ಗೋಲ್ಡನ್ ಸ್ಟಾರ್ ಗಣೇಶ್ ಎರಡು ದಿನಗಳ ಹಿಂದಷ್ಟೇ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನ್ನು ರಿವೀಲ್ ಮಾಡಿದ್ದರು. ಗಣೇಶ್ ವೃತ್ತಿ ಬದುಕಿನಲ್ಲೇ ವಿಭಿನ್ನ ಸಿನಿಮಾ ಎನಿಸಿಕೊಂಡಿರೋ 'ಪಿನಾಕ' ಇನ್ನೊಂದು ಅವರ ಟ್ರೇಡ್ ಮಾರ್ಕ್ 'ಬೃಂದಾವಿಹಾರಿ'.

Advertisement

ಈ ಎರಡೂ ಸಿನಿಮಾಗಳೂ ಒಂದರ ಹಿಂದೊಂದು ರಿಲೀಸ್ ಆಗುತ್ತಿರೋ ಖುಷಿ ಒಂದೆಡೆಯಾದರೆ, ಇನ್ನೊಂದು ಕಡೆ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿರೋದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕೇವಲ 13 ದಿನಗಳ ಅಂತರದಲ್ಲಿ ಗಣೇಶ್ ಎರಡು ಸಿನಿಮಾಗಳನ್ನು ರಿಲೀಸ್ ಮಾಡುತ್ತಿರೋದು ಯಾಕೆ? 'ಪಿನಾಕ' ಮೇಲೆ ನಂಬಿಕೆ ಕಳೆದುಕೊಂಡರೇ? ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿತ್ತು.

Advertisement

ಇಂತಹದ್ದೊಂದು ಚರ್ಚೆ ನಡೆಯುವಾಗಲೇ ಮತ್ತೊಂದು ಚಾಲೆಂಜ್ ಎದುರಾಗಿದೆ. ಗಣೇಶ್ 'ಬೃಂದಾವಿಹಾರಿ' ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಇತ್ತ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಜೈಲರ್ 2' ಕೂಡ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. ಈಗ 'ಬೃಂದಾವಿಹಾರಿ' ಹಾಗೂ 'ಜೈಲರ್ 2' ಎರಡೂ ಒಟ್ಟಿಗೆ ರಿಲೀಸ್ ಆಗುತ್ತಾ? ಇಲ್ಲ ಗಣೇಶ್ ಸಿನಿಮಾ ಪೋಸ್ಟ್‌ಪೋನ್ ಆಗುತ್ತಾ? ಈ ಪ್ರಶ್ನೆಗೆ ಸ್ಯಾಂಡಲ್‌ವುಡ್‌ ಮಂದಿಯ ಬಾಯಲ್ಲಿ ಹರಿದಾಡುತ್ತಿರೋದು ಬೇರೆನೇ ಇದೆ.

ಪ್ರಣಯ ಸಖಿ ಯಶಸ್ಸಿನ ಗುಂಗಲ್ಲಿ 'ಬೃಂದಾವಿಹಾರಿ'

ಕಳೆದ ವರ್ಷ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಕೃಷ್ಣಂ ಪ್ರಣಯ ಸಖಿ' ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಇದೇ ಜೋಷ್‌ನಲ್ಲಿ ಮತ್ತೆ ಒಂದಾಗಿ ಇವರಿಬ್ಬರ 'ಬೃಂದಾವಿಹಾರಿ'ಗೆ ಕೈ ಹಾಕಿದ್ದರು. ಈಗಾಗಲೇ ಸಿನಿಮಾ ಹಾಡುಗಳು ರಿಲೀಸ್ ಆಗಿದ್ದು ಮತ್ತೊಮ್ಮೆ ಪ್ರೇಕ್ಷಕರ ಮನ ಗೆದ್ದಿದೆ. ಗಣೇಶ್ ಮತ್ತೊಂದು ರೊಮ್ಯಾಂಟಿಕ್ ಹೀರೋ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸಿನಿಮಾ ಮಂದಿಯ ಕಣ್ಣು ಈ ಸಿನಿಮಾ ಮೇಲಿದೆ.

Advertisement

ಅಕ್ಟೋಬರ್‌ನಲ್ಲೇ ರಿಲೀಸ್ ಯಾಕೆ?

ಮಳೆಗಾಲ ಮುಗಿಯೋ ಸಮಯ. ಹಾಗೇ ಶಾಲೆಗಳಿಗೂ ರಜೆ. ಬ್ಯಾಕ್ ಟು ಬ್ಯಾಕ್ ಹಬ್ಬಗಳು ಇವೆ. ಹಾಗಾಗಿ ಜನರು ಪ್ರೀಯಾಗಿ ಇರುತ್ತಾರೆ. ಈ ವೇಳೆ ಸಿನಿಮಾ ರಿಲೀಸ್ ಆದರೆ, ಕುಟುಂಬ ಸಮೇತ ಹೋಗಿ ನೋಡುತ್ತಾರೆ ಅನ್ನೋದು ಲೆಕ್ಕಾಚಾರ. ಅಕ್ಟೋಬರ್ 20ಕ್ಕೆ ನಾಡ ಹಬ್ಬ ದಸರಾ. ಇದಾದ 15 ದಿನಕ್ಕೆ ದೀಪಾವಳಿ ಹಬ್ಬ ಆರಂಭ ಆಗುತ್ತೆ. ಹೀಗಾಗಿ ಈ ಸಮಯದಲ್ಲಿ 'ಬೃಂದಾವಿಹಾರಿ' ರಿಲೀಸ್‌ ಆದರೆ, ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಗಳಿಕೆ ಆಗುತ್ತೆ ಅನ್ನೋದು ಲೆಕ್ಕಾಚಾರ.

ಲೆಕ್ಕಾಚಾರ ತಲೆಕೆಳಗೆ ಮಾಡಿದ 'ಜೈಲರ್ 2'

'ಬೃಂದಾವಿಹಾರಿ' ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ 'ಜೈಲರ್ 2' ಬಿಡುಗಡೆ ದಿನವನ್ನು ಘೋಷಣೆ ಮಾಡಲಾಗಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿರುವ ಈ ಬಹು ಕೋಟಿ ಸಿನಿಮಾಗೆ ಕರ್ನಾಟಕದಲ್ಲಿಯೂ ಬೇಡಿಕೆ ಇದೆ. ಹೀಗಾಗಿ ಸಾಕಷ್ಟು ಸ್ಕ್ರೀನ್‌ಗಳನ್ನು 'ಜೈಲರ್ 2' ಕಬಳಿಸೋದು ಗ್ಯಾರಂಟಿ. ಯಾಕಂದ್ರೆ, ಕಳೆದ ಬಾರಿ 'ಜೈಲರ್' ರಿಲೀಸ್ ಆದಾಗ ಕನ್ನಡದಲ್ಲಿ 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೀಗಾಗಿ ಇಲ್ಲಿನ ವಿತರಕರು ಅದೇ ಲೆಕ್ಕಾಚಾರದಲ್ಲಿ ಇದ್ದಾರೆ. ಈ ಕಾರಣಕ್ಕೆ 'ಜೈಲರ್‌ 2'ಗೆ ಅತೀ ಹೆಚ್ಚು ಸ್ಕ್ರೀನ್‌ಗಳು ಸಿಗಬಹುದು.

Advertisement

ಪೋಸ್ಟ್‌ಪೋನ್‌ ಆಗುತ್ತಾ? ಪೈಪೋಟಿ ಕೊಡುತ್ತಾ?

ಈಗ 'ಜೈಲರ್ 2' ಜೊತೆ ಸೆಣೆಸಾಡಬೇಕಾ? 'ಬೃಂದಾವಿಹಾರಿ' ರಿಲೀಸ್ ಅನ್ನು ಪೋಸ್ಟ್‌ಪೋನ್ ಮಾಡಬೇಕಾ? ಅನ್ನೋದು ಗಣೇಶ್ ಹಾಗೂ ಚಿತ್ರತಂಡದ ಮುಂದಿದೆ. ಸದ್ಯ ರಿಲೀಸ್ ಡೇಟ್ ಅಂತೂ ಅನೌನ್ಸ್ ಆಗಿದೆ. ಇದೇ ಡೇಟ್‌ ಅಲ್ಲೇ ಮುಂದುವರೆಯುತ್ತಾರಾ? ಇಲ್ಲಾ ಮುಂದಕ್ಕೆ ಹೋಗುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು. ಆದರೆ, ಸ್ಯಾಂಡಲ್‌ವುಡ್ ಮಂದಿ ಮಾತ್ರ ರಿಲೀಸ್ ಡೇಟ್‌ ಪೋಸ್ಟ್‌ಪೋನ್ ಆಗೋದು ಕನ್ಫರ್ಮ್‌ ಎಂದು ಹೇಳುತ್ತಿದ್ದಾರೆ.