Lakshminivasa: ಇಷ್ಟೆಲ್ಲಾ ಸಮಸ್ಯೆಯಾದ್ರೂ 'ಲಕ್ಷ್ಮೀ' ಮಾತ್ರ ಕಾಣ್ತಿಲ್ಲ; ವೀಕ್ಷಕರಿಗೆ ಬೇಸರ..!
ಸತ್ಯ ಯಾವತ್ತಿದ್ದರೂ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆಯೇ ಸರಿ. ಅಲ್ಲಿಯೇ ಇದ್ದರೆ ಸದಾ ಸುಡುತ್ತಲೇ ಇರುತ್ತದೆ. ಹಾಗೇ ಭಾವನಾಳ ಬದುಕು ಆಗಿತ್ತು. ಯಾರೋ ಕಟ್ಟಿದ ತಾಳಿಯನ್ನು ಮನೆಯವರಿಗೆ ಗೊತ್ತೇ ಆಗದಂತೆ ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಮೊಗದಲ್ಲಿ ನಗುವೇ ಕಾಣೆಯಾಗಿತ್ತು, ಮನಸ್ಸಿನಲ್ಲಿ ಸಂತೋಷವಿರಲಿಲ್ಲ, ಸದಾ ಯೋಚನೆಯಲ್ಲಿಯೇ ಮುಳುಗಿರುತ್ತಿದ್ದಳು. ಆದರೆ ತಾಳಿಯ ವಿಚಾರ ಒಬ್ಬೊಬ್ಬರಿಗೆ ತಿಳಿಯುತ್ತಾ ಬಂತು.
ಮೊದಲು ತಾಳಿಯನ್ನು ನೋಡಿದ್ದೆ ಲಕ್ಷ್ಮೀ. ಇದರಲ್ಲಿ ಭಾವನಾಳದ್ದು ಏನು ತಪ್ಪಿಲ್ಲ ಎಂದು ಗೊತ್ತಾದ ಮೇಲೆ ಮಗಳನ್ನು ಕಾಪಾಡುವುದಕ್ಕೆ ನಿಂತಳು. ಆದರೆ ದಿನೇ ದಿನೇ ಎಲ್ಲರಿಗೂ ಗೊತ್ತಾಯ್ತು. ವೆಂಕಿಗೆ ಭಾವನಾಳ ಕೊರಳಿಗೆ ತಾಳಿ ಕಟ್ಟಿರುವುದು ಯಾರೆಂಬುದು ಗೊತ್ತಾಗಿದೆ. ಆದರೆ ಹೇಳುವ ಸ್ಥಿತಿಯಲ್ಲಿ ಇಲ್ಲ.

ಉತ್ಸವ ನಡೆದ ಜಾಗಕ್ಕೆ ಭಾವನಾ..!
ಭಾವನಾ ತನ್ನ ವಿಚಾರ ಯಾರಿಗೆ ತಿಳಿಯಬಾರದು ಎಂದುಕೊಂಡಿದ್ದಳೋ ಅವರೆಲ್ಲರಿಗೂ ತಿಳಿದಿದೆ. ಸಂತೋಷನ ಮೊಬೈಲ್‌ಗೆ ತಾಳಿ ಇರುವ ಫೋಟೋ ಬಂದಿದೆ. ಎಲ್ಲರ ಮುಂದೆ ಒಂದು ಕ್ಷಣ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ ಭಾವನಾ. ಆದರೆ ಅತ್ತಿಗೆಯಿಂದ ಆ ಪಟ್ಟ ಕಳಚಿ ಬಿದ್ದಿತ್ತು. ಇಷ್ಟೆಲ್ಲ ನಡೆದ ಮೇಲೆ ಮನಸ್ಸಿಗೆ ಬೇಸರವಾಗಿ, ಫೋನ್ ಕೂಡ ತೆಗೆದುಕೊಳ್ಳದೆ ಮನೆ ಬಿಟ್ಟು ಹೋಗಿದ್ದಾಳೆ. ಉತ್ಸವ ನಡೆದ ಜಾಗಕ್ಕೆ ಹೋಗಿರುವ ಭಾವನಾ, ಆ ತಾಯಿಗೆ ತಾಳಿಯನ್ನು ವಾಪಾಸ್ ಕೊಡಲು ಹೋಗಿದ್ದಾಳೆ.
ಮನೆಯವರಿಗೆಲ್ಲಾ ಟೆನ್ಶನ್ ಶುರು
ಭಾವನಾ ಮನಸ್ಸಿಗೆ ಮನೆಯವರ ನಡೆ ಬೇಸರ ತರಿಸಿದೆ. ಹೀಗಾಗಿ ಮನೆ ಬಿಟ್ಟು ಹೋಗಿದ್ದಾಳೆ. ಇನ್ನೇನು ತಾಳಿ ತೆಗೆಯಬೇಕು ಎನ್ನುವಾಗಲೇ ಸಿದ್ದೇಗೌಡ್ರು ಬಂದು ಅದನ್ನು ತಡೆದಿದ್ದಾರೆ. ತಾಳಿ ತೆಗೆಯುವುದು ಗೌಡ್ರಿಗೆ ಇಷ್ಟವಿರಲಿಲ್ಲ. ಆದರೆ ಭಾವನಾಳಿಗೆ ಅದರ ಮಾಲೀಕ ಯಾರೆಂಬುದು ತಿಳಿಯದೆ ತಾಳಿ ಇಟ್ಟುಕೊಳ್ಳುವುದು ಇಷ್ಟವಿರಲಿಲ್ಲ. ಅತ್ತ ಮನೆಯವರೆಲ್ಲ ಸೇರಿ ಎಲ್ಲಾ ಕಡೆ ಭಾವನಾಳನ್ನ ಹುಡುಕಿದರು ಸಿಗಲೇ ಇಲ್ಲ. ಇದು ಮನೆಯವರ ಆತಂಕಕ್ಕೆ ಕಾರಣವಾಗಿತ್ತು.

ಸಂತೋಷನಿಂದ ಕೀಳು ಮಟ್ಟದ ನಡೆ
ಶ್ರೀನಿವಾಸನ ದೊಡ್ಡ ಮಗ ಹಣದ ಭೂತ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ಮಾತಿನಿಂದ ಇನ್ನೊಬ್ಬರಿಗೆ ನೋವಾಗುತ್ತೆ ಎಂಬ ಸಣ್ಣ ಅರಿವೂ ಅವನಲ್ಲಿ ಇರುವುದಿಲ್ಲ. ಬಾಯಿಗೆ ಬಂದಿದ್ದನ್ನ ಅಂದುಬಿಡುತ್ತಾನೆ. ಅದರಿಂದ ಈಗಾಗಲೇ ಅಪ್ಪ ಅಮ್ಮನಿಗೂ ನೋವಾಗಿದೆ. ವೆಂಕಿಗೂ ನೋವಾಗಿದೆ. ಭಾವನಾ ಮದುವೆ ವಿಚಾರದಲ್ಲೂ ಹಲವು ಬಾರೀ ನೋವಾಗುವಂತೆ ಮಾತನಾಡಿದ್ದಾನೆ. ಈಗ ಭಾವನಾಳ ವಿಚಾರದಲ್ಲಿ ಅವರ ತಂದೆ ಆತಂಕದಲ್ಲಿದ್ದರೆ, ಏನೋಅನಾಹುತ ಮಾಡಿಕೊಳ್ಳಲು ಹೋಗಿರಬೇಕು ಎಂದೇ ಹೇಳಿ ಮತ್ತಷ್ಟು ನೋವು ಕೊಟ್ಟಿದ್ದಾನೆ. ಸಂತೋಷನ ಈ ನಡೆಗೆ ವೀಕ್ಷಕರಿಂದ ಕೂಡ ವಿರೋಧ ಎದುರಾಗಿದೆ. ಮೊದಲು ಆ ಸಂತೋಷನ ಪಾತ್ರವನ್ನ ಕೊಂದು ಬಿಡಿ ಎಂದೇ ಕಮೆಂಟ್ ಹಾಕಿದ್ದಾರೆ.
ಈ ಪರಿಸ್ಥಿತಿಯಲ್ಲಿ ಲಕ್ಷ್ಮೀ ಎಲ್ಲಿ..?
ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತ ನಡೆಯುವಾಗಲೂ ಲಕ್ಷ್ಮೀ ಕಾಣಿಸುತ್ತಿಲ್ಲ. ಶ್ರೀನಿವಾಸ್ ಕೆಲಸ ಕಳೆದುಕೊಂಡು, ಆಟೋ ಓಡಿಸುತ್ತಿರುವ ಸತ್ಯ ಮನೆಯಲ್ಲಿ ಗೊತ್ತಾದಾಗ ಮಕ್ಕಳೆಲ್ಲ ಒಬ್ಬೊಬ್ಬರು ಒಂದೊಂದು ಮಾತನ್ನ ಆಡುತ್ತಿದ್ದರು. ಆದರೆ ಆಗ ಗಂಡನ ಪರವಾಗಿ ನಿಂತು, ಹೆಮ್ಮೆಯಿಂದ ಹೇಳಿಕೊಂಡಿದ್ದಳು. ಆದರೆ ಇಂದು ತುಂಬಾ ಪ್ರೀತಿಸುವ, ಕಾಳಜಿ ತೋರುವ ಮಗಳು ಕಷ್ಟಕ್ಕೆ ಸಿಲುಕಿದ್ದಾಳೆ. ಈಗ ಲಕ್ಷ್ಮೀ ಅಗತ್ಯ ಅಲ್ಲಿ ತುಂಬಾನೇ ಕಾಡುತ್ತಿದ್ದಾಗ ಇಲ್ಲವಾಗಿದ್ದಾಳೆ. ಇದು ಪ್ರೇಕ್ಷಕರನ್ನು ತುಂಬಾನೇ ಕಾಡುತ್ತಿದೆ.


Click it and Unblock the Notifications











