Bhoomige Bandha Bhagavantha: ಸೋಮವಾರ ಭೂಮಿಗೆ ಬಂದಿಳಿಯುತ್ತಾನೆ ಭಗವಂತ!
ಸದ್ಯ ಜೀ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ಸೂಪರ್ ಆಗಿದೆ. ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಲೇ ಇದೆ. ಸದ್ಯ ಇರುವಂತ ಧಾರಾವಾಹಿಗಳು ಕೂಡ ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ಇದರ ನಡುವೆಯೇ ಎರಡು ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಕಾಯುತ್ತಿವೆ.
ಟಿಆರ್‌ಪಿಯಲ್ಲೂ ಎಲ್ಲಾ ಧಾರಾವಾಹಿಗಳು ಮುಂದಿವೆ. ಸಂಜೆ 6 ಗಂಟೆಗೆ ಆರಂಭವಾಗುವ ಧಾರಾವಾಹಿಗಳು ರಾತ್ರಿ 10 ಗಂಟೆಯ ತನಕ ಜನ ಮೆಚ್ಚಿದ ಧಾರಾವಾಹಿಗಳೇ ಆಗಿವೆ. ಇದೀಗ ಹೊಸದೊಂದು ಧಾರಾವಾಹಿ ಶೀಘ್ರದಲ್ಲಿಯೇ ಬರಲಿದೆ.
'ಭೂಮಿಗೆ ಬಂದ ಭಗವಂತ' ಎಂಬ ಧಾರಾವಾಹಿ ಈಗಾಗಲೇ ಸಿದ್ಧವಾಗಿದೆ. ಈ ಧಾರಾವಾಹಿಯ ಜೊತೆಗೆ 'ಸೀತಾ ರಾಮ' ಎಂಬ ಮತ್ತೊಂದು ಸೀರಿಯಲ್ ಕೂಡ ಪ್ರಸಾರಕ್ಕಾಗಿ ಕಾಯುತ್ತಿದೆ.

ರಾತ್ರಿ 10ಕ್ಕೆ ಧಾರಾವಾಹಿ ಪ್ರಸಾರ
'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಪ್ರೋಮೋಗಳನ್ನು ನೋಡಿರುವ ಪ್ರೇಕ್ಷಕರು ಯಾವಾಗ ಪ್ರಸಾರವಾಗುತ್ತೆ ಎಂದು ಕಾಯುತ್ತಿದ್ದರು. ಅಂತಹವರಿಗೆ ಈಗ ಜೀ ಕನ್ನಡ ವಾಹಿನಿ ಸಿಹಿ ಸುದ್ದಿಯನ್ನು ನೀಡಿದೆ. ಇದೇ ಸೋಮವಾರದಿಂದ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಪ್ರಸಾರವಾಗುತ್ತಿದೆ. ರಾತ್ರಿ 10 ಗಂಟೆಗೆ ಧಾರಾವಾಹಿ ಪ್ರಸಾರವಾಗಲಿದ್ದು, ಸಾಮಾನ್ಯವಾಗಿ ಹೊಸ ಧಾರಾವಾಹಿಗಳನ್ನು ಪ್ರೈಮ್ ಟೈಮ್‌ನಲ್ಲಿ ಪ್ರಸಾರ ಮಾಡಲಾಗುತ್ತೆ. ಆದರೆ, ಈಗಾಗಲೇ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಅದ್ಭುತವಾಗಿ ಮೂಡಿ ಬರುತ್ತಿದ್ದು, ಟಿಆರ್‌ಪಿ ಅಲ್ಲೂ ಮುಂದಿವೆ. ಹೀಗಾಗಿ ಖಾಲಿ ಇರುವ ಸ್ಲಾಟ್‌ನಲ್ಲೇ ಈ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತದೆ.

ಮಿಡಲ್ ಕ್ಲಾಸ್ ಫ್ಯಾಮಿಲಿ ಕಥೆ
ಧಾರಾವಾಹಿಯಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿಯ ಆಗು ಹೋಗುಗಳನ್ನು ತೆರೆ ಮೇಲೆ ತೋರಿಸಲಾಗುತ್ತಿದೆ. ಪ್ರೋಮೋದಲ್ಲಿ ಅದಾಗಲೇ ನವೀನ್ ಕೃಷ್ಣ ಪಾತ್ರ ಎಂಥದ್ದು ಎಂಬುದು ಸಾಬೀತಾಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಆಧಾರಸ್ತಂಭವಾಗಿ ನವೀನ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಜೀ ಕನ್ನದಲ್ಲಿ ಈ ಹಿಂದೆ ಮೂಡಿ ಬರುತ್ತಿದ್ದ 'ರಾಧಾ ಕಲ್ಯಾಣ' ಎಂಬ ಧಾರಾವಾಹಿ ನಾಯಕಿಯಾಗಿ ನಟಿಸಿದ್ದ ಕೃತಿ ರವೀಂದ್ರ ಅವರೇ ಈ ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅಪಾರ್ಥ ಮಾಡಿಕೊಳ್ಬೇಡಿ ಅಂತಾರೆ ಉಮೇಶ್
ನಾಯಕ- ನಾಯಕಿಯನ್ನು ಹೊರತು ಪಡಿಸಿ, ಹಿರಿಯ ನಟ ಉಮೇಶ್ ಅವರು ಕೂಡ ಧಾರಾವಾಹಿಯಲ್ಲಿದ್ದಾರೆ. ಉಮೇಶ್ ಅವರ ಕಾಮಿಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಅವರದೊಂದು ಸಿಗ್ನೇಚರ್ ಡೈಲಾಗ್ ಒಂದಿದೆಯಲ್ಲ. ಅಯ್ಯಯ್ಯೋ ಯಾರು ಅಪಾರ್ಥ ಮಾಡಿಕೊಳ್ಳಬೇಡಿ ಎಂಬುದು. ಆ ಡೈಲಾಗ್ ಹೇಳುವ ಮೂಲಕವೇ ಮತ್ತೆ ಕಿರುತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಮಕ್ಕಳ ಪಾತ್ರದಲ್ಲಿ ಅಂಕಿತಾ, ಅನುರಾಗ್ ಹಾಗೂ ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಇದ್ದಾರೆ. ಎಮ್.ಎನ್.ಸುರೇಶ್, ಬೆಂಗಳೂರು ನಾಗೇಶ್, ಪವನ್, ಗೌತಮಿ ಸೇರಿದಂತೆ ಹಲವರು ನಟಿಸಿದ್ದಾರೆ.

ನಾಗಿಣಿ- 2 ಜಾಗಕ್ಕೆ ಬಂದ ಭಗವಂತ
ಇನ್ನು ಈ ಧಾರಾವಾಹಿಯಲ್ಲಿ ಬರುವ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜನೆಯನ್ನು ಕಾರ್ತಿಕ್ ಶರ್ಮಾ ಮಾಡಿದ್ದಾರೆ. ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ ವಿ ಧಾರಾವಾಹಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿಗೆ ಧ್ವನಿ ನೀಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ನಾಗಿಣಿ'-2 ಧಾರಾವಾಹಿ ಮುಕ್ತಾಯಗೊಂಡಿದೆ. ಈ ಧಾರಾವಾಹಿ ಸಮಯಕ್ಕೆ ಇನ್ನು ಮುಂದೆ 'ಭೂಮಿಗೆ ಬಂದ ಭಗವಂತ' ಪ್ರಸಾರವಾಗಯತ್ತದೆ.


Click it and Unblock the Notifications











