Seetharama: ಸಿಹಿಯನ್ನು ತವರಿನಲ್ಲೇ ಬಿಟ್ಟು ಗಂಡನ ಮನೆ ಸೇರುತ್ತಾಳಾ ಸೀತಾ?
ಸೀತಾಳ ಜೀವನ ಇನ್ನು ರಿವೀಲ್ ಆಗಿಲ್ಲ. ಸೀತಾಳ ಬಾಳಲ್ಲಿ ಇದ್ದ ಆ ರಾಮ ಯಾರು ಅನ್ನೋದು ಇನ್ನು ತಿಳಿದಿಲ್ಲ. ಆದರೆ ಸೀತೆಯ ಬಾಳಿಗೆ ಬರುವುದಕ್ಕೆ ಸಿದ್ಧವಾದ ರಾಮ ಮಾತ್ರ ಆಫೀಸಲ್ಲಿಯೇ ಪ್ರತ್ಯಕ್ಷವಾಗಿದ್ದಾನೆ. ಸದ್ಯ ಸೀತೆಯ ಪ್ರಪಂಚವೇ ಬೇರೆಯಾಗಿದೆ. ಸೀತೆಯ ಬದುಕಿನಲ್ಲಿ ಸಿಹಿ ಮಾತ್ರ ಮುಖ್ಯವಾಗಿದ್ದಾಳೆ. ಸಿಹಿಯೇ ಪ್ರಪಂಚವಾಗಿದೆ.
ಸೀತೆಯ ಪ್ರಪಂಚ ಎಷ್ಟು ಚಿಕ್ಕದು ಅಂದ್ರೆ ಸಿಹಿ, ಸಿಹಿಯ ಬದುಕು, ಅವಳ ಭವಿಷ್ಯ. ಅದನ್ನ ಬಿಟ್ಟರೆ ಆಫೀಸ್. ಇಷ್ಟೇ ಸದ್ಯ ಸೀತೆಗಾಗಿ ತೆರೆದುಕೊಂಡಿರುವ ಪ್ರಪಂಚ. ಸೀತಾಗೆ ತಕ್ಕಂತ ಮಗಳನ್ನೇ ದೇವರು ಕೊಟ್ಟಿದ್ದಾನೆ. ಏನಿಲ್ಲ ಅಂದ್ರು ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳುತ್ತಾಳೆ. ಅಮ್ಮನ ಮಾತ್ರ ಕಣ್ಣೀರು ಹಾಕುವಂತೆ ಇಲ್ಲ. ಅಮ್ಮನಿಗೆ ಮಾತ್ರ ನೋವಾಗುವಂತೆ ಇಲ್ಲ.

ಮಗು ಹೇಗಿದೆ..? ಸೀತಾ ಹೇಗೆ ಜೀವನ ನಡೆಸುತ್ತಿದ್ದಾಳೆ ಎಂಬ ಚಿಂತೆಯೇ ಇಲ್ಲದೆ ಇದ್ದ ಅತ್ತಿಗೆ ಈಗ ದಿಢೀರನೇ ಸೀತಾಳಿಗೆ ಗಂಡು ಹುಡುಕಿ ಕರೆದುಕೊಂಡು ಬಂದಿದ್ದಾಳೆ. ಎರಡನೇ ಮದುವೆಯಾಗು. ಮಗು ಇದ್ದರು ಚಿಂತೆ ಇಲ್ಲ ಅಂತ ನಿನ್ನ ಇಷ್ಟಪಟ್ಟಿದ್ದಾರೆ ಎಂದು ಹುಡುಗನನ್ನು ಕರೆದುಕೊಂಡು ಬಂದಿದ್ದಳು ಅತ್ತಿಗೆಯೇ ಮುತುವರ್ಜಿ ವಹಿಸಿ, ತಾಂಬೂಲವನ್ನು ತಂದಿದ್ದಳು. ಯಾವತ್ತು ಇಲ್ಲದ ಕಾಳಜಿ ತೋರಿದ ಅತ್ತಿಗೆ ಬಗ್ಗೆ ಬೇಸರದ ಜೊತೆಗೆ ಸೀತೆಗೆ ಕೋಪವೂ ಹೆಚ್ಚಾಗಿ ಕಾಡಿದೆ.
ಅಮ್ಮ ಮಗಳು ತಮ್ಮದೇ ಆದ ಪ್ರಪಂಚದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಆದರೆ ಆ ಪ್ರಪಂಚಕ್ಕೆ ಹೊಸ ವ್ಯಕ್ತಿಯ ಆಗಮನ ಆಗುತ್ತೆ ಎಂದು ಗೊತ್ತಾದ ಕೂಡಲೇ ಸಿಹಿಗೆ ನೋವಾಗಿದೆ. ಸೀತಮ್ಮ ಮದುವೆಯಾಗಿ ಗಂಡನ ಮನೆಗೆ ಹೋದರೆ, ನಾನು ಒಂಟಿಯಾಗಿ ತವರು ಮನೆಯಲ್ಲಿಯೇ ಉಳಿಯಬೇಕಲ್ಲ ಎಂದು ಸಿಹಿ ಚಿಂತಿಸಿತ್ತಿದ್ದಾಳೆ. ಅದನ್ನು ಸೀತಮ್ಮನಿಗೂ ಕೇಳಿದ್ದಾಳೆ. ತವರು ಮನೆಯಲ್ಲಿ ನಾನೊಬ್ಬಳೇ ಉಳಿಯಬೇಕಾ ಸೀತಮ್ಮ ಎಂದಾಗ, ಸೀತಾಗೆ ಎದೆಗೆ ಚೂರಿ ಹಾಕಿದ್ದಷ್ಟೇ ನೋವಾಗಿದೆ. ತಕ್ಷಣ ಮಗಳನ್ನು ತಬ್ಬಿಕೊಂಡು, ನಮ್ಮ ಪ್ರಪಂಚದಲ್ಲಿ ನಾವಿಬ್ಬರೇ ಇರುವುದು. ಬೇರೆ ಯಾರನ್ನು ಬರುವುದಕ್ಕೆ ಬಿಡಲ್ಲ ಎಂದೇ ಪ್ರಾಮೀಸ್ ಮಾಡಿದ್ದಾಳೆ.
ಸೀತಾಗೆ ಕಷ್ಟ ಎಂದರೆ ಸಹಾಯಕ್ಕೆ ನಿಲ್ಲುವವರು ಯಾರು ಇಲ್ಲ. ಜೊತೆಗೆ ಎಷ್ಟೇ ಕಷ್ಟವಿದ್ದರೂ ಸೀತಾ ಕೂಡ ಎಲ್ಲಿಯೂ ಹೇಳಿಕೊಳ್ಳಲ್ಲ. ಎಷ್ಟೇ ಕಷ್ಟವಾದರೂ, ರಿಸ್ಕ್ ಆದರೂ ತಾನೇ ಓಡಾಡುತ್ತಾಳೆ. ಯಾರ ಸುದ್ದಿಗೂ ಹೋಗದ ಸೀತಾಗೆ ಈಗ ಸಂಕಷ್ಟಗಳು, ಸವಾಲುಗಳು ಎದುರಾಗಿದೆ. ಅದನ್ನೆಲ್ಲಾ ನೆನೆದು ಕಣ್ಣೀರು ಹಾಕುತ್ತಾ ಕೂತಿದ್ದಾಳೆ.
ಮನೆಯಲ್ಲಿ ಮಕ್ಕಳಿದ್ದರೆ ಎಂತಹ ನೋವನ್ನಾದರೂ ಮರೆತುಬಿಡುತ್ತೀವಿ ಅನ್ನೋ ಮಾತಿದೆ. ಆ ಮಾತು ನೂರು ಪರ್ಸೆಂಟ್ ಸತ್ಯ. ಅದರಲ್ಲೂ ಸಿಹಿಯಂತ ಮಗಳಿದ್ದರೆ ಮುಗಿದೇ ಹೋಯ್ತು. ಸೀತಾ ಕಣ್ಣೀರು ಹಾಕುತ್ತಾ ಕುಳಿತಿದ್ದರೆ, ಹಸಿವು ಎಲ್ಲಾಗುತ್ತೆ. ಸಿಹಿ ಪುಟಾಣಿ. ಆದರೂ ಚೇರ್ ಹಾಕಿ, ಅದರ ಮೇಲೆ ಹತ್ತಿ, ತಟ್ಟೆಗೆ ಊಟ ಹಾಕಿಕೊಂಡು ಬಂದಿದ್ದಾಳೆ. ಸೀತಾಗೆ ಸಮಾಧಾನ ಮಾಡಿದ್ದಾಳೆ. ಸೀತಾ ಮತ್ತದೆ ಮಾತು. ಕ್ಷಮೆ ಕೇಳಲು ಹೋದಾಗ, ಸಿಹಿಯೇ ಸಮಾಧಾನ ಮಾಡಿದ್ದಾಳೆ. ಊಟ ಬೇಡ ಎಂದಾಗ ಸಿಹಿಯೇ ತಿನ್ನಿಸಲು ಹೋಗಿದ್ದಾಳೆ. ಆಗ ಸಿಹಿ, ಸೀತಾಗೆ ಅಮ್ಮನಂತೆ ಕಂಡಿದ್ದಾಳೆ. ಅಮ್ಮನ ಮಾತು ಕೇಳ್ಬೇಕು ಅಲ್ವಾ ತಿನ್ನು ಅಂತ ಊಟ ತಿನ್ನಿಸಿದ್ದಾಳೆ.


Click it and Unblock the Notifications











