Zee Kannada: ಯಕ್ಷಗಾನ ಪ್ರೇಮಿಗಳ ಕ್ಷಮೆಯಾಚಿಸಿದ ಜೀ ಕನ್ನಡ.. ಅಷ್ಟಕ್ಕೂ ಆದ ತಪ್ಪೇನು?
ಜೀ ಕನ್ನಡ ವಾಹಿನಿಯಲ್ಲಿ ವಾರ ಪೂರ್ತಿ ಧಾರಾವಾಹಿ ನೋಡಿದವರಿಗೆ ವೀಕೆಂಡ್‌ನಲ್ಲಿ ರಿಯಾಲಿಟಿ ಶೋಗಳ ಮೂಲಕ ರಂಜಿಸುತ್ತಾರೆ. ಅದರಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವುದು ಡಿಕೆಡಿ ಕಾರ್ಯಕ್ರಮ. ಮಕ್ಕಳ ಪ್ರತಿಭೆ ಪ್ರದರ್ಶನದ ಒಂದೊಳ್ಳೆ ವೇದಿಕೆ. ಪ್ರತಿವಾರವೂ ಟಫ್ ಕಾಂಪಿಟೇಶನ್ ಇರುತ್ತದೆ. ಮಕ್ಕಳು ಕೂಡ ಅಷ್ಟೇ ರಿಸ್ಕಿ ಪರ್ಫಾಮೆನ್ಸ್ ಕೊಡುತ್ತಾ ಬರುತ್ತಿದ್ದಾರೆ. ಆದರೆ ಈ ವಾರದ ಡಿಕೆಡಿ ಸಂಚಿಕೆ ವಿವಾದಕ್ಕೀಡಾಗಿತ್ತು.
ಡಿಕೆಡಿಯಲ್ಲಿ ಡ್ಯಾನ್ಸ್ ಜೊತೆಗೆ ಒಂದಷ್ಟು ಸಂದೇಶವಿರುವಂತಹ ವಿಚಾರಗಳು ಸಿಗುತ್ತಾ ಹೋಗುತ್ತವೆ. ಒಂದೊಂದು ಜಿಲ್ಲೆಯ ವಿಶೇಷ ಕಲೆಯ ಪ್ರದರ್ಶನಗಳು ನೋಡುವುದಕ್ಕೆ ಸಿಗುತ್ತವೆ. ಆ ಕಲೆಯ ಬಗ್ಗೆ ಮಾಹಿತಿಯನ್ನು ಕೊಡುತ್ತಾರೆ. ಆ ಕಲೆಯ ಹಿನ್ನೆಲೆ, ಕಲೆಯ ಪೂಜೆ, ಹೀಗೆ ಅದರ ವೈಶಿಷ್ಟ್ಯವನ್ನು ಡ್ಯಾನ್ಸ್ ಮೂಲಕ ಸಾರುತ್ತಾರೆ. ಆದರೆ ಕಳೆದ ವಾರ ಈ ವೇದಿಕೆಯಲ್ಲಿ ನೀಡಿದ ಯಕ್ಷಗಾನ ಪ್ರದರ್ಶನ ಒಂದಷ್ಟು ಜನರ ಬೇಸರಕ್ಕೆ ಕಾರಣವಾಗಿದೆ. ಅದಕ್ಕೀಗ ಜೀ ಕನ್ನಡ ಕ್ಷಮೆಯನ್ನು ಯಾಚಿಸಿದೆ.

ಡ್ಯಾನ್ಸ್‌ನಲ್ಲಿ ಆದ ಪ್ರಮಾದವೇನು?
ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಮಾಸ್ಟರ್ ಜೊತೆಗೆ ಸ್ಪರ್ಧೆಗಳು ಡ್ಯಾನ್ಸ್ ಮಾಡುವ ಸಂಚಿಕೆಯಿತ್ತು. ಅದರಲ್ಲಿ ಮಂಜು ಮಾಸ್ಟರ್ ತಮ್ಮ ಟೀಂನೊಂದಿಗೆ ಅದ್ಭುತ ಕಲೆಯನ್ನಿಟ್ಟುಕೊಂಡು ಡಿಕೆಡಿ ವೇದಿಕೆಗೆ ಎಂಟ್ರಿಯಾಗಿದ್ದರು. ಯಕ್ಷಗಾನ ಎಂಬುದು ಕರಾವಳಿ ಭಾಗದ ಗಂಡು ಕಲೆಯೆಂದೇ ಖ್ಯಾತಿ ಪಡೆದಿದೆ. ಈ ಕಲೆಯ ವೇಷ ಧರಿಸಿ, ಡಿಕೆಡಿ ವೇದಿಕೆಯಲ್ಲಿ ಏನನ್ನೋ ಹೇಳಲು ಹೊರಟವರು, ಕಾಮಿಡಿ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಯಕ್ಷಗಾನದ ಕಲೆಯನ್ನು ಸಿನಿಮಾ ಹಾಡಿನ ಜೊತೆ ಬೆರೆಸಿ, ಹಾಸ್ಯದ ರೂಪದಲ್ಲಿ ಪ್ರಸ್ತುತ ಪಡಿಸಲಾಗಿತ್ತು. ಅದೇ ಹಲವರ ಸಮಧಾನಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲೂ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಕ್ಷಮೆ ಕೇಳಲು ಒತ್ತಾಯ
ಕರಾವಳಿಯ ಯಕ್ಷಗಾನ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗೊಂಡಿದ್ದರು. ಜೀ ಕನ್ನಡವನ್ನು ಬಾಯ್‌ಕಾಟ್ ಮಾಡುವ ಅಭಿಯಾನ ಶುರು ಮಾಡಿದ್ದರು. ಯಕ್ಷಗಾನ ಮನರಂಜನೆಯಾದರೂ ಅದಕ್ಕೊಂದು ದೈವಿಕ ಭಾವನೆ ಇದೆ. ಇಂದಿಗೂ ಸಂಕಟ ಬಂದಾಗ ದೇವರಿಗೆ ಹೊರುವ ಹರಕೆಯಲ್ಲಿ ಯಕ್ಷಗಾನ ಕೂಡ ಒಂದು. ಯಕ್ಷಗಾನ ಕಲಾವಿದರಾಗಿವುದು ಅಷ್ಟು ಸುಲಭದ ಮಾತಲ್ಲ. ಕರಾವಳಿ ಭಾಗದಲ್ಲಿ ದೇವಸ್ಥಾನಗಳು ತಮ್ಮದೇ ಆದ ಕಲಾವಿದರ ಸಂಘ ಕಟ್ಟಿಕೊಂಡು, ಅದನ್ನು ಈಗಲೂ ಭಕ್ತಿ ಪೂರ್ವಕವಾಗಿ ನೆರವೇರಿಸಿಕೊಂಡ ಬಂದಿದ್ದಾರೆ. ಮನರಂಜನೆಗಾಗಿ ಬೇರೆ ವಿಚಾರಗಳು ಇವೆ. ಆದರೆ ಇಂಥ ದೈವಿಕ ಭಾವನೆ ಹೊಂದಿರುವ ಕಲೆಯನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆಯನ್ನು ನೀಡಿದ್ದಾರೆ.
ಜೀ ಕನ್ನಡದಿಂದ ಕ್ಷಮೆಯಾಚನೆ
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜೀ ಕನ್ನಡ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡಿದೆ. ಯಕ್ಷಗಾನ ಕಲಾವಿದರಿಗೆ ಕ್ಷಮೆಯಾಚಿಸಿದೆ. "ಜೀ ಕನ್ನಡ ವಾಹಿನಿಯು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೂಲಕ ಅನೇಕ ಕಲಾಪ್ರಕಾರಗಳನ್ನು ಗೌರವಿಸುತ್ತ, ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ. ಆದರೆ ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟಿಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯುತ್ತಮ ಕೆಲಸಗಳಿಗಾಗಿ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ" ಎಂದು ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆಯಾಚಿಸಿದೆ.

ಈ ಕ್ಷಮೆಗೆ ಸಮಾಧಾನವಾಗಾದ ಪ್ರೇಮಿಗಳು
ಜೀ ಕನ್ನಡ ತಮ್ಮೆಲ್ಲಾ ಅಧಿಕೃತ ಸೋಷಿಯಲ್ ಮೀಡಿಯಾದಲ್ಲೂ ಕ್ಷಮಾಪಣಾ ಪತ್ರವನ್ನು ಹಾಕಿದೆ. ಆದರೆ ಇದಕ್ಕೆ ಸಮಧಾನಗೊಳ್ಳದ ಯಕ್ಷಗಾನ ಪ್ರೇಮಿಗಳು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. "ಆಂಕರ್ ಅನುಶ್ರೀಯವರ ಮೂಲಕ, ಅದೇ ಡಿಕೆಡಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ಅಭಿಮಾನಿಗಳೆಲ್ಲರ ಪರವಾಗಿ ಜೀ ಕನ್ನಡ ವಾಹಿನಿ ಕ್ಷಮೆ ಯಾಚಿಸಬೇಕು. ಅಲ್ಲಿಯ ತನಕ ನಾವು ಎಲ್ಲಿಯೂ ಉತ್ತರನ ಪೌರುಷ ತೋರಿಸಲಾರೆವು. ಬದಲಾವಣೆ ಎಲ್ಲೆಡೆಯೂ ಆಗಬೇಕಿದೆ." ಎಂದು ಅಸಮಧಾನ ಹೊರಹಾಕಿದ್ದಾರೆ.


Click it and Unblock the Notifications











