ಚಿತ್ರರಂಗಕ್ಕೆ ಆಘಾತ: ಸಾವಿನಲ್ಲಿ ಅಮ್ಮನನ್ನು ಹಿಂಬಾಲಿಸಿದ ಖ್ಯಾತ ನಟ ಇರ್ಫಾನ್ ಖಾನ್
ಬುಧವಾರ ಬೆಳಿಗ್ಗೆಯೇ ಭಾರತೀಯ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ. ತಮ್ಮ ಅಮೋಘ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ (53) ಇಹಲೋಕ ತ್ಯಜಿಸಿದ್ದಾರೆ. ಈ ಆಘಾತಕಾರಿ ಅಗಲುವಿಕೆ ಇಡೀ ಚಿತ್ರರಂಗವನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.
Recommended Video
ಅದ್ಭುತ ನಟರಾಗಿದ್ದ ಇರ್ಫಾನ್ ಖಾನ್ ತಮ್ಮ ವ್ಯಕ್ತಿತ್ವದಿಂದಲೂ ಚಿತ್ರರಂಗಕ್ಕೆ ಆತ್ಮೀಯರಾಗಿದ್ದರು. ವಿಭಿನ್ನ ಸಿನಿಮಾಗಳಲ್ಲಿನ ಅಮೋಘ ಅಭಿನಯದಿಂದ ಗಮನ ಸೆಳೆದಿದ್ದರು. ಕೆಲವು ದಿನಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರು ಸಾವಿನಲ್ಲಿಯೂ ತಾಯಿಯನ್ನು ಹಿಂಬಾಲಿಸಿದ್ದಾರೆ.
ದೊಡ್ಡ ಕರುಳಿನ ಸೋಂಕಿನಿಂದಾಗಿ ಇರ್ಫಾನ್ ಅವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಮುಂದೆ ಓದಿ...

ಅಪರೂಪದ ಕಾಯಿಲೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಸುಮಾರು ಎರಡು ವರ್ಷಗಳ ಹಿಂದೆ ಇರ್ಫಾನ್ ತಮಗೆ ಅಪರೂಪದ ಕಾಯಿಲೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಅದರ ಚಿಕಿತ್ಸೆಗಾಗಿ ಸುಮಾರು ಒಂದು ವರ್ಷ ಚಿತ್ರರಂಗದಿಂದ ದೂರವಿದ್ದರು.

ಮುಂಬೈ ಆಸ್ಪತ್ರೆಗೆ ದಾಖಲು
ಇಂಗ್ಲೆಂಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಕಳೆದ ಒಂದು ವಾರದ ಹಿಂದೆಯೇ ಕ್ಷೀಣಿಸಿತ್ತು. ಹಾಗಾಗಿ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಶನಿವಾರ ಅಮ್ಮನನ್ನು ಕಳೆದುಕೊಂಡಿದ್ದರು
ಕಳೆದ ಶನಿವಾರವಷ್ಟೇ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ (95) ಮೃತಪಟ್ಟಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಇರ್ಫಾನ್ ಅವರ ಕುಟುಂಬದ ಸದಸ್ಯರು ಜೈಪುರದಲ್ಲಿದ್ದು, ಇರ್ಫಾನ್ ಮುಂಬೈನಲ್ಲಿ ಸಿಲುಕಿದ್ದರಿಂದ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಿರಲಿಲ್ಲ. ಹೀಗಾಗಿ ಅವರು ವಿಡಿಯೋ ಕಾಲ್ ಮೂಲಕವೇ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದರು. ಈ ಘಟನೆ ನಡೆದು ನಾಲ್ಕು ದಿನದಲ್ಲಿಯೇ ಇರ್ಫಾನ್ ಅಗಲುವಿಕೆಯ ಸುದ್ದಿ ಹೊರಬಂದಿದೆ.

ಇಬ್ಬರು ಮಕ್ಕಳು
ಮುಂಬೈನಲ್ಲಿ ವಾಸವಿದ್ದ ಇರ್ಫಾನ್ ಖಾನ್, ಪತ್ನಿ ಸುತಾಪಾ ಮತ್ತು ಮಕ್ಕಳಾದ ಬಾಬಿಲ್ ಹಾಗೂ ಅಯಾನ್ ಅವರನ್ನು ಅಗಲಿದ್ದಾರೆ. ಇರ್ಫಾನ್ ಖಾನ್ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುದ್ದಿ ಮಂಗಳವಾರ ರಾತ್ರಿಯಷ್ಟೇ ವರದಿಯಾಗಿತ್ತು.


Click it and Unblock the Notifications











