'ಕೆಜಿಎಫ್ 2' ಮೆಗಾ ಹಿಟ್‌ ಆದ್ಮೇಲೆ ಯಶ್ ಮತ್ತೊಂದು ಸಿನಿಮಾ ರಿಲೀಸ್ ಆಗುವುದಕ್ಕೆ ನಾಲ್ಕು ವರ್ಷ ಹಿಡಿದಿದೆ. ಕೊನೆಗೂ ಈ ಬಾರಿ 'ಟಾಕ್ಸಿಕ್' ರಿಲೀಸ್ ಆಗೋದು ಕನ್ಫರ್ಮ್. ಹೀಗಾಗಿ ಯಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ 'ರಾಮಾಯಣ' ಸಿನಿಮಾದಲ್ಲೂ ರಾಕಿಂಗ್ ಸ್ಟಾರ್ ಬ್ಯುಸಿಯಾಗಿರೋದು ಇನ್ನೊಂದು ವಿಷಯ. ಈ ಮಧ್ಯೆ ಅಭಿಮಾನಿಗಳಿಗೆ ಮತ್ತೊಂದು ಆತಂಕ ಶುರುವಾಗಿದೆ.

Advertisement

ಹಂಗೂ-ಹಿಂಗೋ 'ಟಾಕ್ಸಿಕ್' ಏನೋ ರಿಲೀಸ್ ಆಗುತ್ತಿದೆ. ಮುಂದೆ ಯಾವ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ? ಇನ್ನೊಂದು ಸಿನಿಮಾ ಬರೋಕೆ ಎಷ್ಟು ದಿನ ಬೇಕು? ಅನ್ನೋ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮಧ್ಯೆ 'ಟಾಕ್ಸಿಕ್‌' ಬಳಿಕ ಯಶ್ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳಬಹುದು? ಅನ್ನೋ ಕುತೂಹಲ ಕೂಡ ಗರಿಗೆದರಿದೆ. ಸದ್ಯಕ್ಕೆ ಇಬ್ಬರು ನಿರ್ದೇಶಕರ ಹೆಸರುಗಳು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ.

Advertisement

ಕೆಲವು ದಿನಗಳ ಹಿಂದಷ್ಟೇ ಯಶ್‌ ಮುಂದಿನ ಸಿನಿಮಾಗೆ 'ಮಫ್ತಿ' ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಇದು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವಾಗಲೇ, ಕನ್ನಡದ ಇನ್ನೊಬ್ಬ ನಿರ್ದೇಶಕನ ಹೆಸರು ಕೇಳಿ ಬರುತ್ತಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳುತ್ತಾರೆಂದು ವರದಿಯಾಗಿವೆ. ಅಷ್ಟಕ್ಕೂ ಹೇಮಂತ್ ಎಂ ರಾವ್ ಹೆಸರು ಬಂದಿದ್ದೇಗೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಸುದ್ದಿ ಹಬ್ಬಿದ್ದು ಹೇಗೆ?

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದ ಟೀಸರ್ ರಿಲೀಸ್‌ ಇವೆಂಟ್‌ಗೂ ಸಜ್ಜಾಗಿತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಓಡಾಡುವುದಕ್ಕೆ ಶುರುವಾಗಿತ್ತು. ಯಶ್ ಮುಂದಿನ ಸಿನಿಮಾಗೆ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ಆಕ್ಷನ್ ಕಟ್ ಹೇಳಲಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಸುದ್ದಿಯ ಕಿಡಿ ಹತ್ತಿದ್ದು ಐಎಂಡಿಬಿ ಡೇಟಾಬೇಸ್ ವೆಬ್‌ಸೈಟ್. ಇದರಲ್ಲಿ ಸುದ್ದಿ ಪ್ರಕಟ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Advertisement

ಐಎಂಡಿಬಿ ವೆಬ್‌ಸೈಟ್‌ನಲ್ಲಿ ಏನಿದೆ?

ಐಎಂಡಿಬಿ ವೆಬ್‌ಸೈಟ್‌ನಲ್ಲಿ ಯಶ್ ಮುಂದಿನ ಸಿನಿಮಾಗೆ ಹೇಮಂತ್ ರಾವ್ ನಿರ್ದೇಶಿಸಲಿದ್ದಾರೆ. ಇದೊಂದು ಸೇನಾಧಿಕಾರಿಯ ಕಥೆಯಾಗಿದ್ದು, ವೈಯಕ್ತಿಕ ಕಾರಣಗಳಿಂದ ಸೇನೆಗೆ ಗುಡ್‌ಬೈ ಹೇಳಿ, ಪೊಲೀಸ್ ಇಲಾಖೆ ಸೇರಿಕೊಳ್ಳುತ್ತಾರೆ. ಯಾವುದೇ ಸವಾಲಿಗೂ ಹೆದರದೇ ನಿಲ್ಲುವ ಒಬ್ಬ ಪೊಲೀಸ್ ಅಧಿಕಾರಿಯಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಹೇಮಂತ್ ರಾವ್ ಜೊತೆ ಯಶ್ ಕೋ-ರೈಟರ್ ಆಗಿ ಕೆಲಸ ಮಾಡಲಿದ್ದಾರೆ ಎಂದೂ ಹೇಳಿದೆ. ಹೀಗಾಗಿ ಸಿನಿಮಾ ಮಂದಿಯಲ್ಲೂ ಕುತೂಹಲ ದುಪ್ಪಟ್ಟಾಗಿದೆ.

Advertisement

ನಿರ್ಮಾಣ ಸಂಸ್ಥೆ ಯಾವುದು?

ಐಎಂಡಿಬಿ ಹೇಳಿರುವಂತೆ ಯಶ್-ಹೇಮಂತ್ ಎಂ ರಾವ್ ಸಿನಿಮಾವನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ನಿರ್ಮಿಸಲಿದೆ. ಈ ಸಂಸ್ಥೆಯ ಮಾಲೀಕರಾದ ಕರಣ್ ಜೋಹರ್ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹೇಮಂತ್ ಎಂ ರಾವ್ ನಿರ್ದೇಶಿಸಿದ್ದ 'ಸಪ್ರ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಕರಣ್ ಜೋಹರ್ ಹಾಡಿ ಹೊಗಳಿದ್ದರು. ಈ ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ ಮನಸ್ಸಿನಲ್ಲಾದ ಭಾವನಾತ್ಮಕ ಪರಿಣಾಮಗಳ ಬಗ್ಗೆ ಮಾತಾಡಿದ್ದರು. ಅಲ್ಲದೇ ಸಿನಿಮಾ ನೋಡಿ ಹೊರ ಬಂದಾಗ ಹೃದಯವಾಯ್ತು ಎಂದಿದ್ದರು.

ಅಧಿಕೃತ ಮಾಹಿತಿ ಇಲ್ಲ

ಕಳೆದೆರಡು ದಿನಗಳಿಂದ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ, ಇದೂವರೆಗೂ ಯಶ್ ಆಗಲಿ, ಹೇಮಂತ್ ಎಂ ರಾವ್ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಹೇಮಂತ್ ರಾವ್ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಪ್ರೀ-ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎಎಂಡಿಬಿಯಲ್ಲಿ ಪ್ರಕಟವಾಗಿರುವ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಂತೂ ಹಲ್‌ಚಲ್ ಎಬ್ಬಿಸಿದೆ. ಆದರೆ, ನಿಜಕ್ಕೂ ಈ ಕಾಂಬಿನೇಷನ್‌ ಸಿನಿಮಾ ಆಗುತ್ತಾ? ಆ ಬಗ್ಗೆ ಯಾರೂ ಅಧಿಕೃತ ಮಾಹಿತಿ ನೀಡಿಲ್ಲ.