'ಪಾರು' ಧಾರಾವಾಹಿ: ಕಣ್ಣಿನಿಂದ ಶುರುವಾದ ಪ್ರೀತಿಗೆ 900 ಸಂಚಿಕೆಯ ಸಂಭ್ರಮ
'ಪಾರು' ಈಗ ಮನೆ ಮನೆಯ ಮುದ್ದಿನ ಮಗಳು. ಅಷ್ಟೇ ಅಲ್ಲ ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆ. ಕಪಾಳ ಮೋಕ್ಷದಿಂದ ಶುರುವಾದ ಪಾರುವಿನ ಸ್ಥಾನ, ಇವತ್ತು ಅಧಿಕಾರ ಹಿಡಿಯುವ ಹಂತಕ್ಕೆ ಬಂದು ನಿಂತಿದೆ. ಪ್ರೀತಿಸಿದವಳ ಕೈ ಹಿಡಿದು ಮನೆಗೆ ಕರೆತಂದರೂ ಸವಾಲುಗಳ ಸುಳಿಯಲ್ಲಿ 'ಪಾರು' ಜೀವನ ನಡೆಯುತ್ತಿದೆ. ಇದೀಗ 'ಪಾರು' ಧಾರಾವಾಹಿ 900 ಸಂಚಿಕೆ ಪೂರೈಸಿದೆ.
ಇದಕ್ಕಿಂತ ಖುಷಿ ಮತ್ತೆಲ್ಲಿ. ಇನ್ನು ಸಾವಿರ ಸಂಚಿಕೆ ಬಂದರೂ 'ಪಾರು' ಮೇಲಿನ ಅಭಿಮಾನ ಕಡಿಮೆಯಾಗಲು ಸಾಧ್ಯವಿಲ್ಲ. ಯಾಕೆಂದರೆ 'ಪಾರು' ಎಪಿಸೋಡಿನಲ್ಲಿ ಎಲ್ಲಿಯೂ ಪ್ರೇಕ್ಷಕರಿಗೆ ಬೋರ್ ಎನಿಸಿಲ್ಲ. ಅಷ್ಟು ಖುಷಿಯಾಗಿ ಸೀರಿಯಲ್ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿರುವ ಮಹಿಳೆಯರಿಗಂತು ಪಾರು ಸ್ವಂತ ಮಗಳೇ ಆಗಿ ಹೋಗಿದ್ದಾಳೆ.
'ಪಾರು' 900 ದಿನದ ಜರ್ನಿ ಹೇಗಿತ್ತು?
'ಪಾರು' ಜರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೊಂಚವೂ ಬೇಸರ ಎನಿಸಿಲ್ಲ. ಪಾರು ಅಖಲಾಂಡೇಶ್ವರಿ ಮನೆಗೆ ಸುಮ್ಮ ಸುಮ್ಮನೆ ಬಂದಿದ್ದಲ್ಲ, ನೂರೆಂಟು ಎಡವಟ್ಟು ಮಾಡಿಕೊಂಡು ಅರಸನ ಕೋಟೆಯಲ್ಲಿ ಮನೆಗೆಲಸದವಳಾಗಿ ಬಂದಳು. ಪಾರು ಕಣ್ಣು ಆದಿಯ ಹೃದಯವನ್ನು ಗೆದ್ದಿತ್ತು. ಮನೆಕೆಲಸದವಳನ್ನೇ ಪ್ರೀತಿಸಿದರೂ ಸಹ ತನ್ನ ಪ್ರೀತಿ ಹುಡುಕಾಟದಲ್ಲಿ ಸಿಕ್ಕಿರಲೇ ಇಲ್ಲ. ಮನೆಯವರೆಲ್ಲರ ಸಹಾಯದಿಂದ ಕಡೆಗೂ ಪ್ರೀತಿಯ ಕಣ್ಣಿನ ಹುಡುಗಿ ಸಿಕ್ಕಿಬಿಟ್ಟಳು. ಹಾಗಂತ ಪ್ರೀತಿ ಒಲಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಮ್ಮನನ್ನು ಎದುರಾಕಿಕೊಂಡು ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದ ಹಕ್ಕಿಗಳಿಗೆ ಅಧಿಕೃತವಾಗಿ ತಾಳಿ ಎಂಬ ಮುದ್ರೆಯ ಮೂಲಕ ರೆಕ್ಕೆ ಸಿಕ್ಕಿದೆ. ಎಲ್ಲಾ ಭಾವನಾತ್ಮಕ ಯುದ್ಧವನ್ನು ಗೆದ್ದು ಸದ್ಯ ಸಂಸಾರದ ನೌಕೆಯಲ್ಲಿ ಸಾಗುತ್ತಿದ್ದಾರೆ. ಈ 900 ಸಂಚಿಕೆಗಳ ಕಂಪ್ಲೀಟ್ ಹಾದಿಯನ್ನು ವಿಡಿಯೋ ಮೂಲಕ ಪಾರು ಟೀಂ ಅನಾವರಣಗೊಳಿಸಿದೆ.

ಪಾರು ಪ್ರಯತ್ನ ಫಲಿಸಿದರೆ ಅರಸನಕೋಟೆಗೆ ಅಧಿಪತಿ
ಮನೆಕೆಲಸದವಳು ಎನ್ನುವ ಬೇಸರಕ್ಕಿಂತ ಮಗನಿಗೆ ತಕ್ಕ ಹೆಂಡತಿ ಸಿಗಲಿಲ್ಲವಲ್ಲ ಎಂಬ ಬೇಸರ ಅಖಿಲಾಂಡೇಶ್ವರಿಗಿದೆ. ಇದೆ ಕಾರಣಕ್ಕೆ ಎಲ್ಲರೆದುರು ಮನೆ ತುಂಬಿಸಿಕೊಂಡರು ಮನೆಯೊಳಗೆ ಸೊಸೆಯೆಂದು ಸ್ವೀಕರಿಸಿಲ್ಲ. ಹಾಗಂತ ಬದಲಾವಣೆ ಮಾಡದೆ ಅಖಿಲಾಂಡೇಶ್ವರಿ ಸುಮ್ಮನೆ ಕೂರುವವಳಲ್ಲ. ನನ್ನ ಬಳಿಕ ನನ್ನ ಸೊಸೆಯಾದವಳು ಅರಸನಕೋಟೆಯ ಆಸ್ತಿಯನ್ನು ಸಲೀಸಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರುವವಳಾಗಬೇಕು ಎಂಬುದು ಅಖಿಲಾಂಡೇಶ್ವರಿಯ ಆಸೆ. ಆದರೆ ನತಾದೃಷ್ಟವಶಾತ್ ಅದಲ್ಲಾ ಉಲ್ಟಾ ಆಗಿದೆ. ತಾನಂದುಕೊಂಡಿದ್ದ ಸಾಮರ್ಥ್ಯ ಇಲ್ಲದೆ ಇರುವ ಸೊಸೆ ಸಿಕ್ಕಿದ್ದಾಳೆ.

ಅಖಿಲಮ್ಮನನ್ನು ದೇವರಂತೆ ಕಾಣುವ ಪಾರು
ಪಾರು ತಂದೆ ಹನುಮಂತು ಸಾಕಷ್ಟು ವರ್ಷಗಳಿಂದ ಅರಸನಕೋಟೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಖಿಲಮ್ಮನನ್ನು ಕಂಡರೆ ಹನುಮಂತುಗೆ ದೇವರ ಸಮಾನ. ಪಾರುಗೂ ಕೂಡ ಅದೇ ಭಾವನೆ ಇದೆ. ತಾಯಿ ಇಲ್ಲದ ಪಾರುಗೆ ಅಖಿಲಾಂಡೇಶ್ವರಿ ತಾಯಿ ಪ್ರೀತಿಯನ್ನು ತೋರಿಸಿದ್ದಾಳೆ. ಅರಸನಕೋಟೆಯ ಯಜಮಾನನನ್ನೇ ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹನುಮಂತು ಊಟದಲ್ಲಿ ವಿಷ ಹಾಕಿ ತಿನ್ನಿಸಿದ್ದ. ಇದು ಅರಸನಕೋಟೆ ಮೇಲಿರುವ ನಿಯತ್ತು, ಪ್ರೀತಿಯನ್ನು ತೋರಿಸಿತ್ತು. ಬಳಿಕ ಆಸ್ಪತ್ರೆಯಿಂದ ಮನೆಗೆ ಪಾರುಳನ್ನು ಕರೆದುಕೊಂಡು ಹೋಗಿದ್ದ ಅಖಿಲಾ, ಸ್ವಂತ ಮಗಳಂತೆ ನೋಡಿಕೊಂಡಿದ್ದರು. ಆ ಪ್ರೀತಿಯ ಭಯಕ್ಕೇನೆ ಪಾರು ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಳು. ಆದರೆ ಕಷ್ಟ ಸುಖಗಳನ್ನು ದಾಟಿ ಇದೀಗ ಪ್ರೀತಿ ಒಂದಾಗಿದೆ.

ಅಖಿಲಮ್ಮನ ಸೊಸೆಯಾಗಲು ಇನ್ನೆಷ್ಟು ಸವಾಲುಗಳು?
ಅಖಿಲಾಗೆ ಪಾರುಳನ್ನು ಸೊಸೆಯಾಗಿ ಒಪ್ಪಿಕೊಳ್ಳದೆ ಇರುವುದಕ್ಕೆ ಕಾರಣ ಆಕೆಗೆ ಅರಸನಕೋಟೆಯ ವ್ಯವಹಾರವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು. ಆದರೆ ಅದ್ಯಾಕೆ ಸಾಧ್ಯವಿಲ್ಲ ಎಂದು ಮನೆಯಲ್ಲಿರುವ ಪಾರು ಹಿತೈಶಿಗಳು ಬೆಟ್ಸ್ ಕಟ್ಟಿದ್ದಾರೆ. ಅಖಿಲಾಂಡೇಶ್ವರಿ ಹಾಗೆಲ್ಲ ಸುಮ್ಮ ಸುಮ್ಮನೆ ವಿರೋಧ ಮಾಡುವವಳಲ್ಲ. ಆಯ್ತು ಎಂದು ಒಪ್ಪಿಕೊಂಡು ತನ್ನ ಸ್ಥಾನವನ್ನು ಕಂಪ್ಲೀಟ್ ಆಗಿ ಬಿಟ್ಟುಕೊಟ್ಟು, ಪಾರು ಸ್ಥಾನದಲ್ಲಿ ಅಖಿಲಮ್ಮ ನಿಂತು ಎಲ್ಲಾ ಮನೆ ಕೆಲಸವನ್ನು ನಿಭಾಯಿಸುತ್ತಿದ್ದಾಳೆ. ಈಗಾಗಲೇ ಪಾರು ಅಖಿಲಾಂಡೇಶ್ವರಿ ನೀಡಿರುವ ಗತ್ತು ಗಾಂಭೀರ್ಯ, ಸಾಮಾನ್ಯ ತಿಳುವಳಿಕೆ, ದೃಢ ನಿರ್ಧಾರ, ಧೈರ್ಯ, ಚಾಣಾಕ್ಷತನದ ಸವಾಲಿನಲ್ಲಿ ಎರಡರಲ್ಲಿ ಮಾತ್ರ ನಿರೀಕ್ಷೆ ರೀಚ್ ಮಾಡಿಲ್ಲ. ಇನ್ನು ಐದು ಸವಾಲುಗಳಿದ್ದು ಅದರಲ್ಲಿ ಬರುವ ಫಲಿತಾಂಶದ ಆಧಾರದ ಮೇಲೆ ಪಾರುನ ಅಖಿಲಾಂಡೇಶ್ವರಿ ಎಷ್ಟು ಒಪ್ಪಿಕೊಳ್ಳುತ್ತಾಳೆ ಎಂಬುದು ನಿರ್ಧಾರವಾಗುತ್ತೆ.


Click it and Unblock the Notifications











