"ವಿಚ್ಛೇದನದ ಬಳಿಕ ಉಳಿದುಕೊಳ್ಳಲು ಮನೆಯಿರಲಿಲ್ಲ, ಔಡಿ 6 ಕಾರಿನಲ್ಲಿ ಮಲಗಿದ್ದೆ" ಎಂದು ಕಿರುತೆರೆ ನಟಿ ಟ್ರೋಲ್
ರಶ್ಮಿ ದೇಸಾಯಿ ಹಿಂದಿ ಕಿರುತೆರೆಯ ಜನಪ್ರಿಯ ನಟಿ. ಒಂದು ಕಾಲದಲ್ಲಿ ಈ ನಟಿಗೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿ ಗುರುತಿಸಿಕೊಂಡಿದ್ದರು. ಕೇವಲ ಧಾರಾವಾಹಿ ಅಷ್ಟೇ ಅಲ್ಲದೆ, ಮ್ಯೂಸಿಕ್ ವಿಡಿಯೋಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಈ ನಟಿಯ ಪರಿಚಯ ಕಿರುತೆರೆ ವೀಕ್ಷಕರಿಗೆ ಬಹಳ ಚೆನ್ನಾಗಿಯೇ ಇದೆ.
ಬಿಗ್‌ಬಾಸ್ ಹಿಂದಿಯ 13ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ರಶ್ಮಿ ದೇಸಾಯಿ ಭಾಗವಹಿಸಿದ್ದರು. ಬಿಗ್‌ಬಾಸ್ ಗೆಲ್ಲುವುದಕ್ಕೆ ಆಗದೇ ಹೋದರೂ, ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹಾಗಂತ ಈ ನಟಿಯ ವೈಯಕ್ತಿಕ ಬದುಕು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಚ್ಛೇದನದ ಬಳಿಕ ರಶ್ಮಿ ದೇಸಾಯಿ ಮನೆಯಿಲ್ಲದೆ ಬೀದಿ ಬದಿ ತನ್ನ ಕಾರನ್ನು ನಿಲ್ಲಿಸಿ ಅದರಲ್ಲೇ ಮಲಗಿದ್ದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಈ ಸಂದರ್ಶನದ ಬಳಿಕ ಕಿರುತೆರೆ ನಟಿಯ ಹೇಳಿಕೆಯನ್ನು ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಆ ಸಂದರ್ಶನದಲ್ಲಿ ನಟಿ ರಶ್ಮಿ ದೇಸಾಯಿ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ನಂದೀಶ್ ಸಿಂಗ್ ಸಂಧು ಎಂಬುವವರ ಜೊತೆ ನಟಿ ರಶ್ಮಿ ದೇಸಾಯಿ ವಿವಾಹವಾಗಿದ್ದರು. ಮೂರು ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೊದಲ ವಿವಾಹದಿಂದ ರಶ್ಮಿ ದೇಸಾಯಿ ಶೇಕ್ ಆಗಿದ್ದರು. ಅದೊಂದು ದೊಡ್ಡ ಮಿಸ್ಟೇಕ್ ಅಂತ ಬಳಿಕ ಗೊತ್ತಾಗಿತ್ತು. ಬಿಗ್ ಬಾಸ್ ಹಿಂದಿ 13ರ ಬಳಿಕ ಉದ್ಯಮಿ ಅರ್ಹಾನ್ ಖಾನ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಆದರೆ, ಅದೂ ಕೂಡ ಕೆಲವು ದಿನಗಳ ಬಳಿಕ ಮುರಿದುಬಿದ್ದಿತ್ತು.
ಇದೇ ಸಂದರ್ಶನದಲ್ಲಿ ರಶ್ಮಿ ದೇಸಾಯಿ ಮೊದಲ ವಿವಾಹದ ವಿಚ್ಚೇದನದ ಬಳಿಕ ಉಳಿದು ಕೊಳ್ಳಲು ಮನೆಯಿರಲಿಲ್ಲ. ನಾಲ್ಕು ದಿನ ರಸ್ತೆ ಬದಿಯಲ್ಲಿ ತನ್ನ ಔಡಿ 6 ಕಾಡಿನಲ್ಲಿ ಕಳೆದಿದ್ದೇನೆ ಎಂದಿದ್ದಾರೆ. ರಸ್ತೆ ಬದಿಯಲ್ಲಿ ಸಿಗುವ 20 ರೂಪಾಯಿಯ ಊಟವನ್ನು ತಿಂದು ಬದುಕಿದ್ದಾಗಿ ಹೇಳಿಕೊಂಡಿದ್ದಾರೆ. ಆಟೋ ರಿಕ್ಷಾ ಓಡಿಸುವವರಿಗಾಗಿ ಬರುತ್ತಿದ್ದ ಊಟವನ್ನೇ ತಿಂದು ಜೀವಿಸಿದ್ದಾಗಿ ಹೇಳಿಕೊಂಡಿದ್ದಾರೆ. ತನ್ನ ಲಗೇಜುಗಳನ್ನೆಲ್ಲ ಆಕೆಯ ಮ್ಯಾನೇಜರ್ ಮನೆಯಲ್ಲಿ ಇಟ್ಟಿದ್ದೆ ಅಂತಲೂ ಹೇಳಿಕೊಂಡಿದ್ದಾರೆ.

ವಿಚ್ಚೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲದಲ್ಲಿ ಸಿಕ್ಕಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಕೈಯಲ್ಲಿ ಕೆಲಸವಿರಲಿಲ್ಲ. ಆ ಬಳಿಕ 'ದಿಲ್ ಸೇ ದಿಲ್ ತಕ್' ಅನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಬಳಿಕ ತಮ್ಮ ಜರ್ನಿ ಅದ್ಭುತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆ ಬಳಿಕ ಬಿಗ್ ಬಾಸ್ ಹಿಂದಿ ಸೀಸನ್ 13ರಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ನಟಿ ರಶ್ಮಿ ದೇಸಾಯಿ ಕಷ್ಟದ ದಿನಗಳಲ್ಲಿ ನಾಲ್ಕು ದಿನ ಔಡಿ 6 ಕಾರಿನಲ್ಲಿ ಮಲಗಿದ್ದೆ ಎಂದಿದ್ದರು. ಇದಕ್ಕೆ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಕಷ್ಟ ಕೊಟ್ಟರೆ ಇಂತಹ ಕಷ್ಟ ಕೊಡಪ್ಪ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಂದರ್ಶನ ನೀಡಿದ ಬಳಿಕ ಹೀಗೆ ಟ್ರೋಲ್‌ಗಳಿಗೂ ಸಿಕ್ಕಿಕೊಂಡು ಗುರಿಯಾಗಿದ್ದಾರೆ.


Click it and Unblock the Notifications











