ವಿಭಿನ್ನ ಪಾತ್ರಗಳ ಮೂಲಕ ಕಮಲ್ ಹಾಸನ್ ತೆರೆಮೇಲೆ ಮ್ಯಾಜಿಕ್ ಮಾಡುತ್ತಾ ಬರ್ತಿದ್ದಾರೆ. ಭಿನ್ನ ವಿಭಿನ್ನ ವೇಷಗಳಲ್ಲಿ ತರಹೇವಾರಿ ಪಾತ್ರಗಳನ್ನು ಒಂದೇ ಚಿತ್ರದಲ್ಲಿ ನಿಭಾಯಿಸಿ ನೋಡುಗರ ಹುಬ್ಬೇರಿಸುತ್ತಿದ್ದಾರೆ. ಇವತ್ತಿಗೂ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಕಮಲ್ ಉಳಿದುಬಿಟ್ಟಿದ್ದಾರೆ. ಒಂದೇ ಚಿತ್ರದಲ್ಲಿ 10 ಬೇರೆಬೇರೆ ಪಾತ್ರಗಳಲ್ಲಿ ಅವರು ನಟಿಸಿದ್ದರು. ಈ ದಾಖಲೆಯನ್ನು ಯೋಗಿ ಬಾಬು ಮುರಿಯುತ್ತಿದ್ದಾರೆ.

Advertisement

'ದಶಾವತಾರಂ' ಚಿತ್ರದಲ್ಲಿ ಕಮಲ್ 10 ಪಾತ್ರಗಳಲ್ಲಿ ಕಮಲ್ ಬಣ್ಣ ಹಚ್ಚಿದ್ದರು. ಯೋಗಿ ತಮ್ಮ ಮುಂದಿನ ಚಿತ್ರದಲ್ಲಿ 11 ಪಾತ್ರಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ತಾವೇ ಹೀರೊ ಹಾಗೂ ವಿಲನ್ ಆಗಿ ನಟಿಸುವುದರ ಜೊತೆಗೆ ಮತ್ತಷ್ಟು ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ನಿರ್ದೇಶಕ ಮೋಹನ್ ರಾಜಾ ಬಳಿಕ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಆರ್‌. ಕಿಶೋರ್ ಕುಮಾರ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

Advertisement

ಬೇರೆ ಬೇರೆ ಲುಕ್, ಗೆಟಪ್‌ಗಳಲ್ಲಿ ಯೋಗಿ ಬಾಬು 11 ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಹೆಸರಿಡದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರಲಿದೆ. ಅದಿತಿ ರವಿ, ರೆಡಿನ್ ಕಿಂಗ್ಸ್ಲಿ, ವಿಟಿವಿ ಗಣೇಶ್, ಪಂಜು ಸುಬ್ಬು ತಾರಾಗಣದಲ್ಲಿದ್ದಾರೆ. ಹಾಸ್ಯನಟನಾಗಿ ಯೋಗಿ ಬಾಬು ಚಿರಪರಿಚಿತ ಹೆಸರು. ತಮ್ಮ ದಢೂತಿ ದೇಹ, ಗುಂಗುರು ಕೂದಲು ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಹಾಸ್ಯ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. ರಜನಿಕಾಂತ್, ವಿಜಯ್, ಅಜಿತ್, ಸೂರ್ಯ ಹೀಗೆ ತಮಿಳಿನ ಸ್ಟಾರ್ ನಟರ ಜೊತೆಗೆಲ್ಲಾ ತೆರೆಹಂಚಿಕೊಂಡು ಯೋಗಿ ಬಾಬು ಸಕ್ಸಸ್ ಕಂಡಿದ್ದಾರೆ.

Advertisement

ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ಯೋಗಿ ಬಾಬು ಮಿಂಚಿದ್ದರು. ಈಗ ಸೀಕ್ವೆಲ್‌ನಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. 25 ವರ್ಷಗಳ ಹಿಂದೆ ಕಾರ್ತಿ ನಟನೆಯ 'ಪೈಯ' ಸಿನಿಮಾ ಮೂಲಕ ಅವರ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಗಮನ ಸೆಳೆದರು. ಕನ್ನಡದ 'ಅಭಿಮನ್ಯು' ಸೇರಿದಂತೆ ತಲಾ ಒಂದು ತಮಿಳು, ತೆಲುಗು, ಹಿಂದಿ ಸಿನಿಮಾದಲ್ಲಿ ಕೂಡ ಅವರು ಮಿಂಚಿದ್ದಾರೆ. 'ಧರ್ಮ ಪ್ರಭು,' 'ಗೂರ್ಖಾ,' 'ಮಂಡೇಲಾ,' 'ಯಾನೈ ಮುಗಥಾನ್' ರೀತಿಯ ಸಿನಿಮಾಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿ ಯೋಗಿ ಬಾಬು ಪ್ರೇಕ್ಷಕರ ಮನ ಗೆದ್ದಿದ್ದರು.

'ಗೂರ್ಖಾ' ಸಿನಿಮಾ ಮೂಲಕ ಯೋಗಿ ಬಾಬು ಹೀರೊ ಆಗಿದ್ದರು. ಇದೀಗ ಒಂದೇ ಚಿತ್ರದಲ್ಲಿ 11 ಪಾತ್ರಗಳಲ್ಲಿ ನಟಿಸುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಚಿತ್ರದಲ್ಲಿ ಅವಳಿ ಜವಳಿ ಪಾತ್ರಗಳು ಇವೆ. ಕಾಮಿಡಿಯನ್ ಆಗಿ ಕೂಡ ಯೋಗಿ ಬಾಬು ಕಾಣಿಸಿಕೊಳ್ಳಲಿದ್ದಾರೆ. ಮಿಲಿಟರಿ ಹೆಲಿಕ್ಯಾಪ್ಟರ್ ಅಪಘಾತಕ್ಕೀಡಾಗುತ್ತದೆ. ಅದರಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಹುಡುಕಾಟದ ಪ್ರಯತ್ನ ಶುರುವಾಗುತ್ತದೆ. ಈ ಹಾದಿಯಲ್ಲಿ ನಾಯಕನಿಗೆ ಎದುರಾಗುವ ಸಮಸ್ಯೆಗಳು, ಅದನ್ನು ಆತ ಹೇಗೆ ಬಹಿಹರಿಸಿಕೊಂಡು ಗೆಲ್ಲುತ್ತಾನೆ ಎನ್ನುವುದು ಸಿನಿಮಾ ಕಥೆ ಎನ್ನಲಾಗ್ತಿದೆ.

Advertisement

ಕಮಲ್ ಬಿಟ್ಟರೆ ಚಿಯಾನ್ ವಿಕ್ರಂ ಕೂಡ ಒಂದೇ ಚಿತ್ರದಲ್ಲಿ ನಾಲ್ಕೈದು ಪಾತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ಅದನ್ನೆಲ್ಲಾ ಮೀರಿ ಈಗ ಯೋಗಿ ಬಾಬು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳು ಕೂಡ ಈ ವಿಭಿನ್ನ ಸಿನಿಮಾ ನೋಡಲು ಕಾಯುತ್ತಿದ್ದಾರೆ.