ಬೇರೆ ಚಾನೆಲ್ ಮರೆತುಬಿಡಿ, ನಮ್ಮನ್ನು ಕ್ಷಮಿಸಿ ಬಿಡಿ ; ಜೀ ಕನ್ನಡ ಕ್ಷಮೆ ಕೇಳಿದ್ದಾ? ಬೇರೆಯವರ ಕಾಲೆಳೆದಿದ್ದಾ?
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರೇಕ್ಷಕರನ್ನು ಸೆಳೆಯಲು ಕಿರುತೆರೆಯ ವಾಹಿನಿಗಳು ನಾಣಾ ರೀತಿಯ ಕಸರತ್ತು ಮಾಡುತ್ತವೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸಧಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ಹೊಸತನ ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ.ಆ ಪೈಕಿ ಕಳೆದ ಹಲವು ವರ್ಷಗಳಿಂದ ತನ್ನನ್ನೂ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ವಾಹಿನಿಗಳಲ್ಲಿ ''ಜೀ ಕನ್ನಡ'' ಕೂಡ ಒಂದು.
''ಅಮೃತಧಾರೆ''.. ''ಕರ್ಣ''.. ''ಅಣ್ಣಯ್ಯ''.. ''ನಾ ನಿನ್ನ ಬಿಡಲಾರೆ''.. '' ಪುಟ್ಟಕ್ಕನ ಮಕ್ಕಳು''.. '' ಶ್ರೀ ರಾಘವೇಂದ್ರ ಮಹಾತ್ಮೆ''.. ಹೀಗೆ ಬೇರೆ ಬೇರೆ ಜಾನರ್‌ನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ಇದೇ ಸಮಯದಲ್ಲಿ ''ಕಾಮಿಡಿ ಕಿಲಾಡಿಗಳು''... '' ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್''.. ''ಡ್ರಾಮಾ ಜ್ಯೂನಿಯರ್ಸ್''.. ''ಭರ್ಜರಿ ಬ್ಯಾಚುಲರ್ಸ್''.. ''ಮಹಾನಟಿ''.. ''ನಾವು ನಮ್ಮವರು''.. ಅಂತಹ ರಿಯಾಲಿಟಿ ಶೋಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾಗಿದೆ. ಕನ್ನಡಿಗರ ಹೃದಯ ಗೆದ್ದಿದೆ.

ಇಂಥಾ ಜೀ ಕನ್ನಡ ಇಂದು ಬಹಿರಂಗವಾಗಿ ಕನ್ನಡಿಗರಲ್ಲಿ ಕ್ಷಮೆಯನ್ನು ಕೇಳಿದೆ. ಕನ್ನಡಿಗರನ್ನು ಉದ್ದೇಶಿಸಿ ಪತ್ರವನ್ನು ಬರೆದಿದೆ. ಹಲವರನ್ನು ಅಚ್ಚರಿಗೆ ಕೂಡ ದೂಡಿದೆ. ಆದರೆ, ಇದೇ ಸಮಯದಲ್ಲಿ ಇದು ಕ್ಷಮಾಪಣಾ ಪತ್ರವೋ ಅಥವಾ ಪ್ರತಿಸ್ಫರ್ಧಿಗಳ ಕಾಲೆಳೆಯುವ ತಂತ್ರವೋ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಯಾಕೆಂದರೆ ಜೀ ಕನ್ನಡ ಬರೆದಿರುವ ಪತ್ರವೇ ಹಾಗಿದೆ.
ಜೀ ಕನ್ನಡ ಹಂಚಿಕೊಂಡ ಪತ್ರ
ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ. ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ. ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ಧನ್ಯವಾದಗಳು.
ಹೀಗೆ ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಕ್ಷಮಾಪಣಾ ಪತ್ರವನ್ನು ಹಂಚಿಕೊಂಡಿದೆ. ಆದರೆ.. ಈ ಪತ್ರಕ್ಕೆ ತರಹೇವಾರಿ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಹಲವರು ಜೀ ಕನ್ನಡದ ಈ ಕ್ಷಮಾಪಣಾ ಪತ್ರಕ್ಕೆ ಅಪಸ್ವರ ಎತ್ತಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
''ಬಿಗ್ ಬಾಸ್'' ಬಂದ ಮೇಲೆ ಬಿದ್ದಿದ್ದೀರ ಮೀಸೆ ಮಣ್ಣಾಗಿದೆ. ಎಲ್ಲರಿಗೂ ಕಾಣಿಸುತ್ತಿದೆ. ಒರೆಸಿಕೊಳ್ಳಿ. ಇಂತ ತಿರ್ಪೆ ಶೋಕಿ ಎಲ್ಲ ಬೇಡ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತದೆ. ಹೊಸ ಧಾರಾವಾಹಿ, ರಿಯಾಲಿಟಿ ಶೋ ಉನ್ನತಿಯಿಂದ ಅವನತಿಯ ಕಡೆಗೆ ಹೋಗುತ್ತಿದೆ ಎಂದು ಕಾಮೆಂಟ್ ಮಾಡಿದ್ಧಾರೆ. ಇದ್ಯಾಕೋ ಅತಿಯಾಗಲಿಲ್ವಾ..? ಓ ಭ್ರಮೆ.. ಅಯ್ಯೋ ಧಾರಾವಾಹಿಗಳಲ್ಲಿ ಬರುವ ಹೆಣ್ಣು ವಿಲ್ಲನ್ ಗಳು..ದೊಡ್ಡ ಕಂಪನಿಯ ಒಡೆಯನಾದರೂ ಜೀವನದ ಸುತ್ತ ಮುತ್ತ ನಡೆಯುವ ಸೂಕ್ಷ್ಮಥೆ ಗಳ ಪರಿಜ್ಞಾನವೇ ಇಲ್ಲದೆ ವರ್ತಿಸುವ ಹೀರೋಗಳು..

ಹೀಗೆ ಹಲವಾರು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಜೀ ಕನ್ನಡ ಹಂಚಿಕೊಂಡಿರುವ ಈ ಕ್ಷಮಾಪಣಾ ಪತ್ರಕ್ಕೆ ಬೆಂಬಲದ ಬಾವುಟ ಹಾರಿಸಿದ್ದಾರೆ. ಇನ್ನೂ ಪತ್ರವನ್ನು ಹಂಚಿಕೊಂಡಿರುವ ಜೀ ಕನ್ನಡ ಇದೇ ಸಮಯದಲ್ಲಿ ಟಿಆರ್‌ಪಿ ರೇಸ್‌ನಲ್ಲಿ ನಾವೇ ನಂಬರ್ ಒನ್ ಎನ್ನುವ ಪೋಸ್ಟ್‌ನ್ನು ಕೂಡ ಹಂಚಿಕೊಂಡಿದೆ. ಈ ಹಿನ್ನೆಲೆ ಪ್ರತಿಸ್ಫರ್ಧಿ ವಾಹಿನಿಯ ಕಾಲೆಳೆಯಲು ಜೀ ಕನ್ನಡ ಈ ಪತ್ರವನ್ನು ಹಂಚಿಕೊಂಡಿದೆ ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸದ್ಯ ಜೀ ಕನ್ನಡ ಹಂಚಿಕೊಂಡ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವೈರಲ್ ಆಗಿದೆ. ಚರ್ಚೆಗೆ ಕಾರಣವಾಗಿದೆ.


Click it and Unblock the Notifications











