Adipurush Day 8 Box Office Collection: ಏನು ಉಪಯೋಗ ಇಲ್ಲ.. 8ನೇ ದಿನದ ಕಲೆಕ್ಷನ್ ಲೆಕ್ಕಕ್ಕುಂಟು ಆಟಕ್ಕಿಲ್ಲ
ಏನು ಉಪಯೋಗ ಇಲ್ಲ.. ಬಾಕ್ಸಾಫೀಸ್‌ನಲ್ಲಿ 'ಆದಿಪುರುಷ್' ಸೋಲು ಒಪ್ಪಿಕೊಳ್ಳಲ ಸಮಯ ಬಂದಿದೆ. ಸುಮಾರು 500 ಕೋಟಿ ರೂ. ಬಜೆಟ್ ಸಿನಿಮಾ ಎಂಟನೇ ದಿನಕ್ಕೆ ಸಿಂಗಲ್ ಡಿಜಿಟ್‌ನಲ್ಲಿ ಕಲೆಕ್ಷನ್ ಮಾಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ಲಕ್ಷಣಗಳು ತೀರಾ ಕಡಿಮೆ.
'ರಾಮಾಯಣ'ದಂತಹ ಮಹಾಗ್ರಂಥವನ್ನು ತೆರೆಮೇಲೆ ತರುವಾಗ ಸಂಶೋಧನೆಯ ಅಗತ್ಯವಿತ್ತು. ಆದರೆ, 'ಆದಿಪುರುಷ್' ಮನಸ್ಸಿಗೆ ಬಂದಂತೆ ಸಿನಿಮಾ ಮಾಡಿದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ. ಈ ಕಾರಣಕ್ಕೆ ಆದಿಪುರುಷ್ ಮೊದಲ ಮೂರು ದಿನ ದಾಖಲೆ ಗಳಿಕೆ ಮಾಡಿದ್ದು ಬಿಟ್ಟರೆ, ಮುಂದಿನ ದಿನಗಳಲ್ಲಿ ಈ ಸಿನಿಮಾ ಕಲೆಕ್ಷನ್ ಪಾತಾಳಕ್ಕೆ ಕುಸಿದಿದೆ.

'ಆದಿಪುರುಷ್' ಸಿನಿಮಾದ ಡೈಲಾಗ್‌ಗಳು ವಿವಾದಕ್ಕೆ ಸಿಲುಕಿದ್ದವು. ಹನುಮಂತನಿಗಾಗಿ ಬರೆದ ಡೈಲಾಗ್‌ಗಳನ್ನು ಕೇಳಿ ಪ್ರೇಕ್ಷಕರು ಕಿಡಿಕಾರಿದ್ದರು. ಬಳಿಕ ಸಂಭಾಷಣೆಯನ್ನೇ ಬದಲಾಯಿಸಿದರೂ ಏನೂ ಪ್ರಯೋಜನ ಆಗಿಲ್ಲ. ಅದು ಈಗ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. 8ನೇ ದಿನದ ಕಲೆಕ್ಷನ್ ನೋಡಿದರೆ, ನಿರ್ಮಾಪಕ ಜೇಬಿಗೆ ಹಣ ಬಂದಂತೆ ಸೂಚನೆ ಏನಿಲ್ಲ.
8ನೇ ದಿನದ 'ಆದಿಪುರುಷ್' ಕಲೆಕ್ಷನ್ ಹೇಗಿದೆ?
'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ಬದಲು ಬೇರೆ ಯಾವುದೇ ನಟನಿದ್ದರೂ ಇಷ್ಟೊಂದು ಕಲೆಕ್ಷನ್ ಆಗೋದು ಅನುಮಾನವಿತ್ತು. ನೆಗೆಟಿವ್ ಕಮೆಂಟ್‌ಗಳ ಹೊರತಾಗಿಯೂ ಈ ಸಿನಿಮಾ ವಿಶ್ವದಾದ್ಯಂತ 400 ಕೋಟಿ ರೂ.ಕಲೆಕ್ಷನ್ ಮಾಡುವಲ್ಲಿ ಸಕ್ಸಸ್ ಆಗಿದೆ. ಆದರೆ, ಇದರಲ್ಲಿ ಮೊದಲ ಮೂರು ದಿನದ ಶೇರ್ ದೊಡ್ಡದಿದೆ.
ಪ್ರಭಾಸ್, ಕೃತಿ ಸನನ್, ಸೈಫ್ ಅಲಿಖಾನ್ ಸಿನಿಮಾ 'ಆದಿಪುರುಷ್' ನಿನ್ನೆಯ (ಜೂನ್ 23) ಬಾಕ್ಸಾಫೀಸ್ ಕಲೆಕ್ಷನ್ ಪಾತಾಳಕ್ಕೆ ಕುಸಿದಿದೆ. ಶುಕ್ರವಾರ (ಜೂನ್ 23) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಕೇವಲ 3.25 ಕೋಟಿ ರೂ. ಈ ಮೂಲಕ ಎಲ್ಲಾ ಭಾಷೆಗಳಿಂದಲೂ ಭಾರತದಾದ್ಯಂತ ಕೇವಲ 264.80 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.

8 ದಿನಗಳಲ್ಲಿ ಯಾವ್ಯಾವ ದಿನ ಎಷ್ಟು ಗಳಿಕೆ?
'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 400 ಕೋಟಿ ರೂ. ದಾಟಿದೆ ಎಂದು ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. 'ರಾಮಾಯಣ'ವನ್ನು ತಿರುಚಿದ್ದಕ್ಕೆ ಪ್ರೇಕ್ಷಕರಷ್ಟೇ ಅಲ್ಲ, ಥಿಯೇಟರ್ ಓನರ್‌ಗಳೂ ಕೂಡ ಕಿಡಿಕಾರಿದ್ದಾರೆ. ನೆಗೆಟಿವ್ ಪಬ್ಲಿಸಿಟಿಯಿಂದಾಗಿ ಈ ಸಿನಿಮಾ ಕಳೆದ ಎಂಟು ದಿನಗಳಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದು, ಅದರ ಡಿಟೈಲ್ಸ್ ಇಲ್ಲಿದೆ.
| ಡೇ | ಕಲೆಕ್ಷನ್ |
| ಮೊದಲ ದಿನ | 86.75 ಕೋಟಿ ರೂ. |
| ಎರಡನೇ ದಿನ | 65.25 ಕೋಟಿ ರೂ. |
| ಮೂರನೇ ದಿನ | 69.10 ಕೋಟಿ ರೂ. |
| ನಾಲ್ಕನೇ ದಿನ | 16 ಕೋಟಿ ರೂ. |
| ಐದನೇ ದಿನ | 10.80 ಕೋಟಿ ರೂ. |
| ಆರನೇ ದಿನ | 7.50 ಕೋಟಿ ರೂ. |
| ಏಳನೇ ದಿನ | 5.50 ಕೋಟಿ ರೂ. |
| ಎಂಟನೇ ದಿನ | 3.25 ಕೋಟಿ ರೂ. |
| ಒಟ್ಟು | 264.80 ಕೋಟಿ ರೂ. |
ವೀಕೆಂಡ್ ನಿರ್ಣಾಯಕ
'ಆದಿಪುರುಷ್' ಸಿನಿಮಾ ಈ ವೀಕೆಂಡ್‌ನಲ್ಲಿ ಏನಾದರೂ ಮೋಡಿ ಮಾಡಿದರೆ, ನಿರ್ಮಾಪಕರು ಗೆದ್ದಂತೆ. ಒಂದು ವೇಳೆ ಶನಿವಾರ ಹಾಗೂ ಭಾನುವಾರ ಈ ಎರಡೂ ದಿನ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆ ಹಾಕದೇ ಹೋದರೆ, ನಿರ್ಮಾಪಕರಿಗೆ ನಷ್ಟ ಕಟ್ಟಿಟ್ಟ ಬುತ್ತಿ.
ಸದ್ಯದ ಪರಿಸ್ಥಿತಿಯಲ್ಲಿ 'ಆದಿಪುರುಷ್' ಸಿನಿಮಾಗೆ ಎಲ್ಲಾ ಕಡೆಯಿಂದಲೂ ನೆಗೆಟಿವ್ ಕಮೆಂಟ್‌ಗಳೇ ಬರುತ್ತಿವೆ. ಹೀಗಾಗಿ ಈ ಎರಡು ದಿನ ಬಾಕ್ಸಾಫೀಸ್‌ನಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಇದೆ. ಒಂದ್ವೇಳೆ ಎರಡನೇ ವೀಕೆಂಡ್‌ನಲ್ಲಿ ಕಡಿಮೆ ಅಂದ್ರೂ 20 ಕೋಟಿ ಮೇಲೆ ಕಲೆಕ್ಷನ್ ಆದರೆ, ಇನ್ನೊಂದು ವಾರ ಥಿಯೇಟರ್‌ಗಳಲ್ಲಿ ಇರುತ್ತೆ.


Click it and Unblock the Notifications











