ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಗೆ ಹುಟ್ಟುಹಬ್ಬದಂದೇ ಆಘಾತ ನೀಡಿದ ಪತ್ನಿ
ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ, ಲಾಕ್ ಡೌನ್ ನಡುವೆಯೂ ತಾಯಿಯ ಜತೆಗೆ ಇರುವ ಕಾರಣಕ್ಕಾಗಿ ಪೊಲೀಸರ ಅನುಮತಿ ಪಡೆದು ಮುಂಬೈನಿಂದ ಉತ್ತರ ಪ್ರದೇಶದ ಬುಧಾನದಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದಾರೆ.
Recommended Video
ನವಾಜುದ್ದೀನ್ ಅವರ ಮನೆಯಲ್ಲಿ ಈ ಬಾರಿ ಈದ್ ಹಬ್ಬದ ಸಂಭ್ರಮಾಚರಣೆಗಳಿಲ್ಲ. ಏಕೆಂದರೆ ಕಳೆದ ಎಂಟು ವರ್ಷಗಳಿಂದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರ ಕಿರಿಯ ಸಹೋದರಿ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಅದರಿಂದ 71 ವರ್ಷದ ಅವರ ತಾಯಿ ಎರಡು ಬಾರಿ ತೀವ್ರ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ಅವರು ಮತ್ತಷ್ಟು ಆಘಾತಕ್ಕೊಳಗಾಗುವ ಅಪಾಯ ಇರುವುದರಿಂದ ನವಾಜುದ್ದೀನ್ ಸಿದ್ದಿಕಿ ಅಮ್ಮನ ಜತೆ ಇರಲು ಹುಟ್ಟೂರಿಗೆ ತೆರಳಿದ್ದಾರೆ. ಆದರೆ ಈ ನಡುವೆ ಅವರ ವೈಯಕ್ತಿಕ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮುಂದೆ ಓದಿ...

ಜನ್ಮದಿನದಂದೇ ಆಘಾತ
ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಕೆಲವು ಸಮಯದಿಂದ ಹರಿದಾಡುತ್ತಿತ್ತು. ಅದೀಗ ದೃಢಪಟ್ಟಿದೆ. ಮೇ 19 ನವಾಜುದ್ದೀನ್ ಸಿದ್ದಿಕಿ ಅವರ ಜನ್ಮದಿನ. ಈ ದಿನದಂದು ಸಂಭ್ರಮಿಸುವ ಬದಲು ಅವರಿಗೆ ಆಘಾತ ಎದುರಾಗಿದೆ.

ಡೈವೋರ್ಸ್ ಪತ್ರ
ನವಾಜುದ್ದೀನ್ ಸಿದ್ದಿಕಿ ಅವರ ಜನ್ಮದಿನದಂದು ಪತ್ನಿಯಿಂದ ಸಿಕ್ಕಿರುವುದು ಉಡುಗೊರೆಯಲ್ಲ. ಬದಲಾಗಿ ಡೈವೋರ್ಸ್ ಪತ್ರ! 46ನೇ ವರ್ಷಕ್ಕೆ ಕಾಲಿರಿಸಿರುವ ನವಾಜುದ್ದೀನ್ ಅವರಿಗೆ ಪತ್ನಿ ಆಲಿಯಾ 11 ವರ್ಷಗಳ ಸಾಂಸಾರಿಕ ಜೀವನ ಸಾಕಾಗಿದೆ ಎಂದು ಹೇಳಿದ್ದಾರೆ. ಪತಿಗೆ ಅವರು ವಾಟ್ಸಾಪ್ ಮತ್ತು ಇಮೇಲ್ ಮೂಲಕ ವಿಚ್ಛೇದನ ಪತ್ರ ರವಾನಿಸಿದ್ದಾರೆ.

ಲೀಗಲ್ ನೋಟಿಸ್ ಕಳಿಸಿದ್ದೇನೆ
ಈ ಬಗ್ಗೆ ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ಆಲಿಯಾ, ನವಾಜುದ್ದೀನ್ ಅವರಿಗೆ ನಾನು ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಆದರೆ ಅವರು ಅದಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಡೈವೋರ್ಸ್ ನಿರ್ಧಾರಕ್ಕೆ ಕಾರಣವನ್ನೂ ಅವರು ಹೇಳಿದ್ದಾರೆ. 'ಈ ವಿವಾದದ ಬಗ್ಗೆ ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ಹತ್ತು ವರ್ಷದಿಂದಲೂ ನಮ್ಮ ನಡುವೆ ಎಲ್ಲವೂ ಸರಿಯಾಗಿ ಇರಲಿಲ್ಲ' ಎಂದು ತಿಳಿಸಿದ್ದಾರೆ.

ಮದುವೆ ಆದಾಗಿನಿಂದ ಸಮಸ್ಯೆ
'ಈ ಸಂದರ್ಭದಲ್ಲಿ ನಾನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊಳ್ಳಲು ಬಯಸದ ಅನೇಕ ಸಂಗತಿಗಳಿವೆ. ಆದರೆ ಒಂದು ದಶಕದ ಹಿಂದೆ ನಮ್ಮ ಮದುವೆ ಆದ ಕೂಡಲೇ ನಮ್ಮ ಸಮಸ್ಯೆಗಳು ಆರಂಭವಾಗಿದ್ದವು. ಎರಡು ತಿಂಗಳ ಲಾಕ್ ಡೌನ್ ಸಮಯ ನನಗೆ ಈ ಬಗ್ಗೆ ಚಿಂತಿಸಲು ಸಾಕಷ್ಟು ಅವಕಾಶ ನೀಡಿತು' ಎಂದಿದ್ದಾರೆ.

ಆತ್ಮಗೌರವ ನನ್ನ ಪಾಲಿಗಿಲ್ಲ
'ವೈವಾಹಿಕ ಜೀವನದಲ್ಲಿ ಆತ್ಮಗೌರವ ಬಹಳ ಮುಖ್ಯ. ಆದರೆ ಅದು ನನ್ನ ಪಾಲಿಗೆ ಇರಲೇ ಇಲ್ಲ. ನನಗೆ ಯಾರೂ ಇಲ್ಲ, ಒಬ್ಬಂಟಿ ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಅವರ ಸಹೋದರ ಶಮಾಸ್ ಅವರಲ್ಲಿಯೂ ಸಮಸ್ಯೆಗಳಿವೆ. ನಾನು ನನ್ನ ಹಳೆಯ ಹೆಸರಿಗೆ ಮರಳಿದ್ದೇನೆ. ನಾನಿನ್ನು ಆಲಿಯಾ ಸಿದ್ದಿಕಿ ಅಲ್ಲ, ಅಂಜನಾ ಕಿಶೋರ್ ಪಾಂಡೆ. ನನ್ನ ಪಾಭಕ್ಕಾಗಿ ಬೇರೆಯೊಬ್ಬರ ಐಡೆಂಟಿಟಿ ಪಡೆದುಕೊಳ್ಳುತ್ತಿದ್ದೇನೆ ಎಂಬುದು ನನಗೆ ಬೇಕಿಲ್ಲ' ಎಂದು ಹೇಳಿದ್ದಾರೆ.

ಮಕ್ಕಳು ನನ್ನ ಜತೆಯಿರಬೇಕು
'ಈಗ ಹೇಗೆ ಬದುಕು ಸಾಗುತ್ತಿದ್ದೆಯೋ ಹಾಗೆಯೇ ಸಾಗಲು ಬಯಸಿದ್ದೇನೆ. ಭವಿಷ್ಯದ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಆದರೆ ಈ ಮದುವೆಯ ಬಂಧ ಮುಂದುವರಿಯುವುದನ್ನಂತೂ ಬಯಸುವುದಿಲ್ಲ. ಮತ್ತೆ ಒಂದುಗೂಡುವ ಯಾವ ಅವಕಾಶಗಳೂ ಇಲ್ಲ. ನಾನು ನನ್ನ ಮಕ್ಕಳನ್ನು ಬೆಳೆಸಿದ್ದೇನೆ. ಅವರು ನನ್ನ ಜತೆಯಲ್ಲಿಯೇ ಇರಬೇಕು' ಎಂದು ತಿಳಿಸಿದ್ದಾರೆ.


Click it and Unblock the Notifications










