮಾಡಲ್ಲ, ತಪ್ಪು ಮಾಡಿದವರನ್ನು ಬಿಡಲ್ಲ. ಯಾವಾಗಲೂ ಜೋರು ಧ್ವನಿ. ಆದರೆ ಸ್ನೇಹಾ ನಿಜಜೀವನದಲ್ಲಿ ಹೀಗೆ ಇರುವುದಾ ಎಂದರೆ ಅಲ್ಲ. ಈ ಬಗ್ಗೆಯೂ ಮಾತನಾಡಿರುವ ಸಂಜನಾ, ನೀವೂ ತೆರೆಮೇಲೆ ಸ್ನೇಹಾಳನ್ನು ನೋಡಿರಬಹುದು. ಜೋರಾಗಿ ಕಿರುಚುವುದು, ಗಲಾಟೆ ಮಾಡುವುದು ಮಾಡುತ್ತಾರೆ. ಆದರೆ ನಾನು ನಿಜ ಜೀವನದಲ್ಲಿ ಅಷ್ಟು ಜೋರಾಗಿ ಮಾತನಾಡಿದವಳಲ್ಲ. ಆ ಬೇಸ್ ವಾಯ್ಸ್ ಬರುವುದಕ್ಕೆ ಸಾಕಷ್ಟು ಟ್ರೈನಿಂಗ್ ಕೊಟ್ಟಿದ್ದಾರೆ. ಟ್ರೈನಿಂಗ್ ಕ್ಲಾಸ್ ಕಿತ್ತು ಹೋಗಬೇಕು ಆ ರೀತಿ ನನ್ನ ಬಳಿ ಜೋರಾಗಿ ಕೂಗಿಸುತ್ತಿದ್ದರು. ಆ ತರಬೇತಿಯಿಂದಲೇ ಅಷ್ಟು ಏರು ಧ್ವನಿ ಬಂದಿರುವುದು ಎಂದಿದ್ದಾರೆ.

ಬುಲೆಟ್ ಓಡಿಸಿದ್ದರ ಬಗ್ಗೆ ಸ್ನೇಹಾ ಹೇಳಿದ್ದೇನು?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಸ್ನೇಹಾಳನ್ನು ಮೊದಲು ಭೇಟಿ ಮಾಡುವುದು ಮಾರ್ಕೆಟ್‌ನಲ್ಲಿ. ಆ ಬಳಿಕ ಅವನ ಬೈಕ್ ಅನ್ನೇ ಕದ್ದು ತೆಗೆದುಕೊಂಡು ಹೋದಾಗ ಮನದ ಮರೆಯಲಿ ಕಳೆದು ಹೋದ. ಧಾರಾವಾಹಿಯಲ್ಲಿ ಹಲವು ಸಲ ಹಲವು ಬೈಕ್‌ಗಳನ್ನು ಸ್ನೇಹಾ ಓಡಿಸಿದ್ದಾರೆ. ಅದು ಧಾರಾವಾಹಿ ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿದೆ. ಆದರೆ ಸ್ನೇಹಾ ಅಲಿಯಾಸ್ ಸಂಜನಾಗೆ ರಿಯಲ್ ಲೈಫ್‌ನಲ್ಲಿ ಈ ರೀತಿಯ ಗಾಡಿಗಳನ್ನೆಲ್ಲಾ ಓಡಿಸಿ ಅಭ್ಯಾಸವಿರಲಿಲ್ಲವಂತೆ. ಧಾರಾವಾಹಿಗಾಗಿಯೇ ಬೈಕ್ ಓಡಿಸುವುದನ್ನು ಕಲಿತಿದ್ದಾರೆ.

ಕಂಠಿ ತಡ ಮಾಡದೆ ಪ್ರೀತಿ ಹೇಳಿಕೊಳ್ಳುತ್ತಾನಾ ?
ಧಾರಾವಾಹಿ ಯಶಸ್ಸಿನ ಹಾದಿಯಲ್ಲಿ ಸುಗಮವಾಗಿ ಸಾಗುತ್ತಿದೆ. ಕಂಠಿ ಮೊದಲು ಪ್ರೀತಿ ಹೇಳಿ ಆಮೇಲೆ ಸತ್ಯ ಹೇಳುವ ಸಾಹಸಕ್ಕೆ ಕೈ ಹಾಕಿದ್ದಾನೆ. ಆದರೆ ಪ್ರೀತಿ ಹೇಳಿಕೊಳ್ಳುವುದಕ್ಕೂ ಮುನ್ನವೇ ಹಲವು ಸಮಸ್ಯೆಗಳು ಕಾಡುತ್ತಿವೆ. ಇದೀಗ ಪೊಲೀಸಪ್ಪನನ್ನು ಮಾರ್ಕೆಟ್‌ನಲ್ಲಿ ಹೊಡೆದು, ಭಯ ಹುಟ್ಟಿಸಿದ್ದಾನೆ. ಬಂಗಾರಮ್ಮನ ಮಗ ದೊಡ್ಡ ರೌಡಿ ಎಂಬುದು ಮೊದಲೇ ಸ್ನೇಹಾ ಮನಸ್ಸಲ್ಲಿ ಬೇರೂರಿ ಬಿಟ್ಟಿದೆ. ಹೀಗಿರುವಾಗ ಒಂದು ವೇಳೆ ಪೊಲೀಸ್ ಬಂದು ಕಂಠಿ ಹೊಡೆದ ಎಂದಾಗ ಮತ್ತೆ ಕೋಪ ಹೆಚ್ಚಾಗುತ್ತದೆ. ಪ್ರೀತಿ ಹುಟ್ಟುವುದು ಅದ್ಯಾವಾಗ ಗೊತ್ತಿಲ್ಲ.


Click it and Unblock the Notifications











