SeethaRaama: 5 ದಿನ.. ದಿನಕ್ಕೊಂದು ಕಥೆ.. 'ಸೀತಾರಾಮ' ವಿದಾಯ ಹೇಗಿರುತ್ತೆ?
ಕನ್ನಡದ ಮತ್ತೊಂದು ಜನಪ್ರಿಯ ಕಿರುತೆರೆ ಧಾರಾವಾಹಿ ಮುಕ್ತಾಯದ ಹಂತ ತಲುಪಿದೆ. ಸಾಕಷ್ಟು ವಿಭಿನ್ನ ಪ್ರಯತ್ನಗಳನ್ನು ಈ ಧಾರಾವಾಹಿಯಲ್ಲಿ ಮಾಡಲಾಗಿತ್ತು. ಕಥೆಯನ್ನು ಎಳೆದು ಎಳೆದು ಸುಸ್ತಾಗಿ ಇದೀಗ ಧಾರಾವಾಹಿಯನ್ನು ಮುಗಿಸಲು ತೀರ್ಮಾನಿಸಲಾಗಿದೆ.
ಜೀ ಮರಾಠಿ ವಾಹಿನಿಯಲ್ಲಿ ಮೂಡಿ ಬಂದಿದ್ದ 'ಮಾಝಿ ತುಝಿ ರೇಶಿಮ್‌ಗತ್' ಧಾರಾವಾಹಿ ರೀಮೆಕ್ 'ಸೀತಾರಾಮ'. ಎಂ.ಕುಮಾರ್ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರ್ತಿದೆ. ಈಗಾಗಲೇ 480ಕ್ಕೂ ಅಧಿಕ ಸಂಚಿಕೆಗಳಲ್ಲಿ ರಾಮ್ ಹಾಗೂ ಸೀತಾ ಕಥೆಯನ್ನು ವೀಕ್ಷಕರು ನೋಡಿದ್ದಾರೆ. ಈ ವಾರವೇ ಅಂತಿಮ ಸಂಚಿಕೆಗಳು ಪ್ರಸಾರವಾಗಲಿದೆ. ಅಧಿಕೃತವಾಗಿ ಪ್ರೋಮೊ ಸಮೇತ ಈ ವಿಚಾರವನ್ನು ಜೀ-ಕನ್ನಡ ತಿಳಿಸಿದೆ.

ಕೊನೆಯ ವಾರದಲ್ಲಿ ವೆಬ್ ಸೀರಿಸ್ ರೀತಿ 5 ದಿನ ಬೇರೆ ಬೇರೆ ಕಥೆ ಹೇಳಲಾಗುತ್ತಿದೆ. ಭಾರ್ಗವಿ ಹಾಗೂ ಸೀತಾ ನಡುವಿನ ಸಮರಕ್ಕೂ ಅಂತಿಮ ತೆರೆ ಬೀಳಲಿದೆ. ಸೋಮವಾರ ಸೀತಾ ಮುಂದೆ ಸಿಹಿ ಅವಳಿ ಗುಟ್ಟು ರಟ್ಟಾಗಲಿದೆ, ಮಂಗಳವಾರ ಭಾರ್ಗವಿಗೆ ವಿರುದ್ಧವಾದ ಸಾಕ್ಷಿಯೊಂದು ಸೀತಾ ಕೈ ಸೇರಲಿದೆ. ಬುಧವಾರ ಭಾರ್ಗವಿ ಕಳ್ಳಾಟಕ್ಕೆ ಬ್ರೇಕ್ ಬೀಳಲಿದ್ದು ಗುರುವಾರ ಕರಾಳ ಸತ್ಯಗಳು ಜಗಜ್ಜಾಹೀರಾಗಲಿದೆ. ಶುಕ್ರವಾರ ಕಥೆಯ ಕ್ಲೈಮ್ಯಾಕ್ಸ್ ಎಂದು ಹೊಸ ಪ್ರೋಮೊದಲ್ಲಿ ವಿವರಣೆ ನೀಡಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕೆಲವರು ಇನ್ನಾದರೂ ಕತೆ ಮುಗಿಸುತ್ತೀದ್ದೀರಾ ಒಳ್ಳೆಯದಾಯಿತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಆರಂಭದಲ್ಲಿ ಚೆನ್ನಾಗಿತ್ತು, ಬರ್ತಾ ಬರ್ತಾ ಕಥೆಯನ್ನು ಎಳೆಯಲಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಸೀತಾ ಆಗಿ ವೈಷ್ಣವಿ ಗೌಡ, ಶ್ರೀರಾಮ್ ದೇಸಾಯಿ ಆಗಿ ಗಗನ್ ಚಿನ್ನಪ್ಪ ಹಾಗೂ ಸಿಹಿ ಆಗಿ ಬಾಲ ನಟಿ ರಿತು ಸಿಂಗ್ ನಟಿಸಿದ್ದಾರೆ.
ಭಾರ್ಗವಿ ದೇಸಾಯಿ ಆಗಿ ನೆಗೆಟಿವ್ ರೋಲ್‌ನಲ್ಲಿ ಪೂಜಾ ಲೋಕೇಶ್, ಸೂರ್ಯಪ್ರಕಾಶ್ ದೇಸಾಯಿ ಆಗಿ ಮುಖ್ಯಮಂತ್ರಿ ಚಂದ್ರು ಬಣ್ಣ ಹಚ್ಚಿದ್ದಾರೆ. ಮೊದಲ ಪ್ರೋಮೊದಿಂದಲೇ 'ಸೀತಾರಾಮ' ಧಾರಾವಾಹಿ ಕುತೂಹಲ ಮೂಡಿಸಿತ್ತು. ಆದರೆ ಕೊಂಚ ತಡವಾಗಿ ಧಾರಾವಾಗಿ ಪ್ರದರ್ಶನ ಆರಂಭಿಸಿತ್ತು. ಆದರೆ ಬಹಳ ಅದ್ಧೂರಿಯಾಗಿ ಅಷ್ಟೇ ಸೊಗಸಾಗಿ ಕಥೆ ಮೂಡಿ ಬರುತ್ತಿತ್ತು.
ಮೊದಲಿಗೆ 'ಸೀತಾರಾಮ' ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ಆದರೆ ಟಿಆರ್‌ಪಿ ಕೂಡ ಚೆನ್ನಾಗಿತ್ತು. ಬಾಲಕಿ ಸಿಹಿಯ ಕಥೆ ವೀಕ್ಷಕರ ಗಮನ ಸೆಳೆದಿತ್ತು. ಆದರೆ ಆ ಪಾತ್ರವನ್ನು ಸಾಯಿಸಿದ ಬಳಿಕ ದಿಢೀರನೆ ಟಿಆರ್‌ಪಿ ಇಳಿದುಬಿಟ್ಟಿತ್ತು. ಹಾಗಾಗಿ ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರದ ಸಮಯವನ್ನು ಬದಲಿಸಲಾಗಿತ್ತು. ದಿನದಿಂದ ದಿನಕ್ಕೆ ಕ್ರೇಜ್ ಕಮ್ಮಿ ಆಗುತ್ತಾ ಸಾಗಿತ್ತು. ಇತ್ತೀಚೆಗೆ ಯಾಕಪ್ಪಾ ಕಥೆಯನ್ನು ಇಷ್ಟು ಎಳೆದಾಡುತ್ತಿದ್ದಾರೆ. ಸುಮ್ಮನೆ ಮುಗಿಸಿ ಹೊಸ ಧಾರಾವಾಹಿ ಹಾಕುವುದು ಉತ್ತಮ ಎಂದು ವೀಕ್ಷಕರು ಗೊಣಗಲು ಆರಂಭಿಸಿದ್ದರು.
ಇವತ್ತಿನ ಪೈಪೋಟಿಯಲ್ಲಿ ಟಿಆರ್‌ಪಿ ಇಲ್ಲದಿದ್ದರೆ ಯಾವುದೇ ಧಾರಾವಾಹಿಯನ್ನು ಮುಂದುವರೆಸುವುದಿಲ್ಲ. ಹಾಗಾಗಿ ಆದಷ್ಟು ಬೇಗೆ ಒಂದೊಳ್ಳೆ ಕ್ಲೈಮ್ಯಾಕ್ಸ್ ಕೊಟ್ಟು ಕಥೆಗೆ ಗುಡ್ ಬೈ ಹೇಳುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ನಟಿ ವೈಷ್ಣವಿ ಗೌಡ ಮದುವೆ ನಿಶ್ಚಯವಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ 'ಸೀತಾರಾಮ' ಧಾರಾವಾಹಿ ಕೂಡ ಮುಕ್ತಾಯವಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ವೈಷ್ಣವಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ಈ ವಾರವೇ ಧಾರಾವಾಹಿ ಮುಗಿಯಲಿದೆ. ಮುಂದಿನ ವಾರದಿಂದಲೇ ಹೊಸ ಕಥೆ ಕನ್ನಡ ಕಿರುತೆರೆ ವೀಕ್ಷಕರ ಮುಂದೆ ಬರುವ ಸಾಧ್ಯತೆಯಿದೆ.


Click it and Unblock the Notifications











