ಒಂದ್ಕಡೆ ಸೂರ್ಯ, ಇನ್ನೊಂದ್ಕಡೆ ಆಮಿರ್ ಖಾನ್; ಒಟ್ಟೊಟ್ಟಿಗೆ 'ಘಜಿನಿ 2' ಶುರು!
ಹಿಂದಿ ಹಾಗೂ ತಮಿಳು ಎರಡು ಭಾಷೆಯಲ್ಲಿ ಸದ್ದು ಮಾಡಿದ್ದ ಸಿನಿಮಾ 'ಘಜಿನಿ'. ಎ ಆರ್ ಮುರುಗದಾಸ್ ಮೊದಲು ತಮಿಳಿನಲ್ಲಿ 'ಘಜಿನಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸೂರ್ಯ, ಆಸಿನ್ ಹಾಗೂ ನಯನತಾರಾ ಕಾಂಬಿನೇಷನ್‌ನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು.
2005ರಲ್ಲಿ ತಮಿಳಿನಲ್ಲಿ 'ಘಜನಿ' ರಿಲೀಸ್ ಆಗಿತ್ತು. ಕೇವಲ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ ತಮಿಳಿನ 'ಘಜಿನಿ' ಕೂಡ ಇತ್ತು. ಇದೇ ಜೋಷ್‌ನಲ್ಲಿ ಹಿಂದಿಯಲ್ಲೂ ನಿರ್ಮಾಣ ಮಾಡಿದ್ದರು.

'ಘಜಿನಿ' ಸಿನಿಮಾವನ್ನು 2008ರಲ್ಲಿ ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. 'ಘಜಿನಿ'ಯ ಹಿಂದಿ ರಿಮೇಕ್‌ನಲ್ಲಿ ಆಮಿರ್ ಖಾನ್ ನಟಿಸಿದ್ದರು. ಹಿಂದಿ ಅವತರಣಿಕೆಯನ್ನೂ ತಮಿಳಿನ ಎ ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದರು. ಈಗ ಮತ್ತೆ 'ಘಜಿನಿ'ಯ ಎರಡನೇ ಅವತರಣಿಕೆಯನ್ನು ನಿರ್ಮಾಣ ಮಾಡುವ ವಿಷಯ ಬಾಲಿವುಡ್‌ನಲ್ಲಿ ಓಡಾಡುತ್ತಿದೆ. ವಿಶೇಷ ಅಂದ್ರೆ, ಸೂರ್ಯ-ಆಮೀರ್ ಖಾನ್ ಒಟ್ಟೊಟ್ಟಿಗೆ 'ಘಜಿನಿ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಲೀಂ ಚಂದ್ರಶೇಖರ್ ನಿರ್ಮಿಸಿದ್ದ 'ಘಜಿನಿ' ಸಿನಿಮಾವನ್ನು ಬಾಲಿವುಡ್‌ನಲ್ಲಿ ಅಲ್ಲು ಅರವಿಂದ್ ನಿರ್ಮಿಸಿದ್ದರು. ಆ ಸಿನಿಮಾ 2008ರಲ್ಲೇ ಬಾಲಿವುಡ್‌ನಲ್ಲಿ ಸುಮಾರು 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೀಗಾಗಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರೇ 'ಘಜನಿ 2' ಸಿನಿಮಾವನ್ನು ನಿರ್ಮಾಣ ಮಾಡುವುಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ನಟ ಸೂರ್ಯ ಬಳಿಕ ಚರ್ಚೆ ಕೂಡ ಮಾಡಿದ್ದಾರೆ.

ಈ ವಿಷಯವನ್ನು ಸ್ವತ: ಸೂರ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸೂರ್ಯ ಹಾಗೂ ನಿರ್ಮಾಪಕ ಅಲ್ಲು ಅರವಿಂದ್ ಅವರೊಂದಿಗೆ 'ಘಜನಿ 2' ಬಗ್ಗೆ ಮಾತುಕತೆ ನಡೆದಿದೆ. ಈ ವಿಷಯವನ್ನು ಪಿಂಕ್ ವಿಲ್ಲಾ ಜೊತೆ ಸೂರ್ಯ ಹಂಚಿಕೊಂಡಿದ್ದಾರೆ. 'ಘಜನಿ 2' ಸಿನಿಮಾದಲ್ಲಿ ನಟಿಸುವುದಕ್ಕೆ ಸಾಧ್ಯವಿದೆಯಾ? ಎಂದು ನಿರ್ಮಾಪಕ ಅಲ್ಲು ಅರವಿಂದ್ ಕೇಳಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನು ತಮಿಳು ಹಾಗೂ ಹಿಂದಿ ಎರಡೂ ಭಾಷೆಯಲ್ಲೂ 'ಘಜನಿ 2' ನಿರ್ಮಾಣ ಆಗುತ್ತಿದೆ. ಸೂರ್ಯ ಜೊತೆ ಚರ್ಚೆ ಮಾಡಿದಂತೆ ಆಮಿರ್ ಖಾನ್ ಜೊತೆನೂ 'ಘಜನಿ 2' ಬಗ್ಗೆ ಚರ್ಚೆ ಮಾಡಲಾಗಿದೆ. ನಿರ್ಮಾಪಕ ಅಲ್ಲು ಅರವಿಂದ್ ಜೊತೆ ಮಧು ಮಂಟೇನಾ ಕೈ ಜೋಡಿಸಲಿದ್ದು, ಅದ್ಧೂರಿಯಾಗಿ ಬಿಗ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವಿಶೇಷ ಅಂದರೆ, ಎರಡೂ ಭಾಷೆಯಲ್ಲೂ ಒಟ್ಟೊಟ್ಟಿಗೆ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಅಂದ್ಹಾಗೆ 'ಘಜನಿ' ಸಿನಿಮಾವನ್ನು ಎ ಆರ್ ಮುರುಗದಾಸ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕಥೆಯ ಒಂದು ಎಳೆ ಓಕೆ ಆಗಿದ್ದು, ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಒಮ್ಮೆ ಸ್ಟೋರಿ ರೆಡಿಯಾದ ಮೇಲೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಆಮಿರ್ ಖಾನ್ ಹಾಗೂ ಸೂರ್ಯ ಇಬ್ಬರ ಡೇಟ್ ಒಟ್ಟಿಗೆ ಸಿಗಬೇಕಿದೆ. ಹಾಗೇ ಕಥೆನೂ ಓಕೆ ಆಗಬೇಕಿದೆ. ಇದೆಲ್ಲಾ ಆದ ಬಳಿಕ 'ಘಜನಿ 2' ಸೆಟ್ಟೇರಲಿದೆ.


Click it and Unblock the Notifications











