ಡ್ಯಾನ್ ಕರ್ನಾಟಕ ಡ್ಯಾನ್: DKDಯಲ್ಲಿ ಅಮ್ಮನ ನೆನೆದು ಕಣ್ಣೀರಾಕಿದ ಶಿವಣ್ಣ..!
ಅಮ್ಮ ಎಲ್ಲಾ ಕಾಲಕ್ಕೂ ಸಲ್ಲುವವಳು. ಆಕೆಯ ತ್ಯಾಗ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ತನ್ನ ಜೀವ ಒತ್ತೆ ಇಟ್ಟು ಮಗುವಿಗೆ ಜನ್ಮ ನೀಡುವ ಜನ್ಮದಾತೆ. ನಮ್ಮ ಇಡೀ ಬದುಕು ಆಕೆ ನೀಡಿದ ಭಿಕ್ಷೆ. ಯಾವತ್ತಿಗೂ ಆಕೆಯ ಋಣ ತೀರಿಸಲು ಸಾಧ್ಯವೇ ಆಗುವುದಿಲ್ಲ. ಜೀ ಕನ್ನಡದಲ್ಲಿ ಅಮ್ಮಂದಿರ ನೆನಪುಗಳನ್ನು ಕಣ್ಣ ಮುಂದೆ ತರಿಸಿ ಕಣ್ಣೀರಾಗುವಂತೆ ಮಾಡಿದ್ದಾರೆ.
'ಡ್ಯಾನ್ಸ್ ಕರ್ನಾಕಟ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಮೈಝುಮ್ಮೆನ್ನಿಸುವ ಪರ್ಫಾಮೆನ್ಸ್ ಅನ್ನು ನೀಡುತ್ತಿದ್ದಾರೆ. ಮಕ್ಕಳ ಡ್ಯಾನ್ಸ್‌ಗೆ ಮನಸ್ಸಲ್ಲಿ ಖುಷಿ ಪಡುವ ಜೊತೆಗೆ ಖುರ್ಚಿ ಬಿಟ್ಟು ಮೇಲೆದ್ದು ಬಿಡುವಂತಹ ಕಠಿಣ ಪ್ರದರ್ಶನಗಳು ಕಾಣಸಿಗುತ್ತವೆ. ಪ್ರತಿವಾರ ಭಯದಲ್ಲೇ ಪರ್ಫಾಮೆನ್ಸ್ ನೋಡುತ್ತಿದ್ದವರಿಗೆ ಅಕ್ಷರಶಃ ಮನಸ್ಸು ಮೂಕವಾಗುವಂತ ನೃತ್ಯ ಮಾಡಿದ್ದಾರೆ ಮಕ್ಕಳು.

ಅಮ್ಮನ ಫೋಟೊ ನೋಡಿ ಕಣ್ಣೀರಾದ ಶಿವಣ್ಣ
ಸೆಲೆಬ್ರೆಟಿಯಾಗಲಿ, ಸಾಮಾನ್ಯ ಮನುಷ್ಯನಾಗಲಿ ಅವರವರ ಜೀವನದಲ್ಲಿ ತಾಯಂದಿರು ಅತ್ಯಮೂಲ್ಯ ಪಾತ್ರವಹಿಸಿರುತ್ತಾರೆ. ಆಕೆಯೊಟ್ಟಿಗೆ ಬಾಂಧವ್ಯ ಬೆಸೆದಿರುತ್ತದೆ. ಆದರೆ ಜನಸಾಮಾನ್ಯನ ಜೀವನ ಹೊರತುಪಡಿಸಿ ಸೆಲೆಬ್ರೆಟಿ ವಿಚಾರಕ್ಕೆ ಬರುವುದಾದರೆ ಶಿವಣ್ಣನ ಜೀವನದಲ್ಲಿ ಅಮ್ಮ ಎಷ್ಟು ಮುಖ್ಯವಾಗಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಾ ವಿಚಾರ. ಪಾರ್ವತಮ್ಮ ಅವರಿಗೆ ಮಕ್ಕಳು ಇನ್ನೂ ಪುಟ್ಟ ಮಕ್ಕಳೇ ಆಗಿದ್ದರು. ತಮ್ಮ ಮಕ್ಕಳ ಸಿನಿಮಾದ ಎಲ್ಲಾ ಜವಬ್ದಾರಿಯನ್ನೂ ಪಾರ್ವತಮ್ಮ ಅವರೇ ನೋಡಿಕೊಳ್ಳುತ್ತಿದ್ದರು. ಸೆಟ್‌ಗೆ ಬಂದು ಮಕ್ಕಳ ನಟನೆಯನ್ನು ನೋಡುತ್ತಿದ್ದರು. ತನ್ನ ಮೂರು ಮಕ್ಕಳಿಗೂ ಯಾವ ರೀತಿಯ ಪಾತ್ರಗಳು ಮ್ಯಾಚ್ ಆಗುತ್ತೆ ಎಂಬುದನ್ನು ನಿರ್ಧಾರ ಮಾಡುತ್ತಿದ್ದರು. ಅಣ್ಣಾವ್ರು ಹೋದ ಮೇಲೆ ಪಾರ್ವತಮ್ಮ ಅವರು ಕೂಡ ಅಕ್ಷರಶಃ ಇಳಿದು ಹೋಗಿದ್ದರು. ಆದರೂ ಮಕ್ಕಳ ಸಿನಿಮಾ ವಿಚಾರದಲ್ಲಿ ಅದೇ ಪ್ರೀತಿ, ಅದೇ ಕಾಳಜಿ. ಶಿವಣ್ಣ, ರಾಘವೇಂದ್ರ ರಾಜ್ಕುಮಾರ್, ಅಪ್ಪುಗೆ ಅಮ್ಮ ಎಂದರೆ ಪ್ರಾಣ. ಇಂದು ತಾಯಂದಿರ ದಿನಾಚರಣೆ. ಡಿಕೆಡಿಯಲ್ಲಿ ಅಮ್ಮನ ಫೋಟೊ ಕಂಡೊಡನೆ ನೋವು ತಡೆದುಕೊಳ್ಳಲಾಗದೆ ಶಿವಣ್ಣ ಕಣ್ಣೀರು ಹಾಕಿದ್ದಾರೆ.

ಬೇಡುವೆನು ವರವನ್ನು ಹಾಡು ಹಾಡಿದ ಶಿವಣ್ಣ
ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಹಾಡಿಗೆ 15 ವರ್ಷದ ಸಹನಾ ಡ್ಯಾನ್ಸ್ ಮಾಡಿದ್ದಾಳೆ. ಈ ಡ್ಯಾನ್ಸ್‌ನಲ್ಲಿ ಜಡ್ಜಸ್ ತಮ್ಮ ತಾಯಂದಿರ ಜೊತೆಗಿರುವ ಫೋಟೊ ಹಾಕಿದ್ದಾರೆ. ಶಿವಣ್ಣನ ಕಣ್ಣಲ್ಲಿ ನೀರು ಕಂಡು ಅನುಶ್ರೀ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಪರ್ಫಾಮೆನ್ಸ್ ಬಗ್ಗೆ ಮಾತನಾಡಿದ ಶಿವಣ್ಣ, ಇದೊಂದು ಬೇರೆ ಲೋಕಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟಿದೆ. ನಂದು ಬಂದು ಬಿಡುತ್ತಾ ಎಂಬ ಭಯ ಇತ್ತು. ಬಂದೇ ಬಿಡ್ತು ಯಾವ ಫೀಲಿಂಗ್ಸ್ ಬೇಕಾದರೂ ಮರೆಯಬಹುದು. ತಾಯಿ ಫೀಲಿಂಗ್ಸ್ ಮರೆಯೋದಕ್ಕೆ ಆಗಲ್ಲ. ನನಗೆ ತುಂಬಾ ಇಷ್ಟವಾದ ಫೋಟೊ ಇದು. ಎಲ್ಲರೂ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನನಗೆ ಆ ಫೋಟೊ ನೋಡಿದ ಕೂಡಲೇ ದುಃಖ ತಡೆಯುವುದಕ್ಕೆ ಆಗಲಿಲ್ಲ. ಎಷ್ಟೇ ಜನ್ಮ ಹೋಗಲಿ ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನ್ನು ಕಡೆ ತನಕ ಮರೆಯಲ್ಲ ಜೋಗಿ, ಕಡೆ ತನಕ ಮರೆಯಲ್ಲ ಜೋಗಿ ಅಂತ ಅದ್ಭುತವಾಗಿ ಹಾಡಿನ ಮೂಲಕ ಅಮ್ಮನನ್ನು ನೆನೆದಿದ್ದಾರೆ.
ಅಮ್ಮ ಎಂದರೆ ಏನು ಗೊತ್ತಾ..?
ಸಹನಾ ಮಾಡಿದ ಡ್ಯಾನ್ಸ್ ಮನರಂಜನೆಯ ಜೊತೆಗೆ ಎಲ್ಲರಿಗೂ ಕಣ್ಣೀರು ಬರಿಸಿದ್ದರಲ್ಲಿ ಅನುಮಾನವಿಲ್ಲ. ಬರೀ ಜಡ್ಜ್‌ಗಳಿಗೆ ಮಾತ್ರ ಅಲ್ಲ, ನೋಡುಗರಿಗೂ ಖಂಡಿತಾ ಕಣ್ಣೀರು ತರಿಸುತ್ತದೆ. ಪರ್ಫಾಮೆನ್ಸ್ ನಡುವೆ ರಕ್ಷಿತಾ ಮತ್ತು ಅವರ ತಾಯಿ ಮಮತಾ ರಾವ್ ಫ್ರೇಮ್, ಅರ್ಜುನ್ ಜನ್ಯ ಮತ್ತು ಅವರ ತಾಯಿ, ಚಿನ್ನಿ ಪ್ರಕಾಶ್ ಮತ್ತು ಅವರ ತಾಯಿ, ಅನುಶ್ರೀ ಮತ್ತು ಅವರ ತಾಯಿ, ಶಿವಣ್ಣ ಮತ್ತು ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಫೋಟೊಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ವೇಳೆ ತನ್ನ ತಾಯಿ ಬಗ್ಗೆ ಮಾತನಾಡಿದ ರಕ್ಷಿತಾ, ನಂಗೆ ನನ್ನ ಅಮ್ಮ ಎಂದರೆ ಒಂದು ದೊಡ್ಡ ಶಕ್ತಿ. ಎಲ್ಲವು ಆಕೆಯೇ ಆಗಿದ್ದರು ಎಂದಾಗ ಖುಷಿ, ಪ್ರೀತಿ ಎಲ್ಲವೂ ಒಟ್ಟೊಟ್ಟಿಗೆ ಕಾಣಿಸಿತ್ತು. ಅಮ್ಮಂದಿರ ಜೊತೆಗಿನ ಫೋಟೊ ನೋಡಿದ ಕೂಡಲೇ ಎಲ್ಲರ ಮೂಖಗಳು ಸಂತಸದಿಂದ ಅರಳಿದ್ದವು. ಜೊತೆಗೆ ಸಹನಾ ಆಕೆಯ ತಾಯಿ ಮೇಲಿನ ಪ್ರೀತಿ, ಮಾತುಗಳನ್ನು ಕೇಳಿ ನೋಡುಗರಿಗೂ ದುಃಖ ಉಮ್ಮಳಿಸಿ ಬಂದಿದೆ. ಪ್ರೋಮೊದಲ್ಲಿಯೇ ಆ ರೇಂಜಿಗೆ ಸೆಳೆಯುವ ಡಿಕೆಡಿ ಇನ್ನು ಇವತ್ತು ಫುಲ್ ಎಪಿಸೋಡ್ ಅದೆಷ್ಟು ಕಣ್ಣೀರು ಹಾಕಿಸುತ್ತದೆಯೋ ಗೊತ್ತಿಲ್ಲ.
ಮಕ್ಕಳ ಜೊತೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಶಿವಣ್ಣ
ತಾಯಂದಿರ ದಿನಕ್ಕಾಗಿ ಈ ವಾರದ ಡಿಕೆಡಿಯನ್ನು ಅರ್ಪಣೆ ಮಾಡಲಾಗಿದೆ. ಅದರ ಜೊತೆಗೆ ಒಳ್ಳೊಳ್ಳೆ ಪರ್ಫಾಮೆನ್ಸ್ ನೀಡಲಾಗಿದೆ. ಅದರಲ್ಲೂ ಗಗನ್ ಮತ್ತು ದಿಶಾ ಶಿವಣ್ಣನಿಗೆ ಫೇವರಿಟ್ ಆಗಿರುವಂತ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಅದೇ ಊರುಮಿಳಾ ಊರುಮಿಳಾ ಹಾಡು. ಇಬ್ಬರ ಡ್ಯಾನ್ಸ್ ನೋಡಿ ಕಳೆದು ಹೋದ ಶಿವಣ್ಣ ತಾನು ಕೂಡ ಸ್ಟೇಜ್ ಮೇಲೆ ಬಂದು ಡ್ಯಾನ್ಸ್ ಮಾಡಿದ್ದಾರೆ.


Click it and Unblock the Notifications











