ಐಷಾರಾಮಿ ಬ್ರ್ಯಾಂಡ್‌ಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದ ಸಮೀರಾ ರೆಡ್ಡಿ; ದುಬಾರಿ ಲೈಫ್ ಸ್ಟೈಲ್‌ನಿಂದ ಹೊರ ಬಂದಿದ್ದೇಕೆ?
ಸಿನಿಮಾರಂಗದಲ್ಲಿ ಶೋ ಆಫ್ ಮಾಡೋದು ಹೊಸದೇನು ಅಲ್ಲ. ಕ್ಯಾಮರಾ ಮುಂದೆ, ಸಿನಿಮಾ ಮಂದಿ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಎಲ್ಲರ ಗಮನ ತಮ್ಮ ಕಡೆನೇ ಸೆಳೆಯಬೇಕು ಅನ್ನೋ ಮನಸ್ಥಿತಿಯಲ್ಲಿಯೇ ಇರುತ್ತಾರೆ. ಇಲ್ಲದೇ ಹೋದರೆ, ತಮ್ಮನ್ನು ಕಡೆ ಗಣಿಸುತ್ತಾರೆಂಬ ಅಳುಕು ಅವರಲ್ಲಿರುತ್ತೆ. ಹೀಗಾಗಿ ಐಷಾರಾಮಿ ಲೈಫ್ ಸ್ಟೈಲ್‌ಗಾಗಿ ಲಕ್ಷಗಳ ಲೆಕ್ಕದಲ್ಲಿ ಖರ್ಚು ಮಾಡುತ್ತಲೇ ಇರುತ್ತಾರೆ.
ನಟಿಯರು ಚಿತ್ರರಂಗದಲ್ಲಿ ಇಂತಹ ಹಲವು ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಕಲಾವಿದರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತೆ. ಹಾಗೇ ನಟಿಯಾಗಿ ಉಳಿದುಕೊಳ್ಳುವುದಕ್ಕೆ ಅವರು ಧರಿಸುವ ಉಡುಪುಗಳು, ಬ್ರ್ಯಾಂಡೆಡ್ ಬ್ಯಾಗ್‌ಗಳ ಮೇಲೆ ಲಕ್ಷಗಳ ಲೆಕ್ಕದಲ್ಲಿ ಖರ್ಚು ಮಾಡಬೇಕು. ಸಿನಿಮಾದಲ್ಲಿ ದುಡಿದಿದ್ದನ್ನು ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡಬೇಕಾಗುತ್ತೆ. ಇದೇ ವಿಷಯವನ್ನು ಬಹುಭಾಷಾ ನಟಿ ಸಮೀರಾ ರೆಡ್ಡಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

2002ರಲ್ಲಿ 'ಮೈನೆ ದಿಲ್ ತುಜ್ಕೋ ದಿಯಾ' ಹಿಂದಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಇಂಗ್ಲಿಷ್, ಬೆಂಗಾಲಿ ಸೇರಿದಂತೆ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ನಟಿ ಬಾಲಿವುಡ್‌ನ ಐಷಾರಾಮಿ ಲೈಫ್ ಸ್ಟೈಲ್ ಬಗ್ಗೆ ರಿವೀಲ್ ಮಾಡಿದ್ದಾರೆ. ಬ್ರ್ಯಾಂಡೆಡ್ ಡ್ರೆಸ್ ಹಾಗೂ ಬ್ಯಾಗ್‌ಗಳಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದನ್ನು ಹಂಚಿಕೊಂಡಿದ್ದಷ್ಟೇ ಅಲ್ಲದೇ, ಸರಳ ಲೈಫ್ ಸ್ಟೈಲ್‌ಗೆ ಹೇಗೆ ಒಗ್ಗಿಕೊಂಡರು ಅನ್ನೋದನ್ನೂ ಹೇಳಿದ್ದಾರೆ.
2013ರಲ್ಲಿ ಕಿಚ್ಚ ಸುದೀಪ್ ನಟಿಸಿದ 'ವರದನಾಯಕ' ಇವರ ಕೊನೆಯ ಸಿನಿಮಾ. 2014ರಲ್ಲಿ ಮಹಾರಾಷ್ಟ್ರದ ಅಕ್ಷಯ್ ವಾರ್ಡೆ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ 2015ರಲ್ಲಿ ಮಗ ಹನ್ಸ್ ಮತ್ತು 2019ರಲ್ಲಿ ಮಗಳು ನೈರಾ ಜನಿಸಿದರು. ವಿವಾಹದ ನಂತರ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟು, ಮುಂಬೈನಿಂದ ದೂರ ಉಳಿದು ಗೋವಾದಲ್ಲಿ ನೆಲೆಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಮಹಿಳೆಯರ ಸಬಲೀಕರಣ, ಸಾಮಾಜಿಕ ವಿಷಯಗಳು, ಸೌಂದರ್ಯ ಮತ್ತು ಫಿಟ್‌ನೆಸ್ ಸಲಹೆಗಳನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮನೆ ಹಾಗೂ ಐಷಾರಾಮಿ ವಸ್ತುಗಳ ಬಗ್ಗೆ ಮಾತಾಡುತ್ತಾ ಚಿತ್ರರಂಗದಲ್ಲಿ ಅವರು ಎದುರಿಸಿದ ಕಷ್ಟಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಾಲಿವುಡ್‌ನಲ್ಲಿ ಐಷಾರಾಮಿ ವಸ್ತುಗಳನ್ನು ಬಳಸುವ ಒತ್ತಡಗಳ ಬಗ್ಗೆನೂ ಹೇಳಿಕೊಂಡಿದ್ದಾರೆ. "2000ರ ದಶಕದ ಆರಂಭದಲ್ಲಿ, ಚಿತ್ರರಂಗದಲ್ಲಿ ಸ್ಥಾನ ಪಡೆಯಲು ನಾನು ಬಹಳ ಕಷ್ಟಪಟ್ಟೆ. ಸದಾ ಟ್ರೆಂಡ್‌ನಲ್ಲಿ ಇರುವುದಕ್ಕೆ ಐಷಾರಾಮಿ ಬ್ರ್ಯಾಂಡ್‌ಗಳಿಗಾಗಿ ಭಾರಿ ಖರ್ಚು ಮಾಡಿದೆ. ಬಾಲಿವುಡ್‌ನ ವಾತಾವರಣಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಒತ್ತಡದಿಂದ ತನ್ನ 24ನೇ ವಯಸ್ಸಿನಲ್ಲಿ ತೀವ್ರ ತಳಮಳ ಅನುಭವಿಸಿದ್ದೆ" ಎಂದು ನಟಿ ಸಮೀರಾ ರೆಡ್ಡಿ ಹೇಳಿದ್ದಾರೆ.

"ಮದುವೆಗೂ ಮುನ್ನ ₹2.5 ಲಕ್ಷ ಖರ್ಚು ಮಾಡಿ ಶಾನೆಲ್ ಜಾಕೆಟ್ (Chanel Jacket) ಒಂದನ್ನು ಖರೀದಿಸಿದ್ದೆ. ಈಗ ನಾನು ಸಂಪೂರ್ಣವಾಗಿ ಸರಳ ಉಡುಪುಗಳನ್ನು ಬಳಸುತ್ತಿದ್ದೇನೆ. ಐಷಾರಾಮಿ ಬಟ್ಟೆಗಳಿದ್ದರೂ ಅವುಗಳನ್ನು ಹೆಚ್ಚು ಬಳಸುವುದಿಲ್ಲ" ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ. ಗೋವಾಗೆ ಬಂದು ನೆಲೆಸಿದ ಕ್ಷಣದಿಂದ ಹೆಚ್ಚು ನೆಮ್ಮದಿಯ ಜೀವನ ಸಾಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಹಾಗೇ, 2005ರಲ್ಲಿ ಖರೀದಿಸಿದ್ದ ಡಿಯರ್ ಗೌಚೋ ಬ್ಯಾಗ್ (Dior Gaucho Bag) ಅನ್ನು ತೋರಿಸುತ್ತಾ, "ಬಾಲಿವುಡ್‌ಗೆ ಬಂದ ಹೊಸದರಲ್ಲಿ ನನ್ನ ಬಳಿ ಇತ್ತೀಚೆಗಿನ ಎಲ್ಲಾ ಮಾದರಿಯ ಬ್ಯಾಗ್‌ಗಳು ಇರಬೇಕು ಎಂದು ಅಂದುಕೊಂಡಿದ್ದೆ. ಬಾಲಿವುಡ್ ಸಂಸ್ಕೃತಿಗೆ ಒಗ್ಗಿಕೊಳ್ಳುವ ಒತ್ತಡದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಈ ಬ್ಯಾಗ್‌ಗಳನ್ನು ಖರೀದಿಸಿದೆ. ₹1.7 ಲಕ್ಷ ಮೌಲ್ಯದ ಲೂಯಿ ವಿಟಾನ್ ಟೋಟ್ ಬ್ಯಾಗ್ ಖರೀದಿಸಿದ್ದೆ. ಅಂದು ಏರ್‌ಪೋರ್ಟ್‌ನಿಂದ ಹೊರಬರುವ ನಟಿಯರ ಮೇಲೆ ಎಲ್ಲರ ಕಣ್ಣು ಇರುತ್ತಿತ್ತು. ಅಲ್ಲಿ ಕಾಣಿಸಿಕೊಳ್ಳುವ ರೀತಿಯನ್ನೇ ಆಧರಿಸಿ ನಮ್ಮ ಸ್ಟೇಟಸ್ ಅನ್ನು ಮೌಲ್ಯಮಾಪನ ಮಾಡಲಾಗುತ್ತಿತ್ತು. ಟಾಪ್ ನಟಿಯರು ಕೂಡ ದೊಡ್ಡ ಐಷಾರಾಮಿ ಬ್ಯಾಗ್‌ಗಳನ್ನು ಹೆಗಲ ಮೇಲೆ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ನನಗೂ 'ಏರ್‌ಪೋರ್ಟ್ ಲುಕ್' ಬೇಕು ಅಂತ ಅನಿಸಿತ್ತು. ಈ ಒತ್ತಡದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂತಹ ಬ್ಯಾಗ್‌ಗಳನ್ನು ಖರೀದಿ ಮಾಡಿದ್ದೆ" ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ.


Click it and Unblock the Notifications















