"ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
ಬಹುಭಾಷಾ ನಟಿ ಪ್ರಿಯಾಮಣಿ ತಾನು ನಟಿಸಿದ ಹೊಸ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಮಣಿಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಮೈದಾನ್'.
ಅಜಯ್ ದೇವಗನ್ ಫುಟ್‌ಬಾಲ್ ಕೋಚ್ ಆಗಿ ನಟಿಸಿರುವ 'ಮೈದಾನ್' ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ಏಪ್ರಿಲ್ 10, 2024 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ತುಣುಕುಗಳು ಸದ್ದು ಮಾಡುತ್ತಿವೆ.

'ಮೈದಾನ್' ಬಿಡುಗಡೆ ಹಿನ್ನೆಲೆಯಲ್ಲಿ ನಟಿ ಪ್ರಿಯಾಮಣಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಹಿಂದಿ ಚಿತ್ರರಂಗದಲ್ಲಿ ದಕ್ಷಿಣ ಭಾರತದ ನಟಿ ಎಂದೇ ಗುರುತಿಸುತ್ತಿರುವ ಬಗ್ಗೆ ಓಪನ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆನೂ ಕಮೆಂಟ್ ಮಾಡಿದ್ದಾರೆ.
ಈ ಸಂದರ್ಶನದಲ್ಲಿ ಪ್ರಿಯಾಮಣಿ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ವೃತ್ತಿ ಬದುಕು ಆರಂಭಿಸಿದ್ದರಿಂದ ದಕ್ಷಿಣ ಭಾರತದ ನಟಿ ಎಂಬ ಹಣೆಪಟ್ಟಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರಿಯಾಮಣಿ ಹಿಂದಿ ಚಿತ್ರರಂಗದಲ್ಲಿ ತಮಗೆ ಆಗುತ್ತಿರುವ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. "ಹೌದು, ಕೆಲವು ಬಾರಿ ದಕ್ಷಿಣ ಭಾರತದ ಪಾತ್ರ ಇದ್ದಿದ್ದರಿಂದ ನಿಮ್ಮನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡೆವು ಎಂದು ಹೇಳುತ್ತಾರೆ. ನನಗೆ ಅನಿಸುತ್ತೆ ಇದು ಆದಷ್ಟು ಬೇಗ ಬದಲಾಗುತ್ತೆ." ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ, " ನೋಡಿ, ನಾವು ದಕ್ಷಿಣ ಭಾರತದಿಂದ ಬಂದವರೇ ಆಗಿದ್ದರೂ, ನಾವು ಈ ಭಾಷೆಯಲ್ಲಿ ಸುಲಲಿತವಾಗಿ ಮಾತಾಡುತ್ತೇವೆ. ಬೇರೆಯವರಂತೆ ನಾವು ಚೆನ್ನಾಗಿಯೇ ಕಾಣಿಸುತ್ತೇವೆ. ಇಲ್ಲಿನ ಮಹಿಳೆಯರ ಹಾಗೆ ಹೊಳೆಯುವ ಬಿಳಿ ಬಣ್ಣದ ಚರ್ಮದವರು ನಾವಾಗಿರದೇ ಇರಬಹುದು, ಅದ್ಯಾವುದೂ ದೊಡ್ಡ ವಿಚಾರವೇ ಅಲ್ಲ ಅಂತ ಅನಿಸುತ್ತೆ." ಎಂದು ಪ್ರಿಯಾಮಣಿ ಪ್ರತಿಕ್ರಿಯೆ ನೀಡಿದ್ದಾರೆ.
ಇದರೊಂದಿಗೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ನಟರು ಅಂತ ಬೇರ್ಪಡಿಸುವವರ ಬಗ್ಗೆನೂ ಪ್ರತಿಕ್ರಿಯಿಸಿದ್ದಾರೆ. "ನನಗೆ ಅನಿಸುತ್ತೆ ಉತ್ತರ ಹಾಗೂ ದಕ್ಷಿಣ ಅಂತ ಬೇರೆ ಮಾಡುವುದು ಬದಲಾಗಬೇಕು. ಅಷ್ಟಕ್ಕೂ ನಾವೆಲ್ಲರೂ ಭಾರತದ ಕಲಾವಿದರು. ನಾವು ಹಾಗೇ ಇರಬೇಕು" ಎಂದು ಪ್ರಿಯಾಮಣಿ ಹೇಳಿಕೊಂಡಿದ್ದಾರೆ.
ಪ್ರಿಯಾಮಣಿ ವಿವಾಹದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಆರ್ಟಿಕಲ್ 370' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ 'ಮೈದಾನ್' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಹಾಗೇ ಕನ್ನಡದಲ್ಲೂ ನಟಿಸುತ್ತಿದ್ದು, 'ಕೈಮರ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.


Click it and Unblock the Notifications











