ಮುಂಬೈನಲ್ಲಿ ಖ್ಯಾತ ನಾಯಕಿ ಊರ್ಮಿಳಾ ಕಾರು ಭೀಕರ ಅಪಘಾತ, ಸ್ಥಳದಲ್ಲೇ ಓರ್ವ ಕಾರ್ಮಿಕ ನಿಧನ..!
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಇದಕ್ಕೆ ಮರಾಠಿ ಚೆಲುವೆ ಊರ್ಮಿಳಾ ಕೊಠಾರೆ ಸದ್ಯದ ಉದಾಹರಣೆ.
ಹೌದು, ಶುಭ ಮಂಗಳ ಸಾವಧಾನ್, ಆಯಿ ಶಪಥ್, ದುನಿಯಾದಾರಿ, ಟೈಮ್ ಪಾಸ್, ಹೀಗೆ ಹಲವಾರು ಮರಾಠಿ ಚಿತ್ರಗಳಲ್ಲಿ ಮಿಂಚಿರುವ, ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಮಹಾರಾಷ್ಟ್ರದೆಲ್ಲೆಡೆ ಮನೆ ಮಾತಾಗಿರುವ ಊರ್ಮಿಳಾ ಕೊಠಾರೆ ಅವರ ಕಾರು ಇಂದು ಮುಂಬೈನಲ್ಲಿ ಅಪಘಾತಕ್ಕೀಡಾಗಿದೆ. ಕಾರು ಹರಿದು ಓರ್ವ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.

ತಡರಾತ್ರಿ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಮನೆಗೆ ಮರಳುವ ಸಮಯದಲ್ಲಿ ಮುಂಬೈನ ಕಾಂದಿವಲಿಯ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪೊಯಿಸರ್ ಮೆಟ್ರೋ ನಿಲ್ದಾಣದ ಬಳಿ ಇದ್ದ ಇಬ್ಬರು ಮೆಟ್ರೋ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ನಂತರ ಓರ್ವ ಕಾರ್ಮಿಕ ಸ್ಥಳದಲ್ಲಿಯೇ ಮೃತ ಪಟ್ಟರೆ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಜಾಗರೂಕತೆಯಿಂದ ಕಾರು ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಸತತ ಚಿತ್ರೀಕರಣದಿಂದ ಸುಸ್ತಾಗಿದ್ದ ಊರ್ಮಿಳಾ ಮಧ್ಯರಾತ್ರಿ 12-45ಕ್ಕೆ ಈ ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಅಪಘಾತ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ಏರ್ ಬ್ಯಾಗ್ ಓಪನ್ ಆದ ಕಾರಣ ಚಾಲಕ ಮತ್ತು ಊರ್ಮಿಳಾ ಅವರ ಜೀವ ಉಳಿದಿದೆ ಎಂದು ಊರ್ಮಿಳಾ ಅವರ ಪತಿ ಆದಿನಾಥ್ ಹೇಳಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸದ್ಯ ತನಿಖೆಯನ್ನು ಆರಂಭಿಸಿದ್ದಾರೆ.
ಇನ್ನುಳಿದಂತೆ ಕಾರು ಅಫಘಾತಕ್ಕೀಡಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಪ್ರಭಾವಿ ವ್ಯಕ್ತಿಗಳ ಮತ್ತು ಸೆಲೆಬ್ರಿಟಿಗಳ ಈ ಬೇಜವಾಬ್ಧಾರಿತನಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕೆಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ಕೇವಲ ಚಾಲಕ ಮಾತ್ರ ತಪ್ಪಿತಸ್ಥನಲ್ಲ ನಟಿ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥರು ಎನ್ನುತ್ತಿರುವ ಅನೇಕರು ಚಾಲಕ ಅತೀ ವೇಗದಲ್ಲಿ ಚಾಲನೆ ಮಾಡುತ್ತಿರುವಾಗ ಆ ಚಾಲಕನಿಗೆ ನಟಿ ಊರ್ಮಿಳಾ ಬೈಯಬೇಕಿತ್ತು ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಾದರೂ ತಪ್ಪು ಮಾಡಿದವರಿಗೆ ಓರ್ವ ಕಾರ್ಮಿಕನನ್ನು ಬಲಿ ಪಡೆದವರಿಗೆ ಶಿಕ್ಷೆಯಾಗುತ್ತಾ ಅಥವಾ ಇವರು ಕೂಡ ಜಾಮೀನು ಪಡೆದು ಹೊರಗಡೆ ನೆಮ್ಮದಿಯಿಂದ ಬದುಕುತ್ತಾರಾ ಎನ್ನುವ ಪ್ರಶ್ನೆ ಕೂಡ ಸದ್ಯ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ಸೇರಿ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿದೆ. ನುಜ್ಜು ಗುಜ್ಜಾದ ಊರ್ಮಿಳಾ ಅವರ ಕಾರಿನ ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











