ಆರ್ಯವರ್ಧನ್ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದುಕೊಂಡಿದ್ದ ಅನು ಈಗ ತಾಯಿಯಾಗ್ತಿದ್ದಾಳೆ: ಮುಂದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಈಗ ತಾಯಿಯಾಗುತ್ತಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ಆರ್ಯವರ್ಧನ್ ಸತ್ತು ಹೋಗುತ್ತಾನೆ ಎಂದಾಗ ಪ್ರೇಕ್ಷಕ ವರ್ಗ ರೊಚ್ಚಗೆದ್ದಿತ್ತು. ಹೇಗಾದರೂ ಮಾಡಿ ಆರ್ಯವರ್ಧನ್‌ನನ್ನು ಬದುಕಿಸಿ ಎಂದು ವಿನಮ್ರವಾಗಿ ಕೇಳಿಕೊಂಡಿದ್ದರು. ಅದರಂತೆ ಆರ್ಯನನ್ನು ಬದುಕಿಸುವುದಲ್ಲದೆ, ಕಥೆಯ ರೀತಿಯನ್ನೇ ಕಥೆಗಾರ ಚೇಂಜ್ ಮಾಡಿದ್ದಾರೆ. ಅದರ ಫಲವಾಗಿ ಈಗ ಅನು ಸಿರಿಮನೆ ತಾಯಿಯಾಗುತ್ತಿದ್ದಾಳೆ. ಆದರೆ ಈ ತಾಯ್ತನ ಅನುಭವಿಸುವ ಖುಷಿಯಲ್ಲಿ ಅನು ಇಲ್ಲ.
ಅನು ಸಿರಿಮನೆಯೇ ರಾಜನಂದಿನಿಯ ಪುನರ್ಜನ್ಮ ಅನ್ನೋದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಅನುಗೂ ಕನಸಿನ ಮೂಲಕ ಮುನ್ಸೂಚನೆ ನೀಡುತ್ತಿದ್ದ ಪುನರ್ಜನ್ಮದ ಅರಿವಾಗಿದೆ. ಹೀಗಾಗಿ ಆರ್ಯನ ಮೋಸಗಳನ್ನು ಬಯಲಿಗೆಳೆಯಲು ಸಜ್ಜಾಗಿರುವ ಅನು, ಆರ್ಯವರ್ಧನ್ ಕುಟುಂಬವನ್ನು ಕಾಪಾಡಿಕೊಳ್ಳಲು ರೆಡಿಯಾಗಿದ್ದಾಳೆ.

ಆರ್ಯವರ್ಧನ್‌ಗೆ ಈ ವಿಚಾರ ಗೊತ್ತಾದರೆ ಏನಾಗುತ್ತೆ..?
ಅನು ಈಗಾಗಲೇ ಸಾಕಷ್ಟು ಪ್ರಯತ್ನ ಪಟ್ಟು ಒಂದಷ್ಟು ಬದಲಾವಣೆಯನ್ನು ಮಾಡುತ್ತಿದ್ದಾಳೆ. ಹರ್ಷನಿಗೆ ಸಿಗಬೇಕಾದ ಸ್ಥಾನಮಾನವನ್ನು ನೀಡುತ್ತಿದ್ದಾಳೆ. ಹರ್ಷನನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಿದ್ದಾಳೆ. ಆದರೆ ಈ ಮಧ್ಯೆ ಖುಷಿಪಡಬೇಕಾದ ವಿಚಾರ ಅನುಳನ್ನು ಗೊಂದಲಕ್ಕೀಡು ಮಾಡಿದ್ದು, ಬೇಸರಕ್ಕೆ ದೂಡಿದೆ. ಅದು ಅನು ಸಿರಿಮನೆ ತಾಯಿಯಾಗುತ್ತಿರುವ ವಿಚಾರ. ಮೊದಲಿನ ಅನು ಸಿರಿಮನೆಯಾಗಿದ್ದರೆ ಈ ವಿಚಾರ ಕೇಳಿದ ಕೂಡಲೇ ಕುಣಿದು ಕುಪ್ಪಳಿಸಿ ಬಿಡುತ್ತಿದ್ದಳು. ಆದರೆ ಈಗ ಆರ್ಯನ ಮೇಲೆ ಉಳಿದಿರುವುದು ಪ್ರೀತಿ ಅಲ್ಲ ಬದಲಾಗಿ ಅವನು ಮಾಡಿದ ಮೋಸ, ಅನ್ಯಾಯಕ್ಕೆ ಸೇಡು. ಹೀಗಾಗಿ ತಾಯಿಯಾಗುತ್ತಿದ್ದೇನೆಂಬ ಸಂಭ್ರಮ ಅನು ಮುಖದಲ್ಲಿ ಕಾಣಿಸುತ್ತಿಲ್ಲ. ಆರ್ಯವರ್ಧನ್‌ಗೆ ಹೇಳುವ ಉಸಾಬರಿಗೂ ಹೋಗಿಲ್ಲ.

ಗರ್ಭಿಣಿ ಹೇಗಿರಬೇಕೆಂದು ಅಭಿಮಾನಿಗಳ ಸಲಹೆ!
ಅನು ಸಿರಿಮನೆ ಯಾವುದೋ ವಿಚಾರಕ್ಕೆ ಡಾಕ್ಟರ್ ಬಳಿ ಹೋಗಿದ್ದು. ಆದರೆ ಅದು ಗುಡ್ ನ್ಯೂಸ್ ಆಗಿತ್ತು. ವೈದ್ಯರು ಅನು ತಾಯಿಯಾಗುತ್ತಿರುವ ವಿಚಾರ ತಿಳಿಸಿದ್ದಾರೆ. ಅನು ಅಷ್ಡು ಖುಷಿಯಾಗದೆ ಇದ್ದರೂ, ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಅನು ಬಂಗಾರ ಕಂಗ್ರಾಟ್ಸ್ ಅಂತ ಸಾಕಷ್ಟು ಮಂದಿ ಶುಭ ಹಾರೈಸುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೆಲಸ ಮಾಡುವಾಗ ಅನು ಹುಷಾರಾಗಿ ಇರಬೇಕು ಎಂಬ ಸಲಹೆ ನೀಡುತ್ತಿದ್ದಾರೆ. ಇನ್ನು ಒಂದಷ್ಡು ಮಂದಿ ಇದು ತುಂಬಾ ಸಂತಸದ ಸುದ್ದಿ, ಅನು ಆರ್ಯವರ್ಧನ್‌ಗೆ ಹೇಳಬೇಕಾದದ್ದು ಆಕೆಯ ಕರ್ತವ್ಯ ಎಂದು ಹೇಳುವ ಮೂಲಕ ಅನು ಗೊಂದಲಕ್ಕೆ ನೋಡುಗರೇ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಅನು ಆರ್ಯನಿಗೆ ಹೇಳುತ್ತಾಳಾ? ಇಲ್ಲ ಸೇಡು ತೀರಿಸಿಕೊಳ್ಳುತ್ತಾಳಾ? ಎಂಬುದನ್ನು ನೋಡಬೇಕಾಗಿದೆ.

ಹೆಚ್ಚು ಇಂಗ್ಲಿಷ್ ಬಳಕೆಗೆ ವೀಕ್ಷಕರ ಬೇಸರ
ಅನು ಸಿರಿಮನೆ ಈಗ ಅನು ಸಿರಿಮನೆಯಾಗಿ ಉಳಿದಿಲ್ಲ. ರಾಜನಂದಿನಿಯಾಗಿ ಆಗಾಗ ಬದಲಾಗುತ್ತಾಳೆ. ಅಷ್ಟೇ ಅಲ್ಲ ಆ ಗತ್ತು ಗಾಂಭೀರ್ಯತೆ ಕೂಡ ಬಂದಿದೆ. ಆರ್ಯನ ಮೋಸ ಅದಕ್ಕೆ ಬೆಂಬಲವಾಗಿ ನಿಂತಿರುವ ಝೇಂಡೆ ಕಂಡರೆ ಆಗಾಗ ಕಿಡಿಕಾರುತ್ತಿರುತ್ತಾಳೆ. ಎಲ್ಲರ ಜೊತೆ ಮಾತನಾಡುವಾಗ ಮೊದಲಿನ ರೀತಿ ಇಲ್ಲ. ಹೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾಳೆ. ಮೀರಾ ಜೊತೆ ಮಾತನಾಡುವಾಗಲೂ ಈ ಅನುಭವವಾಗಿದೆ. ಇದು ಕೆಲವೊಂದಿಷ್ಟು ನೋಡುಗರಿಗೆ ಬೇಸರ ತರಿಸಿದೆ. ಅನು ಸಿರಿಮನೆ ಇತ್ತೀಚೆಗೆ ಹೆಚ್ಚು ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ. ಕನ್ನಡದಲ್ಲಿ ಮಾತನಾಡಿ ಎಂದು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಅನು ಮುಂದಿನ ದಾರಿ ಯಾವುದು?
ಈ ಮೊದಲು ಜೋಗ್ತವ್ವ ಬೇರೆ ಅನು ಮನಸ್ಸಿನಲ್ಲಿ ಗೊಂದಲ ಬಿತ್ತಿ ಹೋಗಿದ್ದಾರೆ. ನೀನು ತಿಳಿದುಕೊಂಡಿರುವುದೇ ಬೇರೆ ಎಂದು ಹೇಳಿದ್ದಾರೆ. ಆದರೆ ಆ ಬಗ್ಗೆ ಯೋಚನೆ ಮಾಡದ ಅನು, ಸೇಡಿನ ಬಲೆಯನ್ನು ಜಾಸ್ತಿಯೇ ಹೆಣೆಯುತ್ತಿದ್ದಾಳೆ. ಈಗ ತಾಯಿ ಬೇರೆ ಆಗುತ್ತಿದ್ದಾಳೆ. ಸದ್ಯಕ್ಕೆ ಅನು ಮೆದುಳು ಗೊಂದಲದ ಗೂಡಾಗಿ ಬದಲಾಗಿದೆ. ಅತ್ತ ಅನುಗೆ ಎಲ್ಲಾ ವಿಚಾರ ಗೊತ್ತಾಗಿದ್ದು, ಈಗಲೂ ಎಚ್ಚೆತ್ತುಕೊಳ್ಳದೆ ಹೋದರೆ ನಾವೂ ಬೀದಿಗೆ ಬರುತ್ತೇವೆಂದು ಆರ್ಯನಿಗೆ ಎಷ್ಟೇ ಅರ್ಥ ಮಾಡಿಸಲು ಯತ್ನಿಸಿದರು ಆರ್ಯ ಝೇಂಡೆ ಮಾತು ಕೇಳುತ್ತಿಲ್ಲ. ಈಗ ತಾಯಿಯಾಗುತ್ತಿರುವ ಅನು ಸೇಡು ತೀರಿಸಿಕೊಳ್ಳುತ್ತಾಳಾ ಇಲ್ಲ ಎಲ್ಲಾ ಮರೆತು ಸಂತಸದಲ್ಲಿ ಒಂದಾಗುತ್ತಾಳಾ ನೋಡಬೇಕಿದೆ.


Click it and Unblock the Notifications











