2026 ಸಿನಿಮಾ ಮಂದಿಗೆ ಕರಾಳ ವರ್ಷ. ಅದರಲ್ಲೂ ಕನ್ನಡ ಚಿತ್ರರಂಗದ ಪರಿಸ್ಥಿತಿಯಂತೂ ಶೋಚನೀಯ. ಹಾಗಂತ ತೆಲುಗು, ತಮಿಳು ಚಿತ್ರರಂಗವೇನು ಇದರಿಂದ ಹೊರತಾಗಿ ಇಲ್ಲ. ಆದರೆ, ಕನ್ನಡ ಚಿತ್ರರಂಗದ ಪರಿಸ್ಥಿತಿ ಮಾತ್ರ ತೀರಾ ಕೆಟ್ಟದಾಗಿದೆ. ಇದಕ್ಕೆ ಕಾರಣ ಹುಡುಕಿ ಸಮಸ್ಯೆಯಿಂದ ಹೊರ ಬರುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳು ರಿಲೀಸ್ ಆಗುತ್ತವೆ. ಅವುಗಳ ಸಕ್ಸಸ್ ರೇಟ್ 2 ರಿಂದ 3 ಪರ್ಸೆಂಟ್ ಅಂದರೆ ಸಮಸ್ಯೆ ತೀವ್ರ ಎಷ್ಟಿರಬೇಕು?
ಹೌದು, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಭಾರತದ ಎಲ್ಲಾ ಚಿತ್ರರಂಗಗಳ ಸಕ್ಸಸ್ ರೇಟ್ ಕಮ್ಮಿಯಿದೆ. ವರ್ಷಕ್ಕೆ ನಿರ್ಮಾಣ ಆಗುವ ಸಿನಿಮಾಗಳ ಸಂಖ್ಯೆ 100 ರಿಂದ 200. ಇವುಗಳಲ್ಲಿ ಗೆಲ್ಲೋದು 2 ರಿಂದ 5 ಸಿನಿಮಾಗಳು ಮಾತ್ರ. ಹೀಗಾಗಿ ಈ ಸಕ್ಸಸ್ ರೇಟ್ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡುವ ಧೈರ್ಯ ಮಾಡುತ್ತಾರೆ. ಈ ಬಗ್ಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಗಂಭೀರವಾದ ಚರ್ಚೆ ಕೂಡ ಆಗಿದೆ.
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಹಿಟ್ ಲಿಸ್ಟ್ ಸೇರಿದ್ದು ಒಂದೇ ಸಿನಿಮಾ. ಅದುವೇ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ಸಿನಿಮಾ 'ಲವ್ ಮಾಕ್ಟೇಲ್ 3'. ಇದೂವರೆಗೂ ಕನ್ನಡ ಚಿತ್ರರಂಗದಲ್ಲಿ ಗೆಲುವು ಕಂಡಿದ್ದು ಒಂದೇ ಒಂದು ಸಿನಿಮಾ. ಇದಕ್ಕೆ ಇತ್ತೀಚೆಗೆ ಕನ್ನಡದ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಾರಣಗಳನ್ನು ಬಿಚ್ಚಿದ್ದರು. ಅದೇನು ಅಂತ ನೋಡುವುದಾರೇ, ಸಿನಿಮಾಗಳು ಸೋಲುತ್ತಿರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗ ಇಂತಹದ್ದೊಂದು ಪರಾಮರ್ಶೆ ಮಾಡಿಕೊಳ್ಳಲೇಬೇಕಿದೆ. ಚಿತ್ರಮಂದಿರಕ್ಕೆ ಜನರನ್ನು ಕರೆದುಕೊಂಡು ಬರುವುದಕ್ಕೆ ಸೋಲುತ್ತಿರೋದು ಯಾಕೆ? ಹೊಸಬರ ಸಿನಿಮಾಗಳು ಥಿಯೇಟರ್‌ನಲ್ಲಿ ಒಂದು ವಾರವೂ ಕಚ್ಚಿಕೊಳ್ಳುತ್ತಿಲ್ಲ ಯಾಕೆ? ಇಂತಹ ಸಾವಿರಾರು ಪ್ರಶ್ನೆಗಳು ಇವೆ. ಅದಕ್ಕೆ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇತ್ತೀಚೆಗೆ ನಡೆದ 'ಸೈನಿಕ 2' ಸಿನಿಮಾದ ಮುಹೂರ್ತದ ವೇಳೆ ರಿವೀಲ್ ಮಾಡಿದ್ದರು. "ಇವತ್ತು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ. ಎರಡು-ಮೂರು ವರ್ಷ ಆಗುತ್ತೆ. ನಾನು ಒಂದು ಕಥೆ ಏಳು ವರ್ಷದಿಂದ ಮಾಡುತ್ತಿದ್ದೇನೆ. ಇಂದೂ ಕೂಡ ಸರಿಯಾಗಿ ರೆಡಿಯಾಗಿಲ್ಲ. ಒಂದೆರಡು ತಿಂಗಳಲ್ಲಿ ಅನೌನ್ಸ್ ಮಾಡುತ್ತೇನೆ. ಅದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾನೇ? ನಿಮಗೆ ಗೊತ್ತು ಸಕ್ಸಸ್ ರೇಟ್ 2 ರಿಂದ 3 ಪರ್ಸೆಂಟ್ ಇದೆ. ಆದಷ್ಟು ಬೇಗ ಎಲ್ಲಾ ಸರಿ ಹೋಗುತ್ತೆ." -ನಟ, ನಿರ್ಮಾಪಕ, ರಾಕ್‌ಲೈನ್ ವೆಂಕಟೇಶ್. ಸಿನಿಮಾ ನಿರ್ಮಾಣ ಅನ್ನೋದು ಅಷ್ಟು ಸುಲಭ ಅಲ್ಲ. ನೂರಾರು ಕೋಟಿ ಸುರಿದು ಸಿನಿಮಾ ಮಾಡಿದರೆ ಮಾತ್ರ ಗೆಲ್ಲೋದು ಅನ್ನೋ ಮನಸ್ಥಿತಿಯಿದೆ. ಅದು ಮೊದಲ ಹೋಗಬೇಕು. ಜನರು ಪ್ಯಾನ್ ಇಂಡಿಯಾ ಸಿನಿಮಾ ಬಿಟ್ಟು ಬೇರೆ ಸಿನಿಮಾಗಳನ್ನು ನೋಡುತ್ತಿಲ್ಲ ಅನ್ನೋದು ನಿರ್ಮಾಪಕರ ವಾದ. ಇನ್ನು ಬ್ಯುಸಿನೆಸ್ ಅಂತ ಬಂದಾಗಲೂ ಪ್ಯಾನ್ ಇಂಡಿಯಾ ಸಿನಿಮಾ ಆದರೆ ಮಾತ್ರ ಬ್ಯುಸಿನೆಸ್ ಆಗುತ್ತೆ. ಇಲ್ಲದೇ ಸ್ಯಾಟಲೈಟ್, ಓಟಿಟಿ ಬ್ಯುಸಿನೆಸ್ ಆಗುವುದಿಲ್ಲ ಅನ್ನೋದು ನಿರ್ಮಾಪಕರ ಆರೋಪ. "ಇವತ್ತು ಕಾಲ ಬದಲಾಗಿದೆ. ಇವತ್ತು ವ್ಯಾಪಾರಕ್ಕೆ ಹೋದರೆ, ಪ್ಯಾನ್ ಇಂಡಿಯಾ ಸಿನಿಮಾನಾ? ಇಲ್ಲಾ ರಿಜನಲ್ ಸಿನಿಮಾನಾ ಅಂತಾರೆ. ಅಲ್ಲಿ ಆ ಸಿನಿಮಾದ ಯೋಗ್ಯತೆ ಏನು ಅಂತ ಚರ್ಚೆ ಮಾಡುತ್ತಾರೆ. ಹೀಗಾಗಿ ಇವತ್ತು ಸಿನಿಮಾ ಮಾಡುವಾಗ ಪ್ಯಾನ್ ಇಂಡಿಯಾನೇ ಮಾಡಬೇಕು. ಇವತ್ತು ಶಿವಣ್ಣ ತೆಲುಗು, ತಮಿಳು ಮಾಡ್ತಿದ್ದಾರೆ. ಉಪೇಂದ್ರ ಮಾಡುತ್ತಿದ್ದಾರೆ. ಅಲ್ಲಿನವರು ಇಲ್ಲಿಗೆ ಬರುತ್ತಿದ್ದಾರೆ." -ನಟ, ನಿರ್ಮಾಪಕ, ರಾಕ್‌ಲೈನ್ ವೆಂಕಟೇಶ್. ರಾಕ್‌ಲೈನ್ ವೆಂಕಟೇಶ್ ಪ್ರಕಾರ ಸಿನಿಮಾವನ್ನು ಓಟಿಟಿ ವೇದಿಕೆಗಳು ಡಾಮಿನೇಟ್ ಮಾಡುತ್ತಿವೆ. "ನಮ್ಮ ಚಿತ್ರರಂಗದಲ್ಲಿ ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕರು ಇದ್ದೀವಿ. ಏನಕ್ಕೆ ಸಿನಿಮಾ ಮಾಡುತ್ತಿಲ್ಲ ಅಂದರೆ, ಇವತ್ತು ಓಟಿಟಿ ಡಾಮಿನೇಟ್ ಮಾಡುತ್ತೆ. ಎರಡನೇಯದ್ದು ಬಾಕ್ಸಾಫೀಸ್. ನಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಥಿಯೇಟರ್‌ಗಳನ್ನು ಪಡೆಯುವುದಕ್ಕೆ 50-100 ಸಿನಿಮಾ ಮಾಡಿರುವವರೇ ಒದ್ದಾಡುತ್ತಿದ್ದೇವೆ. ಇಂತಹ ಚಾಲೆಂಜ್‌ಗಳ ಮಧ್ಯೆ ಕನ್ನಡ ಸಿನಿಮಾ ಮಾಡುತ್ತಿರುವ ನಿರ್ಮಾಪಕರಿಗೆ ಧನ್ಯವಾದಗಳನ್ನು ಹೇಳಲೇಬೇಕು" ಎನ್ನುತ್ತಾರೆ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್.ಸಿನಿಮಾಗಳು ಸೋಲುತ್ತಿರೋದ್ಯಾಕೆ?
ಎಲ್ಲಿ ಎಡವಟ್ಟಾಗುತ್ತಿದೆ?
ಓಟಿಟಿ ಡಾಮಿನೇಟ್ ಮಾಡುತ್ತಿದೆಯೇ?
More Articles