ಮಹಿಳೆಯರಿಗಾಗಿ ಬರುತ್ತಿದೆ ಹೊಸ ರಿಯಾಲಿಟಿ ಶೋ..
ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಿ ಪದೇ ಪದೇ ವೀಕ್ಷಕರ ಮನ ಗೆಲ್ಲುತ್ತಿರುವ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಕಾರ್ಯಕ್ರಮವನ್ನು ಹೊತ್ತು ತಂದಿದೆ. ಇದು ಕೇವಲ ಮಹಿಳೆಯರಿಗಾಗಿ ಸಿದ್ಧ ಪಡಿಸಿರುವ ಶೋ ಆಗಿದೆ.
ಸರಿಗಮಪ, ಕಾಮಿಡಿ ಕಿಲಾಡಿಗಳು ಅಂತಹ ಶೋಗಳಲ್ಲಿ ಮಹಿಳೆಯರಿಗೂ ಆಸ್ಪದ ಕೊಡಲಾಗಿದೆ. ಆದರೆ ಪ್ರತ್ಯೇಕವಾಗಿ ಮಹಿಳೆಯರಿಗೇ ಎಂದು ಈ ರಿಯಾಲಿಟಿ ಶೋ ಅನ್ನು ಮಾಡಲಾಗುತ್ತಿದೆ. ಇದರ ಪ್ರೋಮೋ ಈಗಾಗಲೇ ಪ್ರಸಾರವೂ ಆಗಿದೆ.
ಜೀ ಕನ್ನಡ ವಾಹಿನಿ ಸೂಪರ್ ಮಾಮ್ ರಿಯಾಲಿಟಿ ಶೋ ಬಗ್ಗೆ ಕಳೆದ ತಿಂಗಳು ಪ್ರೋಮೋ ಒಂದನ್ನು ರಿಲೀಸ್ ಮಾಡಿತ್ತು. ಇದು ಅಮ್ಮಂದಿರಿಗಾಗಿಯೇ ಸಿದ್ಧ ಪಡಿಸಿದ್ದ ರಿಯಾಲಿಟಿ ಶೋ. ಆದರೆ ಅದಕ್ಕಿಂತಲೂ ಮುನ್ನ ಈಗ ಮತ್ತೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ವಾಹಿನಿ ಮುಂದಾಗಿದೆ. ಇದು ವೀಕ್ಷಕರಲ್ಲಿ ಕೊಂಚ ಕುತೂಹಲವನ್ನೂ ಮೂಡಿಸಿದೆ.

ಹೆಣ್ಣನ್ನು ವರ್ಣಿಸಿರುವ ಪ್ರೋಮೋ
ಇವರು ವಾತ್ಸಲ್ಯದ ಮೇರು ಪರ್ವತ, ಇವರ ಗೆಲ್ಲುವ ಛಲ ಅನವರತ, ಸಾಧನೆಯ ಶಿಖರದತ್ತ ಹೊರಟ ರಾಣಿಯರ ಹೋರಾಟ! ಸೂಪರ್ ಕ್ವೀನ್ ಎಂದು ಜೀ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಾದ ಇನ್ ಸ್ಟಾಗ್ರಾಂನಲ್ಲಿ ಹೊಸ ಪ್ರೋಮೋವನ್ನು ಅಪ್ ಲೋಡ್ ಮಾಡಿದೆ. ಇದರಲ್ಲಿ ಹೆಣ್ಣು ಎಂದರೆ ಬರೀ ಹೆಣ್ಣಲ್ಲ ಸಂಪ್ರದಾಯಕ್ಕೆ ಬೆಳಕು, ಏನೇ ಬರಲಿ ನಗುನಗುತಾನೇ ಎದುರಿಸುವ ಶಕ್ತಿ, ಅವಳ ಪ್ರತೀ ಹೆಜ್ಜೆ ಆತ್ಮವಿಶ್ವಾಸಕ್ಕೆ ಗುರುತು, ಎಲ್ಲಾ ಅವಮಾನಗಳನ್ನು ಬಹುಮಾನ ಮಾಡಿಕೊಳ್ಳುವವಳು , ಇವಳು ಎಲ್ಲೆಗಳೇ ಇಲ್ಲದ ಆಕಾಶ, ಅವಳ ಪ್ರತಿಯೊಂದು ವಿಷಯ ಕೂಡ ಸಾಧನೆಗೆ ಅವಕಾಶ, ಅವಳು ಎಲ್ಲಾ ಧೈರ್ಯಗಳ ಧೈರ್ಯ, ಅವಳ ಬಳೆ ಒಂದು ಸೈನ್ಯ, ಅವಳು ಪರಿಪೂರ್ಣ ಮಾತೃಭೂಮಿ, ಯಾವ ಪದಕ, ಸಿಂಹಾಸನವನ್ನೂ ಬಯಸದೆ ಸಾಧನೆಗೆ ಅಲಂಕಾರ ಆಗುವವಳೇ ಕ್ವೀನ್, ಪ್ರತೀ ಹೆಣ್ಣಲ್ಲೂ ನಾವು ನೋಡದೇ ಇರುವ ಸೂಪರ್ ಪವರ್ ಇರುತ್ತೆ. ಆ ಸೂಪರ್ ಪವರ್ ಇರುವವರೇ ಸೂಪರ್ ಕ್ವೀನ್ ಆಗುತ್ತಾರೆ. ಯಾರಾಗುತ್ತಾರೆ ಸೂಪರ್ ಕ್ವೀನ್..? ಎಂದು ಪ್ರೋಮೋದಲ್ಲಿ ಹೆಣ್ಣನ್ನು ವರ್ಣಿಸಲಾಗಿದೆ. ಪ್ರೋಮೋ ಅದ್ಭುತವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಕಾರ್ಯಕ್ರಮ ನೋಡಲು ಕಾಯುತ್ತಿದ್ದಾರೆ.

ನಡೆಸಿಕೊಡುವವರು ಯಾರು..?
ಇನ್ನು ಸೂಪರ್ ಕ್ವೀನ್ ರಿಯಾಲಿಟಿ ಶೋ ನವೆಂಬರ್ 19ರಿಂದ ಪ್ರಸಾರವಾಗುತ್ತದೆ ಎಂದು ಹೇಳಲಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸೂಪರ್ ಕ್ವೀನ್ ಪ್ರಸಾರವಾಗಲಿದ್ದು, ಈಗಾಗಲೇ ಪ್ರೋಮೋದಲ್ಲಿ ನಟ ವಿಜಯ್ ರಾಘವೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಈ ಹೊಸ ರಿಯಾಲಿಟಿ ಶೋ ಅನ್ನು ವಿಜಯ್ ರಾಘವೇಂದ್ರಅವರೇ ನಡೆಸಿಕೊಡಬಹುದು ಎಂದು ಊಹಿಸಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಜಡ್ಜ್‌ಗಳು ಕೂಡ ಇರುತ್ತಾರಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಕಾರ್ಯಕ್ರಮದಲ್ಲಿ ಏನಿರುತ್ತೆ?
ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ನಟಿಯರಾದ ಅಪೂರ್ವಶ್ರೀ, ರಶ್ಮೀ ಪ್ರಭಾಕರ್, ಗ್ಯಾಬ್ರಿಯಾಲ ಸ್ಮಿತ್, ಗೀತಾ ಭಾರತೀ ಭಟ್, ರಜಿನಿ, ಚಂದ್ರಕಲಾ ಮೋಹನ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹತ್ತು ಡೈನಾಮಿಕ್ ಮಹಿಳಾ ಸೆಲೆಬ್ರಿಟಿಗಳಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ, ಇವರಲ್ಲಿ ಯಾರು ದೈಹಿಕ ಮತ್ತು ಮಾನಸಿಕ ಸಹಿಷ್ಣುತೆಯನ್ನು ನಿರ್ಣಯಿಸಲು ಸಾಧ್ಯ ಎಂದು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಎಲ್ಲ ವಿಘ್ನಗಳ ವಿರುದ್ಧ ನಿಂತು ಹೊರ ಬರುವವರೇ 'ಸೂಪರ್ ಕ್ವೀನ್' ಆಗುತ್ತಾರೆ.

ಹೆಣ್ಮಕ್ಕಳಿಗಾಗೇ ಹೊಸ ರಿಯಾಲಿಟಿ ಶೋ
ಇನ್ನು ಜೀ ಕನ್ನಡ ವಾಹಿನಿ ಹೆಣ್ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿದೆ. ಹೀಗಾಗಿ ಮಹಿಳೆಯರಿಗಾಗಿ ಎಂದೇ ಹೊಸ ರಿಯಾಲಿಟಿ ಶೋ ಅನ್ನು ಪ್ರಾರಂಭಿಸುತ್ತಿದೆ. ಇನ್ನು ಈ ಸೂಪರ್ ಕ್ವೀನ್ ಎಂಬ ರಿಯಾಲಿಟಿ ಶೋ ಈಗಾಗಲೇ ತೆಲುಗು ಜೀನಲ್ಲೂ ಪ್ರಸಾರವಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಈ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಲಾಯ್ತು. ಇದೀಗ ಕನ್ನಡದಲ್ಲಿ ಸೂಪರ್ ಕ್ವೀನ್ ಪ್ರಾರಂಭವಾಗುತ್ತಿರುವುದು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.


Click it and Unblock the Notifications











