ಯಶ್ ಆಯ್ತು ಆಮಿರ್ ಮೇಲೆ ಕಣ್ಣು: 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್ ದುರಂತ ಎಂದ ಕಮಾಲ್!
2022ರಲ್ಲಿ ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸೋಲಿನ ಸುಳಿಗೆ ಸಿಕ್ಕು ವಿಲವಿಲ ಅಂತ ಒದ್ದಾಡುತ್ತಿದ್ದ ಹಿಂದಿ ಚಿತ್ರರಂಗಕ್ಕೆ ದಕ್ಷಿಣ ಭಾರತದ ಸಿನಿಮಾಗಳೂ ಸೇರಿದಂತೆ ಬಾಲಿವುಡ್‌ನ ಕೆಲವೇ ಕೆಲವು ಚಿತ್ರಗಳು ಗೆಲುವಿನ ನಗೆ ಬೀರಿದೆ.
ಮೊದಲಾರ್ಧ ಮುಗಿದೇ ಹೋಯ್ತು. ಇನ್ನೇನಿದ್ದರೂ ಸೆಕೆಂಡ್ ಹಾಫ್‌ನಲ್ಲಿ ಆದಷ್ಟು ಹಣವನ್ನು ಬಾಕಿಕೊಳ್ಳಬೇಕು ತವಕದಲ್ಲಿ ಬಾಲಿವುಡ್ ಮಂದಿ ಇದ್ದಾರೆ. ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ದೊಡ್ಡ ದೊಡ್ಡ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬಾಲಿವುಡ್‌ನಲ್ಲಿ ಇನ್ನು ಆರು ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಅತೀ ದೊಡ್ಡ ಸಿನಿಮಾಗಳಲ್ಲಿ ಲಾಲ್ ಸಿಂಗ್ ಚಡ್ಡ ಕೂಡ ಇದೆ. ಹಲವು ದಿನಗಳಿಂದ 'ಲಾಲ್ ಸಿಂಗ್ ಚಡ್ಡ' ಶೂಟಿಂಗ್ ನಡೆಯುತ್ತಲೇ ಇದ್ದು, ಮುಂಬರುವ ಆಗಸ್ಟ್ ತಿಂಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರದಲ್ಲಿ ಆಮಿರ್ ಬ್ಯುಸಿಯಾಗಿದ್ದರೆ, ಇತ್ತ ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಅಪಸ್ವರ ನುಡಿದಿದ್ದಾರೆ.

ಆಮೀರ್ ಮೇಲೆ ಕೆಆರ್‌ಕೆ ಅಪಸ್ವರ
ಆಮೀರ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅದ್ಯಾವ ಮಟ್ಟಕ್ಕೆ ಸದ್ದು ಮಾಡುತ್ತೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 'ದಂಗಲ್', 'ಸೀಕ್ರೆಟ್ ಸೂಪರ್‌ಸ್ಟಾರ್', 'ಪಿಕೆ' ಅಂತಹ ಸಿನಿಮಾ ನೂರಾರು ಕೋಟಿ ಲೂಟಿ ಮಾಡಿದೆ. ಇದೇ ಕಾರಣಕ್ಕೆ ಆಮಿರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡ' ಎಲ್ಲರ ಕಣ್ಣು ನೆಟ್ಟಿದೆ. ಆದರೆ, ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ ಮಾತ್ರ ಆಮಿರ್ ಖಾನ್ ಸಿನಿಮಾ ಬಗ್ಗೆ ಅಪಸ್ವರ ನುಡಿದಿದ್ದಾರೆ.
'ಲಾಲ್ ಸಿಂಗ್ ಚಡ್ಡ' ವೃತ್ತಿ ಬದುಕಿನ ಅಂತ್ಯ
"ನನಗೆ ಪ್ರತಿದಿನ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳು ಸಿಗುತ್ತಿವೆ. ನನಗೆ ಆಮಿರ್ ಖಾನ್ ಸಿನಿಮಾವನ್ನು ಬಿಡುಗಡೆ ಮಾಡದೆ ಇದ್ದರೆ ಒಳ್ಳೆಯದು ಎಂದು ಅನಿಸುತ್ತೆ. ಇದು ಬಾಕ್ಸಾಫೀಸ್‌ನಲ್ಲಿ ದೊಡ್ಡ ದುರಂತ ಕಾಣುತ್ತೆ. ಆಮಿರ್ ಖಾನ್ ವೃತ್ತಿ ಬದುಕೇ ಅಂತ್ಯವಾಗುತ್ತೆ." ಎಂದು ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ. ಬಿಡುಗಡೆಗೂ ಮುನ್ನವೇ ಆಮಿರ್ ಖಾನ್ ಸಿನಿಮಾ ಭವಿಷ್ಯ ನುಡಿದಿದ್ದು ಹಲವರ ಕಣ್ಣು ಕೆಂಪಾಗಿಸಿದೆ.

ಯಶ್ 'ಕೆಜಿಎಫ್ 2' ಬಳಿಕ ಆಮಿರ್ ಸರದಿ
ಯಶ್ ಸಿನಿಮಾ 'ಕೆಜಿಎಫ್ 2' ಬಿಡುಗಡೆಯಾದಲೂ ಕಮಾಲ್ ಆರ್ ಖಾನ್ ಹೀಗೆ ಕಮೆಂಟ್ ಮಾಡಿದ್ದರು. 'ಕೆಜಿಎಫ್ 2' ಸಿನಿಮಾ ನೋಡಿ ಉಗಿದಿದ್ದರು. 'ಕೆಜಿಎಫ್ 2'ಗಿಂತ ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಸಿನಿಮಾ ಉತ್ತಮ ಎಂದೆಲ್ಲ ಕಮೆಂಟ್ ಮಾಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಆಮಿರ್ ಖಾನ್ ಸಿನಿಮಾ ಬಿಡುಗಡೆಗೂ ಮುನ್ನವೇ ಅಪಸ್ವರ ನುಡಿದಿದ್ದಾರೆ. ಬಹುತೇಕ ಆಮಿರ್ ಸಿನಿಮಾ ಭವಿಷ್ಯವೇ ಮುಗಿದು ಹೋಯ್ತು ಅನ್ನುವ ಹಾಗೆ ಮಾತಾಡಿದ್ದಾರೆ.

ಕಿಡಿಕಾರಿದ ಫ್ಯಾನ್ಸ್
ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ನಲ್ಲಿ ದುರಂತ ಅಂತ್ಯ ಕಾಣುತ್ತೆ ಎಂದಿದ್ದ ಕೆಆರ್‌ಕೆ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. "ದೋಶದ್ರೋಹಿ ಸಿನಿಮಾ ಸರ್ವಕಾಲಿಕ ದುರಂತ ಸಿನಿಮಾ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಸರ್ ಆಮಿರ್ ಖಾನ್ ಹೆಸರಿನಿಂದಲೇ ಸಿನಿಮಾ ಓಡುತ್ತೆ. ಥಿಯೇಟರ್‌ಗೆ ಬರುವ ಪ್ರೇಕ್ಷಕರು ಆಮಿರ್ ಖಾನ್ ಸಿನಿಮಾ ನೋಡಲು ಇಷ್ಟ ಪಡುತ್ತಾರೆ." ಎಂದು ಕಿಡಿಕಾರಿದ್ದಾರೆ.


Click it and Unblock the Notifications










