ಡಿಸೆಂಬರ್ 22 ಕ್ಕೆ ಜೀ ಕುಟುಂಬ ಅವಾರ್ಡ್ಸ್ 2012
ಕನ್ನಡಿಗರ ಕಣ್ಮಣಿ, ವಿಭಿನ್ನ ಕಾರ್ಯಕ್ರಮಗಳಿಂದ ಜನಮನ ಗೆದ್ದ ಜೀ ಕನ್ನಡ ವಾಹಿನಿ ಇನ್ನೊಂದು ಬೃಹತ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಡಿಸೆಂಬರ್ 22, ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ 'ಜೀ ಕುಟುಂಬ ಅವಾರ್ಡ್ಸ್-2012' ಹಮ್ಮಿಕೊಳ್ಳಲಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ಇತರೆ ಕಾರ್ಯಕ್ರಮ ವಿಭಾಗಗಳಲ್ಲಿ 21 ಪ್ರಶಸ್ತಿಗಳು ಮತ್ತು ಕಿರುತೆರೆಯಲ್ಲಿ ಜೀವಮಾನ ಶ್ರೇಷ್ಠ ಸಾಧನೆಗಾಗಿ ಒಂದು ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಜೀ ಕನ್ನಡ ವಾಹಿನಿ ಆರಂಭವಾಗಿ ಏಳು ವರ್ಷಗಳಾಗುತ್ತಿವೆ. ಕನ್ನಡ ಕಿರುತೆರೆಯಲ್ಲಿ ಮೊಟ್ಟಮೊದಲ ಸಲ ಕಿರುತೆರೆ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದ್ದೇ ಜೀ ಕನ್ನಡ. ಪ್ರಶಸ್ತಿ ಪರಿಕಲ್ಪನೆ ಕೂಡಾ ವಿಭಿನ್ನ ಈ ಬಾರಿ. ಜೀ ಕುಟುಂಬ ಅವಾರ್ಡ್ಸ್ - ಬಾಂಧವ್ಯ ಎಂಬ ಥೀಮ್ ಹೊಂದಿದೆ. 'ಜೀ ಕುಟುಂಬ' ಎಂಬ ಹೆಸರಿಗೆ ಅನ್ವರ್ಥಕವಾಗುವಂತೆ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪ್ರಶಸ್ತಿಗಳೇ ಇರುತ್ತವೆ. ಉದಾಹರಣೆಗೆ: ಧಾರಾವಾಹಿಗಳಲ್ಲಿ ಬೆಸ್ಟ್ ಕುಟುಂಬ, ಬೆಸ್ಟ್ ಮಗ, ಬೆಸ್ಟ್ ಮಗಳು, ಬೆಸ್ಟ್ ಜೋಡಿ, ಬೆಸ್ಟ್ ಕೇಡಿಲೇಡಿ, ಬೆಸ್ಟ್ ನಾನ್ ಫಿಕ್ಷನ್ ಶೋ ಇತ್ಯಾದಿ."ಕರ್ನಾಟಕದ ಟಿವಿ ಇತಿಹಾಸದಲ್ಲಿ 'ಕುಟುಂಬ ಅವಾರ್ಡ್ಸ್' ಪರಿಕಲ್ಪನೆಯನ್ನು ಪರಿಚಯಿಸಿದ ಹಿರಿಮೆ ಜೀ ಕನ್ನಡದ್ದು. ವಾಹಿನಿಯ ಬೆಳವಣಿಗೆಯಲ್ಲಿ ಪಾತ್ರರಾದ ಪ್ರತಿಯೊಬ್ಬರಿಗೂ ಗೌರವ ತೋರಿಸುವುದು ನಮ್ಮ ಕರ್ತವ್ಯ. ಪ್ರಶಸ್ತಿ ಪಟ್ಟಿ ತಯಾರಿ ಅತ್ಯಂತ ಪಾರದರ್ಶಕತೆಯಿಂದ ಕೂಡಿದ್ದು ಇದರಲ್ಲಿ ಪ್ರಾಥಮಿಕ ಹಂತದ ತೀರ್ಪುಗಾರರಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಕಲಾವಿದೆ ಅಪರ್ಣಾ ಇವರು ವಾಹಿನಿಯ ಪ್ರತಿಯೊಂದು ಕಾರ್ಯಕ್ರಮದ ತುಣುಕುಗಳನ್ನು ಖುದ್ದಾಗಿ ವೀಕ್ಷಿಸಿ ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಿದ್ದಾರೆ.
ನಂತರ ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಮ್, ಪಿ.ಶೇಷಾದ್ರಿ, ಪೂಜಾ ಗಾಂಧಿ ಮತ್ತು ಅರ್ಚನಾ ಉಡುಪ ಒಳಗೊಂಡ ಅಂತಿಮ ಆಯ್ಕೆ ಸಮಿತಿ ತನ್ನ ಆಯ್ಕೆಯ ಪಟ್ಟಿ ತಯಾರಿಸಿದೆ. ಜೊತೆಗೆ ಎಸ್‍ಎಂಎಸ್ ಮೂಲಕ ವೀಕ್ಷಕರು ಸೂಚಿಸಿದ ಆಯ್ಕೆಗಳನ್ನು ಸೇರಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಗೊಳ್ಳಲಿದೆ" ಎಂದು ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ.ಎಂ. ಗೌತಮ್ ಮಾಚಯ್ಯ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರನಟಿಯರಾದ ರಾಗಿಣಿ, ಯಜ್ಞಾ ಶೆಟ್ಟಿ, ರಿಷಿಕಾ ಹೀಗೆ ಸಾಲು ಸಾಲು ತಾರೆಯರ ಡ್ಯಾನ್ಸ್, ಜೀ ಕನ್ನಡ ಧಾರಾವಾಹಿ ಕಲಾವಿದರ ನೃತ್ಯಗಳು, ರಾಜೇಶ ಕೃಷ್ಣನ್, ಗುರುಕಿರಣ್, ಅರ್ಚನಾ ಉಡುಪ ಹಾಡುಗಳು ಹಾಗೂ ವಿಶೇಷ ರಂಜನೆಗೆ ಮಂಗಳೂರಿನ ಅಶೋಕ್ ಪೊಳಲಿ ಕೋಳಿ ಡ್ಯಾನ್ಸ್ ಇದೆ. ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಈ ವಿಭಿನ್ನ ಕಾರ್ಯಕ್ರಮದ ಪ್ರಾಯೋಜಕರು ಚಂದ್ರಿಕಾ ಫೇಸ್ ವಾಶ್, ಶ್ರೀಸಾಯಿ ಗೋಲ್ಡ್ ಪ್ಯಾಲೇಸ್, ಡಿಎಸ್ ಮ್ಯಾಕ್ಸ್. ಈ ಕಾರ್ಯಕ್ರಮದ ಮಾಧ್ಯಮ ಪಾಲುದಾರರು, ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡ, ಜನಶ್ರೀ ಕನ್ನಡ ವಾಹಿನಿ, ರೇಡಿಯೋ ಮಿರ್ಚಿ 98.3, ವಿಜಯವಾಣಿ. (ಒನ್ಇಂಡಿಯಾ ಕನ್ನಡ)


Click it and Unblock the Notifications












