ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಬಹುಭಾಷಾ ನಟ ಆರ್ ಮಾಧವನ್ ಆಯ್ಕೆ!
ಬಹುಭಾಷಾ ನಟ ಆರ್ ಮಾಧವನ್‌ಗೆ ಕೇಂದ್ರ ಸರ್ಕಾರ ಹೊಸ ಜವಾಬ್ದಾರಿಯನ್ನು ನೀಡಿದೆ. ಪೂನಾದಲ್ಲಿ ಇರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ಅಧ್ಯಕ್ಷರಾಗಿ ಆರ್ ಮಾಧವನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು (ಸೆಪ್ಟೆಂಬರ್ 1) ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಆಯ್ಕೆಯನ್ನು ಪ್ರಕಟಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಟ ಹಾಗೂ ಎಫ್‌ಟಿಐಐಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್ ಮಾಧವನ್‌ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

" ಎಫ್‌ಟಿಐಐಗೆ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಕ್ಕೆ ಹಾಗೂ ಆಡಳಿತ ಮಂಡಳಿಯ ಛೇರ್‌ಮನ್ ಆಗಿದ್ದಕ್ಕೆ ಆರ್ ಮಾಧವನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸುದೀರ್ಘ ಅನುಭವ ಹಾಗೂ ಗಟ್ಟಿಯಾದ ಮೌಲ್ಯಗಳು ಈ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಹಾಗೇ ಪಾಸಿಟಿವ್ ಬದಲಾವಣೆ ತರುತ್ತೆ" ಅನುರಾಗ್ ಠಾಕೂರ್ ಟ್ವೀಟ್(x) ಮಾಡಿದ್ದಾರೆ.
ಆರ್. ಮಾಧವನ್ ಸಿನಿಮಾರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. 'ಇಸ್ ರಾತ್ ಕಿ ಸುಭಾ ನಹಿ' ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಣಿರತ್ನಂ ನಿರ್ದೇಶಿಸಿದ 'ಅಲೈಪಾಯುತೆ' ಸಿನಿಮಾ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು. 'ಓಂ ಶಾಂತಿ ಓಂ', 'ಮಿನ್ನಲೆ', 'ಮುಂಬೈ ಮೇರಿ ಜಾನ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಆಮಿರ್ ಖಾನ್ ಜೊತೆ ನಟಿಸಿದ್ದ '3 ಐಡಿಯನ್ಸ್', 'ತನು ವೆಡ್ಸ್ ಮನು', 'ಮಾರ', 'ವಿಕ್ರಮ್ ವೇದ' ಹಾಗೂ ಇತ್ತೀಚೆಗೆ ಅವರೇ ನಿರ್ದೇಶಿಸಿದ 'ರಾಕೆಟ್ರಿ' ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿದೆ. ಇದರೊಂದಿಗೆ ಆರ್ ಮಾಧವನ್ ಕೆಲವು ಇಂಟ್ರೆಸ್ಟಿಂಗ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚು ವಿವಾದಕ್ಕೆ ಸಿಕ್ಕಿಕೊಳ್ಳದ ನಟನಿಗೆ ಕೇಂದ್ರ ಸರ್ಕಾರ ಉತ್ತಮ ಹುದ್ದೆಯನ್ನು ನೀಡಿದೆ.
ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಇದೂವರೆಗೆ ಬಾಲಿವುಡ್‌ನ ಹಿರಿಯ ನಿರ್ದೇಶಕ ಶೇಖರ್ ಕಪೂರ್ ಕಾರ್ಯ ನಿರ್ವಹಿಸುತ್ತಿದ್ದರು. ಸೆಪ್ಟೆಂಬರ್ 2020 ರಿಂದ ಆಗಸ್ಟ್ 2023 ರವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸದ್ಯ ಶೇಖರ್ ಕಪೂರ್ ಅವರ ಸ್ಥಾನವನ್ನು ಈಗ ಆರ್. ಮಾಧವನ್ ತುಂಬಲಿದ್ದಾರೆ. ಆರ್ ಮಾಧನವನ್ ಎರಡು ವರ್ಷಗಳ ಕಾಲ ಎಫ್‌ಟಿಐಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.


Click it and Unblock the Notifications











