Weekend With Ramesh: ಮತ್ತೆ ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್, ಮೊದಲ ಅತಿಥಿ ಯಾರು?
ಸಾಧಕರ ಸಾಧನೆಯ ಹಾದಿ ಬಗ್ಗೆ ಪ್ರೇಕ್ಷಕರ ಮುಂದಿಟ್ಟು, ಯುವ ಸಮೂಹಕ್ಕೆ ಸ್ಫೂರ್ತಿ ತುಂಬುತ್ತಿದ್ದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್. ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರ ನಡೆಸಿಕೊಡುತ್ತಿದ್ದ ಎಲ್ಲರ ನೆಚ್ಚಿನ ಶೋ ಅಂದರೆ ಅದು ವೀಕೆಂಡ್ ವಿತ್ ರಮೇಶ್.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೋಡಲು ಎಲ್ಲರೂ ತುಂಬಾ ಕಾತುರದಿಂದ ಕಾಯುತ್ತಿದ್ದರು. ಪ್ರತೀ ಎಪಿಸೋಡ್ ಕೂಡ ರೆಡ್ ಸೀಟ್ ಮೇಲೆ ಯಾವ ಸಾಧಕ-ಸಾಧಕಿ ಈ ವಾರ ಕೂರುತ್ತಾರೆ ಅನ್ನೋ ಕುತೂಹಲದಿಂದ ಕೂಡಿರುತ್ತಿತ್ತು.
ಇಷ್ಟು ಫೇಮಸ್ ಆಗಿದ್ದ ಶೋ ಕಳೆದ ಮೂರು ವರ್ಷದಿಂದ ತೆರೆ ಮೇಲೆ ಕಾಣದೆ ಜನ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ಹಾಗಲ್ಲ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಹೋಸ್ಟ್ ಮಾಡಲಿರುವ ರಮೇಶ್
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದರು. ರಮೇಶ್ ಅವರ ಕನ್ನಡ ಭಾಷೆಯ ಮೇಲಿನ ಹಿಡಿತ, ಅವರು ಹೋಸ್ಟ್ ಮಾಡುವ ರೀತಿ ಎಲ್ಲವೂ ಸೂಪರ್. ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ರಮೇಶ್ ಅವರೇ ಕರೆಕ್ಟ್ ಎನ್ನುತ್ತಾರೆ. ಈಗ ಮತ್ತೆ ಕಿರುತೆರೆಗೆ ಬರಲಿದ್ದು, ಈ ಬಾರಿಯೂ ರಮೇಶ್ ಅವರೇ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾಧಕರ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸಲಿದ್ದಾರೆ. ಈ ಸುದ್ದಿಯನ್ನು ಕೇಳಿದ ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಲು ಕಾಯುತ್ತಿದ್ದಾರೆ.

ಮರು ಪ್ರಸಾರ ಕಂಡಿದ್ದ ಶೋ
ಕಳೆದ ಸೀಸನ್ 2019ರಲ್ಲಿ ಪ್ರಸಾರವನ್ನು ಕಂಡಿತ್ತು. ವೀಕೆಂಡ್ ವಿತ್ ರಮೇಶ್ ಸೀಸನ್ 4ರಲ್ಲಿ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿದ್ದರು. ಬಳಿಕ ಇನ್ ಫೋಸಿಸ್ ಸ್ಥಾಪಿಸಿದ ಸುಧಾಮೂರ್ತಿ ದಂಪತಿಗಳು ಆಗಮಿಸಿದ್ದರು. ತದ ನಂತರ ಶ್ರೀಮುರಳಿ, ವಿನಯಾ ಪ್ರಸಾದ್, ಟೈಗರ್ ಅಶೋಕ್, ಶಂಕರ್ ಬಿದರಿ ಸೇರಿದಂತೆ ಇನ್ನೂ ಕೆಲ ಸಾಧಕರು ಗೆಸ್ಟ್ ಸೀಟ್ ಅನ್ನು ಅಲಂಕರಿಸಿದ್ದರು. ಈ ಎಪಿಸೋಡ್ ಗಳು ಕೂಡ ವೀಕ್ಷಕರ ಗಮನ ಸೆಳೆದಿದ್ದವು. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸೀಸನ್ ಅನ್ನು ಮರು ಪ್ರಸಾರ ಮಾಡಲಾಗಿತ್ತು. ತದ ನಂತರ ಮೂರು ವರ್ಷದಿಂದ ಈ ಕಾರ್ಯಕ್ರಮ ಇನ್ನು ಪ್ರಸಾರವಾಗಿಲ್ಲ.

ಯಾವಾಗ ಪ್ರಸಾರವಾಗಬಹುದು..?
ಝೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮವನ್ನು ಕೆಲ ದಿನಗಳಲ್ಲೇ ರಿಲೀಸ್ ಮಾಡಲಿದ್ಯಂತೆ ವಾಹಿನಿ. ಆದರೆ ಯಾವಾಗ ಕಾರ್ಯಕ್ರಮ ಆರಂಭವಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಮೊದಲ ಅತಿಥಿ ಯಾರು?
ಈ ಹಿಂದೆ ಝೀ-5 ಆಪ್ ಮೂಲಕ ವೀಕೆಂಡ್ ವಿತ್ ರಮೇಶ್ ಸೀಸನ್ 5 ನೋಡಬಹುದು ಎಂದು ಹೇಳಲಾಗಿತ್ತು. ಇದರಿಂದ ಹಲವರು ಬೇಸರ ಮಾಡಿಕೊಂಡಿದ್ದರು. ಆದರೆ ಈಗ ವಾಹಿನಿಯಲ್ಲೇ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಸೀಸನ್ 5 ರಲ್ಲಿ ಮೊದಲ ಗೆಸ್ಟ್ ರಿಷಭ್ ಶೆಟ್ಟಿ ಬರಲಿದ್ದು, ಎರಡನೇ ಎಪಿಸೋಡ್‌ಗೆ ಡಾಲಿ ಧನಂಜಯ್ ಆಗಮಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಇವರಿಬ್ಬರ ಶೂಟಿಂಗ್ ಮುಗಿದಿದ್ದು, ಕಳೆದ ವಾರ ಪ್ರೋಮೋ ಶೂಟ್ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಈ ಬಾರಿ ವೀಕೆಂಡ್ ವಿತ್ ರಮೇಶ್ ಪ್ರಸಾರವಾಗುವುದು ಪಕ್ಕಾ ಆಗಿದ್ದು, ಪ್ರೇಕ್ಷಕರು ಫುಲ್ ಎಕ್ಸೈಟ್ ಮೆಂಟ್ ನಲ್ಲಿ ಕಾಯುತ್ತಿದ್ದಾರೆ.


Click it and Unblock the Notifications











