Mahanati Grand Finale: 'ಮಹಾನಟಿ' ಅಚ್ಚರಿ ಫಲಿತಾಂಶ; ವಿಜೇತೆಗೆ ಸಿಕ್ಕ ಬಹುಮಾನ ಏನು?
ಕನ್ನಡ ಕಿರುತೆರೆಯ 'ಮಹಾನಟಿ' ಶೋಗೆ ತೆರೆ ಬಿದ್ದಿದೆ. ಗ್ರ್ಯಾಂಡ್ ಫಿನಾಲೆಯ ದಿನ ಐದು ಫೈನಲಿಸ್ಟ್‌ಗಳು ವೇದಿಕೆಗೆ ತಲುಪಿದ್ದರು. ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ, ಆರಾಧನಾ ಭಟ್ ಫಿನಾಲೆ ವೇದಿಕೆಯಲ್ಲಿ ಇದ್ದರು. ಆದರೆ ಇದರಲ್ಲಿ ಗೆಲುವು ಮಾತ್ರ ಒಬ್ಬರಿಗೆ ಮೀಸಲಾಗಿತ್ತು. ಕೊನೆಯವರೆಗೂ ನಾವೂ ವಿನ್ ಆಗಬಹುದು ಎಂಬ ಆತ್ಮವಿಶ್ವಾಸದಲ್ಲಿಯೇ ಕಳೆದರು. ಆದರೆ ಮಹಾನಟಿಯ ಚಿನ್ನದ ಕಿರೀಟ ತೊಟ್ಟಿದ್ದು ಮಾತ್ರ ಪ್ರಿಯಾಂಕ.
ಮಹಾನಟಿಯರ ಪ್ರತಿಭೆಗೆ ಕೈಗನ್ನಡಿ ಹಿಡಿದಿದ್ದು ಐದು ನಿರ್ದೇಶಕರು. ಜಯತೀರ್ಥ, ಶಶಾಂಕ್, ಸಂತು, ಪನ್ನಗಾಭರಣ, ಮಂನ್ಸೋರೆ ಅವರು ಎಲ್ಲಾ ಸ್ಪರ್ಧಿಗಳಿಗಾಗಿ ಶಾರ್ಟ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಮೊದಲ ಬಾರಿಗೆ ಈ ರಿಯಾಲಿಟಿ ಶೋನ ಸ್ಪರ್ಧಿಗಳ ಶಾರ್ಟ್ ಫಿಲ್ಮ್ ಪ್ರಸಾರವಾಗಿದೆ. ಈ ಮೂಲಕ ಸ್ಪರ್ಧಿಗಳ ಪ್ರತಿಭೆ ಇನ್ನಷ್ಟು ಅನಾವರಣವಾಗಿದೆ.

ಪ್ರಿಯಾಂಕಗೆ ಧನ್ಯಶ್ರೀ ತಂದೆ ಫ್ಯಾನ್
ಐದು ಕಂಟೆಸ್ಟೆಂಟ್‌ಗಳು ಶಾರ್ಟ್ ಫಿಲ್ಮ್ ಮಾಡಿದ್ದರು. ಅದರಲ್ಲಿ ಪ್ರಿಯಾಂಕ, ಅನುರಾಗ ಎಂಬ ಶಾರ್ಟ್ ಫಿಲ್ಮ್‌ನಲ್ಲಿ ಅದ್ಬುತವಾಗಿ ನಟಿಸಿದ್ದರು. ಮನೆಯವರ ಬಲವಂತಕ್ಕೆ ತನ್ನ ಕನಸುಗಳನ್ನು ಮರೆಗೊತ್ತಿ ಮದುವೆಯಾದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದು ಈ ಶಾರ್ಟ್ ಫಿಲ್ಮ್ ಸಂದೇಶವಾಗಿತ್ತು. ಎಲ್ಲರಿಂದಾನೂ ಪ್ರಿಯಾಂಕ ಬೇಷ್ ಎನಿಸಿಕೊಂಡಿದ್ದರು. ಜೊತೆಗೆ ವೇದಿಕೆ ಮೇಲೆಯೇ ಪ್ರಿಯಾಂಕ ನೋಡಲು ಅಭಿಮಾನಿ ಸಂಘ ಬಂದಿತ್ತು. ಅದರಲ್ಲಿ ಇನ್ನೊಬ್ಬ ಕಂಟೆಸ್ಟೆಂಟ್ ಧನ್ಯಶ್ರೀ ಅವರ ತಂದೆಯೇ ಅಭಿಮಾನಿ ಸಂಘದ ಮುಖ್ಯಸ್ಥರಾಗಿದ್ದರು.
ಪ್ರಿಯಾಂಕ ಗೆದ್ದ ಹಣವೆಷ್ಟು?
ಐವರಲ್ಲಿ ವೇದಿಕೆ ಮೇಲೆ ಉಳಿದಿದ್ದೇ ಇಬ್ಬರು. ಅನುಶ್ರೀ ಬೇರೆ ವಿನ್ನರ್ ಹೆಸರನ್ನು ಬೇಗ ಘೋಷಿಸದೇ ತಮಾಷೆ ಮಾಡುತ್ತಿದ್ದರು. ಆದರೆ ಇಬ್ಬರಿಗೂ ನಡುಕ ಶುರುವಾಗಿತ್ತು. ಫೈನಲಿ ಪ್ರಿಯಾಂಕ ಹೆಸರು ಘೋಷಣೆಯಾಗಿತ್ತು. ವಿನ್ನರ್ ಆದ್ಮೇಲೆ ಖುಷಿ ಪಡದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಖುಷಿ ಪಟ್ಟ ಪ್ರಿಯಾಂಕಗೆ ಸಿಕ್ಕಿದ್ದು 15 ಲಕ್ಷದ ಪ್ಯೂರ್ ಚಿನ್ನದ ಕಿರೀಟ. ಅದರ ಜೊತೆಗೆ ತಮ್ಮ ನಟನಾ ಕೌಶಲ್ಯದಿಂದಾನೇ ಅವಕಾಶಗಳನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

ಗೆದ್ದ ಪ್ರಿಯಾಂಕ ಹೇಳಿದ್ದೇನು?
'ಈ ಗೆಲುವು ನನ್ನದು ಮಾತ್ರವಲ್ಲ ಎಲ್ಲರದ್ದು. ಈ ಸ್ಕ್ರೀನ್ ಮೇಲೆ ನಾನು ಚೆನ್ನಾಗಿ ಕಾಣಬೇಕು ಅಂದ್ರೆ ಎಲ್ಲಾ ಟೆಕ್ನಿಷಿಯನ್ಸ್ ಕೂಡ ಕಾರಣ. ಇಂದು ವೋಟ್ ಹಾಕಿ ಇಲ್ಲಿಯ ತನಕ ತಂದು ನಿಲ್ಲಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಯೂ. ಏನೇ ಸಾಧನೆ ಮಾಡಿದರೂ ಅದು ಜೀ ಕನ್ನಡದಿಂದ ಮಾತ್ರ ಸಾಧ್ಯ. ಥ್ಯಾಂಕ್ಯೂ ಜೀ ಕನ್ನಡ'.
ರನ್ನರ್ ಅಪ್ ಆದ ಧನ್ಯಶ್ರೀ?
ಇನ್ನು ಮಹಾನಟಿ ವೇದಿಕೆಯಲ್ಲಿ ಆರಂಭದಿಂದಾನೂ ಎಲ್ಲರ ಗಮನ ಸೆಳೆಯುತ್ತಾ ಬಂದಂತವರು ಧನ್ಯಶ್ರೀ. ತಮ್ಮ ಅಭಿನಯದಿಂದ ಧನ್ಯಶ್ರೀ ಗಮನ ಸೆಳೆದರೆ ಅವರ ತಂದೆ ಹಾಸ್ಯದಿಂದ ಗಮನ ಸೆಳೆದರು. ಇದೀಗ ಎರಡನೇ ರನ್ನರ್ ಅಪ್ ಆಗಿ ಹತ್ತು ಲಕ್ಷ ಬಹುಮಾನವನ್ನು ಧನ್ಯಶ್ರೀ ಪಡೆದಿದ್ದಾರೆ. ವಿನ್ನರ್ ಆಗ್ತೀನಿ ಅಂತ ನಿರೀಕ್ಷೆ ಇಟ್ಟುಕೊಂಡಿದ್ದ ಧನ್ಯಶ್ರೀ ಖುಷಿ ಖುಷಿಯಾಗಿಯೇ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇಂದಿನ ಜಗಮಗಿಸೋ ಮಹಾನಟಿ ವೇದಿಕೆಯಲ್ಲಿ ಮೊದಲಿನಿಂದ ಇದ್ದಂತ ಎಲ್ಲ ಸ್ಪರ್ಧಿಗಳಿಗೂ ಗೌರವಪೂರ್ವಕವಾಗಿ ಮೊಮೆಂಟೋ ಕೊಟ್ಟು ಅಭಿನಂದಿಸಲಾಗಿದೆ.


Click it and Unblock the Notifications











