Mahanati: 'ವಿಕ್ರಾಂತ್ ರೋಣ' ಬೆಡಗಿಗೆ ಧ್ವನಿ ಕೊಟ್ಟವರು ಇವರೇ: 'ಮಹಾನಟಿ' ವೇದಿಕೆಯಲ್ಲಿ ಆಶಿಕಾ ಕಣ್ಣೀರ ಕಥೆ
ಜೀ ಕನ್ನಡದಲ್ಲಿ ಹೊಸದೊಂದು ರಿಯಾಲಿಟಿ ಶೋಗೆ ಅಧಿಕೃತ ಚಾಲನೆ ಸಿಕ್ಕಿದೆ. 'ಮಹಾನಟಿ' ಆಗಬೇಕೆಂದು ಕನಸು ಹೊತ್ತವರಿಗೆ ರೆಕ್ಕೆ ಕಟ್ಟಿ, ಹಾರಲು ಜೀ ಕನ್ನಡ ವೇದಿಕೆ ಸಿದ್ದ ಮಾಡಿದೆ. ಈ ವೇದಿಕೆ ಮೂಲಕ ಹಲವರು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಹೀಗಾಗಿ ಹೊಸ ಹೊಸ ಪ್ರತಿಭೆಗಳು ಮನರಂಜನೆ ನೀಡುವುದಕ್ಕೆ ಬರುತ್ತಿದ್ದಾರೆ.
ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಮಹಾನಟಿ ಎನಿಸಿಕೊಂಡವರು ಹಲವರಿದ್ದಾರೆ. 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿಯರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಕಲ್ಪನಾ, ಆರತಿ, ಸರಿತಾ, ಲಕ್ಷ್ಮೀ, ಸುಧಾರಾಣಿ, ಶೃತಿ ಹೀಗೆ ಒಬ್ಬರಲ್ಲ ಇಬ್ಬರಲ್ಲ ದೊಡ್ಡ ಲೀಸ್ಟ್ ಇದೆ. ಹೀಗಿರುವಾಗ ಈಗ ಮಹಾನಟಿಯರಾಗಲೂ ಪ್ರತಿಭೆ ಇದ್ದವರು ಬರುತ್ತಿದ್ದಾರೆ.

'ವಿಕ್ರಾಂತ್ ರೋಣ'ನಿಗೆ ಧ್ವನಿಯಾದವರು
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾವನ್ನು ಎಲ್ಲರೂ ನೋಡಿಯೇ ಇರುತ್ತೀರಿ. ಅದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದರು. ಈ ಬಾಲಿವುಡ್ ಬೆಡಗಿಗೆ ಧ್ವನಿಯಾಗಿರುವುದು ಕನ್ನಡದವರು. ಅದರಲ್ಲೂ ಒಂದು ರೀತಿಯ ರಾಗದ ಧ್ವನಿ, ಕಿಚಾಯಿಸುವ ಧ್ವನಿಯಲ್ಲಿಯೇ ವಾಯ್ಸ್ ಕೊಟ್ಟಿರುವುದು. ಕೇಳುವುದಕ್ಕೇನೆ ರೇಗಿಸುವಂತೆ ಇದೆ.
ಆಶಿಕಾ ಶರ್ಮಾ ಎಲ್ಲಿಯವರು
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಧ್ವನಿಯಾಗಿರುವುದು ಆಶಿಕಾ ಶರ್ಮಾ. ಇವರು ಮೂಲತಃ ಬೆಂಗಳೂರಿನವರು. ವೇದಿಕೆ ಮೇಲೆ ಬರುವಾಗಲೇ ಒಂದು ಜೋಶ್ ಇಟ್ಟುಕೊಂಡು ಬಂದರು. ಅವರ ಕಾನ್ಫಿಡೆನ್ಸ್ ಜಡ್ಜಸ್ ಗಮನ ಸೆಳೆದಿತ್ತು. ಮೊದಲಿಗೆ ಸ್ವಾಗತ ಮಾಡಿ, ಪ್ರೇಮಾ ಅವರು ಪ್ರಶ್ನೆಗಳನ್ನು ಕೇಳಿದರು. ಆಶಿಕಾ ಶರ್ಮಾ ಡಬ್ಬಿಂಗ್ ಕಲಾವಿದೆ ಎಂದು ಕೇಳಿದಾಗ ಪ್ರೇಮಾ ಅವರಿಗೆ ವಾವ್ ಎನಿಸಿತ್ತು. ಯಾಕಂದ್ರೆ ಕಲಾವಿದೆಯರಿಗೆ ವಾಯ್ಸ್ ಕೊಡುವವರು ಎಂದಾಗ ಖುಷಿ ಆಗಲೇಬೇಕು.

ನಿಶ್ವಿಕಾ ನಾಯ್ಡುಗೆ ಕುತೂಹಲ
ಆಶಿಕಾ ಸುಮಾರು 200ಕ್ಕೂ ಸಿನಿಮಾಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. 'ವಿಕ್ರಾಂತ್ ರೋಣ' ಹೆಸರೇಳುತ್ತಿದ್ದಂತೆ ನಿಶ್ವಿಕಾ ನಾಯ್ಡುಗೆ ಆ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಬಳಿಕ ಒಂದು ಲೈವ್ ನೋಡೋಣ ಎಂದು ಕೇಳಿದಾಗ ಆಶಿಕಾ ಕೂಡ ಖುಷಿಯಾದರು. ಅದರಲ್ಲಿ 'ಮದವೇರಿಸೋ ಮದನಾರಿಯನ್ನು ನೋಡೊ ತಿಳಿದವರೆಷ್ಟೋ, ಮಡಿದವರೆಷ್ಟೋ. ಗೊತ್ತಿಲ್ಲದೆ ಏನು ಊರಲ್ಲಿ ಇವತ್ತು ಇವನ್ನೊಬ್ಬನದ್ದೇ ಹೆಸರು ಚಾಲ್ತಿಯಲ್ಲಿರುವುದು, ವಿಕ್ರಾಂತ್ ರೋಣ' ಈ ಡೈಲಾಗ್ ಹೇಳಿದ ಕೂಡಲೇ ಎಲ್ಲರಿಗೂ ಫುಲ್ ಖುಷಿಯಾಗಿದೆ.
ತಾಯಿ ನೆನೆದು ಕಣ್ಣೀರಿಟ್ಟ ಆಶಿಕಾ
ಮಹಾಭಾರತದ ಒಂದು ಸನ್ನಿವೇಶ ವೇದಿಕೆ ಮೇಲೆ ತಂದು ಜಡ್ಜಸ್ ಗಮನ ಸೆಳೆದಿದ್ದಾರೆ. ಸೆಲೆಕ್ಟ್ ಆದ ಮೇಲೆ ಆಶಿಕಾ ಕಣ್ಣೀರು ಹಾಕಿದ್ದಾರೆ. ಮಕ್ಕಳು 6 ವರ್ಷ ಇದ್ದಾಗಲೇ ಗರ್ಭಿಣಿಯಾಗಿದ್ದ ತಾಯಿಗೆ ಸರಿಯಾದ ಟ್ರೀಟ್‌ಮೆಂಟ್ ಸಿಗದೆ ಸಾವನ್ನಪ್ಪಿದ್ದರು. ಮಕ್ಕಳನ್ನು ನೋಡಿಕೊಳ್ಳಲೆಂದು ಇನ್ನೊಬ್ಬರನ್ನು ತಂದಾಗ ಅವರಿಂದಾನೂ ತೊಂದರೆ ಅನುಭವಿಸಿದ್ದಾರೆ. ಮನೆ ಬಿಟ್ಟು ಅನಾಥಶ್ರಮ ಸೇರಿ, ಶಿಕ್ಷಣ ಪಡೆಯುತ್ತಿದ್ದಾಗಲೇ ಹಣದ ಸಮಸ್ಯೆ. ತಿನ್ನುವುದಕ್ಕೂ ದುಡ್ಡಿರದ ಸ್ಥಿತಿ. ಹತ್ತು ರೂಪಾಯಿ ಸಿಕ್ಕಿದರೂ ಅಂದು ಅಕ್ಕ-ತಂಗಿ ಹಂಚಿಕೊಂಡು ತಿನ್ನುತ್ತಿದ್ದರು. ಅಷ್ಡು ಸುಮಧುರ ಧ್ವನಿ ಇರುವ ಆಶಿಕಾರ ಕಷ್ಟ ಕೇಳಿ ಇಡೀ ವೇದಿಕೆ ಕಣ್ಣೀರಾಗಿದೆ.


Click it and Unblock the Notifications











