2026 ಜುಲೈ ತಿಂಗಳ ಬಹು ನಿರೀಕ್ಷೆಯನ್ನು ಹುಟ್ಟಿಸಿದ್ದ 'ಗ್ರಾಮಾಯಣ' ಸಿನಿಮಾ ರಿಲೀಸ್ ಆಗಿದೆ. ಗೆಲುವಿನ ನಿರೀಕ್ಷೆಯನ್ನು ಎದುರು ನೋಡುತ್ತಿರುವ ಕನ್ನಡ ಚಿತ್ರರಂಗದ ಪಾಲಿಗೆ 'ರಾಮಾಯಣ' ಆಗಬಹುದೇ 'ಗ್ರಾಮಾಯಣ? ಲಹರಿ ಸಂಸ್ಥೆ ನಿರ್ಮಾಣ ಮಾಡಿರುವ ಈ ಸಿನಿಮಾ ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಭರವಸೆಯನ್ನು ಮೂಡಿಸಿತ್ತು.
ವಿನಯ್ ರಾಜ್‌ಕುಮಾರ್, ಮೇಘಾ ಶೆಟ್ಟಿ, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಜಹಾಂಗೀರ್, ಅಪರ್ಣ ವಸ್ತಾರೆ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿ ಇದೆ. ದೇವನೂರು ಚಂದ್ರು 'ಗ್ರಾಮಾಯಣ'ದ ನಿರ್ದೇಶಕರು. ಅಪ್ಪಟ ಗ್ರಾಮೀಣ ಶೈಲಿಯ ಸಿನಿಮಾ ಇದಾಗಿದ್ದು, 2000ದ ಆಸು-ಪಾಸಿನ ಗ್ರಾಮೀಣ ಕರ್ನಾಟಕದ ಕಥೆಯನ್ನು ತೆರೆಮೇಲೆ ತರಲಾಗಿದೆ. ಹಾಗಿದ್ದರೆ, 'ಗ್ರಾಮಾಯಣ'ದ ಕಥೆಯೇನು? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಈ ವಿಮರ್ಶೆ ಓದಿ.
ಒಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆ. ಸಿನಿಮಾದ ನಾಯಕ ಸೀನಾ (ವಿನಯ್ ರಾಜ್‌ಕುಮಾರ್) ತನ್ನ ಜೀವನದಲ್ಲಿ ಗುರಿಯೇ ಇಲ್ಲದೆ ಜೀವನ ನಡೆಸುತ್ತಿರುತ್ತಾನೆ. ತನ್ನ ಸ್ನೇಹಿತರೊಂದಿಗೆ ಸೇರಿ ಕೈಗೆ ಸಿಕ್ಕಿ ಕೆಲಸಗಳನ್ನು ಮಾಡುತ್ತಿರುತ್ತಾನೆ. ಆದರೆ, ತನ್ನ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನೋ ಗುರಿ ಅಂತೂ ಇದೆ. ಒಬ್ಬ ಸಾಧಾರಣ ಹಳ್ಳಿ ಹುಡುಗನ ಬದುಕಿನ ಕಥೆಯಷ್ಟೇ ಅಲ್ಲ, ಸೀನಾ ಹಾಗೂ ಆತನ ಪ್ರೇಯಸಿ ಕುಸುಮಾ (ಮೇಘಾ ಶೆಟ್ಟಿ) ಜೊತೆಗಿನ ಸುಂದರ ಲವ್ ಸ್ಟೋರಿನೂ ಇದೆ. ಇದರೊಂದಿಗೆ ಗ್ರಾಮೀಣ ಜನರ ಬದುಕು, ಅಲ್ಲಿನ ರಾಜಕೀಯ, ನೋವು-ನಲಿವುಗಳು ಇವೆ. ಅಗಲಿದ ಸ್ನೇಹಿತನ ತಂಗಿಯ ಮದುವೆ ಮಾಡುವುದಕ್ಕೆ ಸೀನಾ ಹಾಗೂ ಆತನ ಗ್ಯಾಂಗ್ ಪಡುವ ಹರಸಾಹಸ ಹಳ್ಳಿಯ ಜನರ ಸ್ನೇಹ, ಮುಗ್ಧತೆಯನ್ನು ತೋರಿಸುತ್ತದೆ. ಅದೇ ಇನ್ನೊಂದು ಕಡೆ ಅದೇ ಮುಗ್ಧ ರೈತರನ್ನು ದುರುಪಯೋಗಪಡಿಸಿಕೊಳ್ಳುವ ರಾಜಕಾರಣಿಗಳನ್ನು ತೋರಿಸಲಾಗಿದೆ. ಇಲ್ಲಿನ ವ್ಯವಸ್ಥೆ, ಆ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡು ಒದ್ದಾಡುವ ರೈತರು, ಮಾಹಿತಿ ಹಕ್ಕು ಕಾಯ್ದೆಯ (RTI) ಮಹತ್ವದಂತಹ ಗಂಭೀರ ವಿಷಯಗಳನ್ನು ಸಿನಿಮಾದಲ್ಲಿ ನೋಡಬಹುದು. ಸಿನಿಮಾ ಮೊದಲಾರ್ಧ: 'ಗ್ರಾಮಾಯಣ'ದ ಪ್ಲಸ್ ಪಾಯಿಂಟ್ ಸಿನಿಮಾ ಫಸ್ಟ್ ಹಾಫ್. ಹಳ್ಳಿಯ ಸೊಗಡು, ಹಾಡು-ಪಾಡು, ಅವರ ಬದುಕು, ಜಾತ್ರೆ, ಹಬ್ಬ-ಹರಿದಿನಗಳನ್ನು ಉತ್ತಮವಾಗಿ ತೆರೆಮೇಲೆ ತರಲಾಗಿದೆ. ಹೀಗಾಗಿ ಸಿನಿಮಾ ಫಸ್ಟ್ ಹಾಫ್ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ವಿನಯ್ ರಾಜ್‌ಕುಮಾರ್ ಅಭಿನಯ: ವಿನಯ್ ರಾಜ್‌ಕುಮಾರ್ ಸಿನಿಮಾದಿಂದ ಸಿನಿಮಾಗೆ ನಟನೆಯಲ್ಲಿ ಪಕ್ವವಾಗುತ್ತಿದ್ದಾರೆ. ಈ ಹಿಂದೆ ಕೂಡ ರಗಡ್ ಪಾತ್ರದಲ್ಲಿ ನಟಿಸಿದ್ದರೂ, ರಗಡ್ ಹಳ್ಳಿ ಹುಡುಗನ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ತಮ್ಮ ಪವರ್‌ಫುಲ್ ನಟನೆಯಿಂದ ಗಮನ ಸೆಳೆಯುತ್ತಾರೆ. ಪ್ರೀತಿ, ಕೋಪ, ಹೊಡೆದಾಟದಂತಹ ಸನ್ನಿವೇಶಗಳಲ್ಲಿ ಇಷ್ಟ ಆಗುತ್ತಾರೆ. ಪೋಷಕ ಕಲಾವಿದರ ಸಾಥ್: ವಿನಯ್ ರಾಜ್‌ಕುಮಾರ್ ಜೊತೆ ಈ ಸಿನಿಮಾದಲ್ಲಿ ಗಮನ ಸೆಳೆಯುವುದು ಗೋಪಾಲಕೃಷ್ಣ ದೇಶಪಾಂಡೆ. ಇಲ್ಲಿ ಅವರು ಕುತಂತ್ರಿ ರಾಜಕಾರಣಿ ಪಾತ್ರದಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ಮತ್ತೊಂದು ಅದ್ಬುತ ಅಭಿನಯ ನೀಡಿದ್ದಾರೆ ಎನ್ನಬಹುದು. ಕ್ಯಾಮರಾ-ಸಂಗೀತ: 'ಗ್ರಾಮಾಯಣ' ಅಸಲಿ ಸೊಬಗು ಕಾಣಿಸೋದು ಸಂತೋಷ್ ರೈ ಪಾತಾಜೆ ಅವರ ಕ್ಯಾಮಾರದಲ್ಲಿ. ಅದಕ್ಕೆ ಸಾಥ್ ಕೊಟ್ಟಿರೋದು ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ. ಕ್ಯಾಮರಾ ಹಾಗೂ ಸಂಗೀತ ಎರಡೂ ಜಂಟಿಯಾಗಿ ಕೆಲಸ ಮಾಡಿದೆ ಎನ್ನಬಹುದು. ಸೆಕೆಂಡ್ ಹಾಫ್: 'ಗ್ರಾಮಾಯಣ'ದ ಅತೀ ದೊಡ್ಡ ಮೈನಸ್ ಪಾಯಿಂಟ್ ಸೆಕೆಂಡ್ ಹಾಫ್. ಗ್ರಾಮವೊಂದರ ಕಥೆಯನ್ನು ಸುಂದರವಾಗಿ ಹೇಳಿಕೊಂಡು ಹೋಗಿದ್ದ ನಿರ್ದೇಶಕರು ಸೆಕೆಂಡ್ ಹಾಫ್‌ನಲ್ಲಿ ಗಂಭೀರ ವಿಷಯಗಳ ಚರ್ಚೆಗೆ ಮುಂದಾಗುತ್ತಾರೆ. ಇದು ಪ್ರೇಕ್ಷಕರ ಆಸಕ್ತಿ ಕ್ಷೀಣಿಸುವಂತೆ ಮಾಡುತ್ತೆ. ಗ್ರಾಮದ ರಾಜಕೀಯ ಸಂಘರ್ಷ, ಮಾಹಿತಿ ಹಕ್ಕು ಕಾಯ್ದೆ ಇವೆಲ್ಲವೂ ಕಥೆಯಲ್ಲಿ ಇಲ್ಲದೇ ಇದ್ದಿದ್ದರೆ ಚೆನ್ನಾಗಿತ್ತು ಅನಿಸುತ್ತೆ. ಪಾತ್ರಗಳ ಬಳಕೆಯಲ್ಲಿ ವಿಫಲ: ಕೆಲವು ಮುಖ್ಯ ಪಾತ್ರಗಳಿಗೆ ಸರಿಯಾದ ಹಿನ್ನೆಲೆ ಸೃಷ್ಟಿಸಿಲ್ಲ. ಕರಿ ಬೆಕ್ಕು ಪಾತ್ರದಲ್ಲಿ ನಟಿಸಿರುವ ಲೂಸ್ ಮಾದ ಯೋಗಿ, ವೈದ್ಯನಾಗಿ ನಟಿಸಿರುವ ಅಚ್ಯುತ್ ಕುಮಾರ್ ಅಂತಹ ದಿಗ್ಗಜರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಕ್ಲೈಮ್ಯಾಕ್ಸ್: ಚಿತ್ರದ ಮುಖ್ಯ ದೃಶ್ಯಗಳು ಒಂದರ ಹಿಂದೆ ಒಂದರಂತೆ ಅತಿ ವೇಗವಾಗಿ ಬಂದು ಹೋಗುತ್ತವೆ. ಜನರು ಆ ದೃಶ್ಯಗಳೊಂದಿಗೆ ಕನೆಕ್ಟ್ ಆಗುವುದಕ್ಕೂ ಮೊದಲೇ ಅದು ಮುಗಿದು ಹೋಗುತ್ತೆ. ಕ್ಲೈಮ್ಯಾಕ್ಸ್ ಸರಿಯಾಗಿ ಆಗಿಲ್ಲ. 'ಗ್ರಾಮಾಯಣ' ಸಿನಿಮಾ ಒಂದು ಅದ್ಭುತವಾದ ಗ್ರಾಮೀಣ ಸಿನಿಮಾ ಆಗಬಹುದಿತ್ತು. ನಿರ್ದೇಶಕರು ಗ್ರಾಮೀಣ ಭಾಗದ ಕಥೆಯನ್ನು ಹೆಣೆಯುವಲ್ಲಿ ಗೊಂದಲಕ್ಕೆ ಒಳಗಾದಂತೆ ಕಾಣುತ್ತೆ. ಗ್ರಾಮದ ಸೊಡಗನ್ನು ಇಟ್ಟುಕೊಂಡು ಹಳ್ಳಿ ಹುಡುಗನ ಕಥೆ ಹೇಳುವುದಕ್ಕೆ ಹೋಗಿ, ಅಲ್ಲಿನ ರಾಜಕೀಯದ ಕಡೆಗೆ ವಾಲಿದ್ದು ಪ್ರೇಕ್ಷಕರಿಗೆ ನೀರಸೆ ಎನಿಸುತ್ತೆ. ಆದರೂ, ಗ್ರಾಮದ ಕಥೆ ಆಗಿದ್ದರಿಂದ ಕುಟುಂಬದ ಜೊತೆ ಒಮ್ಮೆ ನೋಡಿ ಬರಬಹುದು.'ಗ್ರಾಮಾಯಣ'ದ ಕಥೆಯೇನು?
'ಗ್ರಾಮಾಯಣ'ದ ಪ್ಲಸ್ ಪಾಯಿಂಟ್‌ಗಳು
'ಗ್ರಾಮಾಯಣ'ದ ಮೈನಸ್ ಪಾಯಿಂಟ್‌ಗಳು
ಕೊನೆಯಲ್ಲಿ
More Articles