ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಯಾಗಿ ಒಂದು ದಿನ ಆಗಿದೆಯಷ್ಟೇ, ಅಷ್ಟರಲ್ಲೇ ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿರುವ ಲಹರಿ ಸಂಸ್ಥೆ ಕಾನೂನು ಸಂಕಷ್ಟಕ್ಕೆ ಸಿಕ್ಕಿಕೊಂಡಿದೆ. ಸಿನಿಮಾದ ಮೂಲ ನಿರ್ಮಾಪಕರ ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದಾರೆ.
ಲಹರಿ ಸಂಸ್ಥೆ ಕಾನೂನು ಬದ್ಧವಾಗಿ ಸಿನಿಮಾವನ್ನು ನಿರ್ಮಾಣ, ಆಡಿಯೋ ಹಕ್ಕುಗಳ ಖರೀದಿಯನ್ನು ಮಾಡುತ್ತೆ. ಒಂದು ವೇಳೆ ತಾನು ಖರೀದಿಸಿದ ಹಾಡುಗಳನ್ನು ಬೇರೆ ಯಾವುದೇ ಸಂಸ್ಥೆ ನಿರ್ಮಾಣ ಸಂಸ್ಥೆಗಳು ಬಳಸಿಕೊಂಡರೂ ಕಾನೂನು ಹೋರಾಟ ಮಾಡಿ ಗೆದ್ದಿತ್ತು. ಇಷ್ಟು ಕಟ್ಟು ನಿಟ್ಟಾಗಿರುವ ಸಂಸ್ಥೆಗೆ ಈಗ ಕಾನೂನಿ ಸಮಸ್ಯೆ ಎದುರಾಗಿದೆ.
ಸಿನಿ ಬಜ್ ವರದಿಯ ಪ್ರಕಾರ, ಸಿನಿಮಾದ ಮೂಲ ನಿರ್ಮಾಪಕರಾದ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರ ಮಕ್ಕಳು ತಮ್ಮ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದ್ದಾರೆಂದು ವರದಿ ಮಾಡಲಾಗಿದೆ. ಅಷ್ಟಕ್ಕೂ ಏನಿದು ವಿವಾದ? ವರದಿಯಲ್ಲಿ ಅಂತಹದ್ದೇನಿದೆ? ತಿಳಿಯುವುದಕ್ಕೆ ಮುಂದೆ ಓದಿ. 'ಗ್ರಾಮಾಯಣ' ಸಿನಿಮಾವನ್ನು ಮೊದಲು ಆರಂಭಿಸಿದ್ದು ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ. ಆದರೆ, ಸಿನಿಮಾ ಆರಂಭ ಆಗುತ್ತಿದ್ದಂತೆ ನಿರ್ಮಾಪಕ ಹಾಗೂ ನಿರ್ದೇಶಕ ದೇವನೂರು ಚಂದ್ರು ನಡುವೆ ವೈಮನಸ್ಸು ಉಂಟಾಗಿತ್ತು. ಈ ಬೆನ್ನಲ್ಲೇ ಸಿನಿಮಾ ಸ್ಥಗಿತಗೊಂಡಿತ್ತು. ಆದರೆ, ದುರಾದೃಷ್ಟವಶಾತ್ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡ ಕೆಲವೇ ದಿನಗಳಲ್ಲಿ ನಿರ್ಮಾಪಕ ಮೂರ್ತಿ ತೀರಿಕೊಂಡರು. ಆ ಬಳಿಕ ಈ ಸಿನಿಮಾದ ಸರ್ವ ಹಕ್ಕುಗಳನ್ನು ದೇವನೂರು ಚಂದ್ರು ಅವರಿಗೆ ಪತ್ನಿ ಲತಾ ಶ್ರೀ ಮೂರ್ತಿ ಅವರು ಹಸ್ತಾಂತರ ಮಾಡಿದ್ದರು. ಬಳಿಕ ಈ ಸಿನಿಮಾವನ್ನು ಲಹರಿ ಸಂಸ್ಥೆ ಟೇಕ್ ಓವರ್ ಮಾಡಿತ್ತು. ಈಗ ದಿವಂಗತ ಮೂರ್ತಿಯವರ ಮಕ್ಕಳಾದ 18 ವರ್ಷದ ಎಲ್. ಮನೋಹರ್ ಕೃಷ್ಣ ಹಾಗೂ 10 ವರ್ಷದ ಕುಮಾರಿ ಎಲ್. ಸಂಸ್ಕೃತಿ ಇಬ್ಬರೂ ತನ್ನ ತಾಯಿ 'ಅಸೈನ್ಮೆಂಟ್ ಅಗ್ರಿಮೆಂಟ್' ರಹಸ್ಯ ಒಪ್ಪಂದ ಮೂಲಕ ಹಕ್ಕು ಮಾರಿದ್ದು, ತಮಗೆ ಸಿಗಬೇಕಾದ ಹಣದಿಂದ ವಂಚಿತರಾಗಿದ್ದಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿ ಬಜ್ ವರದಿಯಂತೆ 'ಗ್ರಾಮಾಯಣ'ದ ಮೂಲ ನಿರ್ಮಾಪಕ ಮೂರ್ತಿಯವರ ಪತ್ನಿ ಹಾಗೂ ಮಕ್ಕಳ ತಾಯಿ ಆಗಿ ಲತಾ ಶ್ರೀ ಮೂರ್ತಿ ತಮ್ಮ ಮಕ್ಕಳ ಅನುಮತಿಯನ್ನು ಪಡೆಯದೇ ಮಾರಾಟ ಮಾಡಿದ್ದಾರೆ. ಸಮಗ್ರ ಹಕ್ಕುಸ್ವಾಮ್ಯದ ಒಡೆತನದಲ್ಲಿ ಅವರ ಈ ಇಬ್ಬರು ಮಕ್ಕಳಿಗೆ 3ನೇ 2ರಷ್ಟು (2/3) ಸಿಂಹಪಾಲು ಸಿಗಬೇಕಾಗಿತ್ತು. ಕಾನೂನು ಬದ್ಧ ಅನುಮತಿ ಪಡೆಯದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾಗಿ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿರುವ ಬಗ್ಗೆ ವರದಿಯಾಗಿದೆ. ನಿರ್ದೇಶಕ ದೇವನೂರು ಚಂದ್ರು ಅವರಿಂದ ಹಕ್ಕುಗಳನ್ನು ಪಡೆದ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಸಿನಿಮಾದ ವ್ಯವಹಾರವನ್ನು ವಿಸ್ತರಿಸಿದ್ದರು. ಖ್ಯಾತ ನಿರ್ಮಾಣ ಸಂಸ್ಥೆ ವೀನಸ್ ವರ್ಲ್ಡ್‌ವೈಡ್ ಎಂಟರ್‌ಟೈನ್‌ಮೆಂಟ್ ಈ ಹಕ್ಕುಗಳ ಖರೀದಿಯಲ್ಲಿ ಭಾಗಿಯಾಗಿತ್ತು. ಸಿನಿಮಾ ಪ್ರದರ್ಶನ ಹಾಗೂ ಒಟಿಟಿ ಹಕ್ಕುಗಳಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡಿದ್ದು, ಮೂಲ ನಿರ್ಮಾಪಕರ ಮಕ್ಕಳ ಹಕ್ಕನ್ನು ಕಸಿದುಕೊಂಡಿದೆ ಎಂದು ಅರ್ಜಿದಾರರ ಆರೋಪ. ಹೀಗಾಗಿ ನ್ಯಾಯಾಲಯ ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತೆ? ಮಕ್ಕಳ ಪರವಾಗಿ ನಿಲ್ಲುತ್ತಾ? ನಿರ್ಮಾಣ ಸಂಸ್ಥೆಯ ಪರವಾಗಿ ನಿಲ್ಲುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. 'ಗ್ರಾಮಾಯಣ' ರಿಲೀಸ್ ಆಗಿ ಕೆಲವೇ ದಿನಗಳಾಗಿವೆ. ವೀಕೆಂಡ್‌ನಲ್ಲಿ ಸಿನಿಮಾಗೆ ಪ್ರೇಕ್ಷಕರು ಥಿಯೇಟರ್ ಕಡೆಗೆ ಬರುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಮಧ್ಯಂತರ ತಡೆಯಾಜ್ಞೆ ಅರ್ಜಿ ಸಲ್ಲಿಸಿರುವುದು ಸದ್ಯಕ್ಕೆ ವಿತರಕರು ಮತ್ತು ಪ್ರದರ್ಶಕರ ನಿದ್ದೆ ಕೆಡಿಸಿದೆ. ಒಂದು ವೇಳೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದೇ ಆದಲ್ಲಿ, ತಕ್ಷಣ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕಾಗುತ್ತೆ. ಸದ್ಯಕ್ಕೆ ನಿರ್ಮಾಪಕರು ಹಾಗೂ ಪ್ರದರ್ಶಕರು ಈ ಆತಂಕದಲ್ಲಿ ಇದ್ದಾರೆಂದು ವರದಿಯಾಗಿದೆ.ಏನಿದು ವಿವಾದ?
ತಾಯಿ-ನಿರ್ದೇಶಕರ ರಹಸ್ಯ ಒಪ್ಪಂದ
ಮುಂದೇನಾಗುತ್ತೆ?
ಪ್ರದರ್ಶನ ಸ್ಥಗಿತಗೊಳ್ಳುವ ಭೀತಿ
More Articles