ಜೀ ಕನ್ನಡ ವಾಹಿನಿ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ವಿಭಿನ್ನ ಅಭಿರುಚಿಯ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಕೌಟುಂಬಿಕ ಧಾರಾವಾಹಿಯ ಜೊತೆ ಜೊತೆಗೆ ಭಕ್ತಿ ಪ್ರಧಾನ ಧಾರಾವಾಹಿಯನ್ನು ಕೂಡ ನೀಡುತ್ತಿದೆ. ಕಳೆದ ಕೆಲವು ದಿನಗಳಿಂದ ಭಕ್ತಿ ಪ್ರಧಾನ ಧಾರಾವಾಹಿ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರೇಕ್ಷಕರ ಮನ ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

Advertisement

ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥರ ಪವಿತ್ರ ಜೀವನದ ಪಯಣ ಪ್ರತಿ ವೀಕೆಂಡ್‌ನಲ್ಲಿ ಪ್ರಸಾರವಾಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಭಕ್ತರು ಈ ಧಾರಾವಾಹಿಯನ್ನು ಕಣ್ತುಂಬಿಕೊಂಡು ಭಾವ ಪರವಶರಾಗುತ್ತಿದ್ದಾರೆ. ಈಗ ರಾಘವೇಂದ್ರ ರಾಯರ ಈ ಪಯಣದಲ್ಲಿ ಪ್ರಮುಖ ಘಟ್ಟವೊಂದನ್ನು ತೋರಿಸಲಾಗುತ್ತಿದೆ. ಅದಕ್ಕೆ ಕನ್ನಡದ ಹಿರಿಯ ನಟ ಬಿಸಿ ಪಾಟೀಲ್ ಆಗಮಿಸಿದ್ದಾರೆ.

Advertisement

ಇನ್ನೂ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ಪಾತ್ರದಲ್ಲಿ ನಟ ಪರೀಕ್ಷಿತ್ ನಟಿಸುತ್ತಿದ್ದಾರೆ. ಅವರ ಜೀವಂತ ನಟನೆಗೆ ಮನೆಮನೆಯಿಂದಲೂ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಕ್ತರು ಕಿರುತೆರೆಯಲ್ಲಿ ರಾಯರನ್ನೇ ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ವಾರ ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ರಾಯರು ಸದ್ಗತಿ ನೀಡಿದ ಭಾವುಕ ಸಂಚಿಕೆ ಪ್ರೇಕ್ಷಕರನ್ನು ಭಕ್ತಿ ಸಾಗರದಲ್ಲಿ ಮುಳುಗಿ ಏಳಿಸಿತ್ತು.

ಕರಟಗಿರಿಯ ದೇಸಾಯಿ ಮನೆಗೆ ರಾಯರ ಆಗಮನ

ದೀಕ್ಷೆ ಪಡೆದ ನಂತರ ಮೂಲರಾಮನ ಆಜ್ಞೆಯಂತೆ ದಿವ್ಯ ಸಂಚಾರಕ್ಕೆ ರಾಯರು ಹೊರಟಿದ್ದಾರೆ. ಭುವನಗಿರಿಯ ಪಾದಪೂಜೆ ಮುಗಿಸಿ ಕರಟಗಿರಿಯತ್ತ ಸಾಗುತ್ತಾರೆ. ಅಲ್ಲಿ ರಾಯರ ದರ್ಶನ ಪಡೆದು ತಮ್ಮ ಮನೆಗೆ ಪೂಜೆಗೆ ಆಗಮಿಸುವಂತೆ ಭಕ್ತಿಪೂರ್ವಕವಾಗಿ ಕರಟಗಿರಿಯ ದೇಸಾಯಿಯವರು ಆಹ್ವಾನಿಸುತ್ತಾರೆ. ರಾಯರ ಸ್ವಾಗತಕ್ಕಾಗಿ ದೇಸಾಯಿ ಅವರ ಮನೆಯಲ್ಲಿ ಸಕಲ ಸಿದ್ಧತೆ ನಡೆದು, ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಅಡುಗೆ ಮನೆಯಲ್ಲಿ ತಯಾರಾಗಿದ್ದ ಮಾವಿನಕಾಯಿ ಸೀಕರಣೆಯ ರುಚಿ ನೋಡಲು ಹೋದ ದೇಸಾಯಿಯವರ ಪುಟ್ಟ ಮಗ ಆಕಸ್ಮಿಕವಾಗಿ ಅದರೊಳಗೆ ಬಿದ್ದು ಪ್ರಾಣ ಬಿಡುತ್ತಾನೆ. ಇಲ್ಲಿ ರಾಘವೇಂದ್ರ ಸ್ವಾಮಿಗಳ ಪವಾಡ ನಡೆಯುತ್ತೆ.

Advertisement

ಸತ್ತ ಮಗು ಜೀವ ನೀಡಿದ ರಾಯರು

ಈ ವೇಳೆ ರಾಘವೇಂದ್ರ ಸ್ವಾಮಿಗಳು ಪೂಜೆಯಲ್ಲಿ ನಿರತರಾಗಿರುತ್ತಾರೆ. ಕೂಡಲೇ ಅವರಿಗೆ ಈ ದುರಂತದ ಅರಿವಾಗುತ್ತೆ. ತಕ್ಷಣವೇ ಮಗುವನ್ನು ಪೂಜಾ ಸ್ಥಳಕ್ಕೆ ಕರೆ ತರುವಂತೆ ಮಾಡುತ್ತಾರೆ. ತಮ್ಮ ತಪೋಶಕ್ತಿಯ ಮಂತ್ರದ ಮೂಲಕ ಸತ್ತ ಮಗುವನ್ನು ಮತ್ತೆ ಬದುಕಿಸುತ್ತಾರೆ. ರಾಘವೇಂದ್ರ ರಾಯರು ಮಾಡುವ ಈ ದಿವ್ಯ ಪವಾಡ ಕಂಡು ಅಲ್ಲಿದ್ದವರೆಲ್ಲ ಮಂತ್ರಮುಗ್ಧರಾಗುತ್ತಾರೆ.

ಕಿರುತೆರೆಗೆ ಬಿ.ಸಿ.ಪಾಟೀಲ್ ಎಂಟ್ರಿ

ಈ ರೋಮಾಂಚನಕಾರಿ ಸಂಚಿಕೆಯಲ್ಲಿ ಮತ್ತೊಂದು ವಿಶೇಷವೆಂದರೆ ಕರಟಗಿರಿಯ ದೇಸಾಯಿ ಪಾತ್ರದ ಮೂಲಕ ಹಿರಿಯ ನಟ ಬಿ.ಸಿ.ಪಾಟೀಲ್ ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಟಿವಿಗೂ ಎಂಟ್ರಿ ಕೊಟ್ಟಂತೆ ಆಗಿದೆ. ಬಿಸಿ ಪಾಟೀಲ್‌ಗೆ ಜೋಡಿಯಾಗಿ ಹಿರಿಯ ನಟಿ ಅರುಣಾ ಬಾಲರಾಜ್ ದೇಸಾಯಿ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯ ಈ ಭಕ್ತಿ ಹಾಗೂ ದೈವಿಕ ಪವಾಡಗಳ ಮಹಾಸಂಗಮದ ವಿಶೇಷ ಸಂಚಿಕೆಗಳು ಇದೇ ವೀಕೆಂಡ್‌ ಅಂದರೆ, ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.