South Indian Movies Vs Bollywood: ಪುಷ್ಪ, RRR, ಕೆಜಿಎಫ್ 2 ಸಕ್ಸಸ್: 'ಬಾಲಿವುಡ್ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯ'
ಭಾರತೀಯ ಸಿನಿಮಾ ಅಂದರೆ, ವಿದೇಶಿಗರಿಗೆ ಮೊದಲು ನೆನಪಾಗುತ್ತಿದ್ದಿದ್ದು ಬಾಲಿವುಡ್. ಸಿನಿಮಾದ ಅದ್ದೂರಿತನ, ಬಾಕ್ಸಾಫೀಸ್ ಕಲೆಕ್ಷನ್ ಎಲ್ಲವೂ ಗಮನ ಸೆಳೆಯುತ್ತಿತ್ತು. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಹತ್ತಿರಕ್ಕೆ ಬರಲೂ ಸಾಧ್ಯವೇ ಇಲ್ಲವೇನೋ ಎಂದು ಮಾತಾಡಿಕೊಳ್ಳುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೂರೇ ಮೂರು ಸಿನಿಮಾ ಬಾಲಿವುಡ್ ಗತಿಯನ್ನೇ ಬದಲಿಸಿಬಿಟ್ಟಿದೆ.
ಬಾಲಿವುಡ್ ಸಿನಿಮಾ ವಿಮರ್ಶಕರು, ಟ್ರೇಡ್ ಅನಲಿಸ್ಟ್‌ಗಳು ದಕ್ಷಿಣ ಭಾರತದ ಈ ಯಶಸ್ಸನ್ನು ಬಾಲಿವುಡ್ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಮಾಡುತ್ತಿರುವ ಹವಾವನ್ನು ಬಾಲಿವುಡ್ ಸಿನಿಮಾಗಳು ಮಾಡುತ್ತಿಲ್ಲ. ಹಿಂದಿ ಸಿನಿಮಾಗಳಿಗೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಸಿಕ್ಕು ಅದೆಷ್ಟೋ ವರ್ಷಗಳಾಗಿವೆ.
'ಪುಷ್ಪ','RRR', 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಲಿವುಡ್‌ಗೆ ವಿಮರ್ಶಕರು ಎಚ್ಚರಿಕೆ ಗಂಟೆಯನ್ನುರವಾನೆ ಮಾಡಿದ್ದಾರೆ. ಇದು ಎಚ್ಚೆತ್ತುಕೊಳ್ಳಲು ಸಕಲವೆಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಟ್ರೇಡ್ ಅನಲಿಸ್ಟ್ ನೀಡಿದ ಕಾರಣವೇನು?

ಹಿಂದಿ ಬೆಲ್ಟ್‌ನಲ್ಲಿ ಸೌತ್ ದರ್ಬಾರ್
ಲಾಕ್‌ಡೌನ್ ಬಳಿಕ ಸಿನಿಮಾಗಳ ಕಥೆ ಮುಗಿದೇ ಹೋಯ್ತು. ಅದರಲ್ಲೂ ಬಾಲಿವುಡ್ ಕಥೆ ಮುಗೀತು ಅಂತಾನೇ ಚರ್ಚೆಯಾಗಿತ್ತು. ಈ ಮಾತು ಬಾಲಿವುಡ್ ಲೆಕ್ಕದಲ್ಲಿ ನಿಜ ಅಂತ ಸಾಬೀತಾಗುತ್ತಿದೆ. ಅದೇ ದಕ್ಷಿಣ ಭಾರತ ಸಿನಿಮಾಗಳಿಗೆ ಈ ಒಪಿನಿಯನ್ ಉಲ್ಟಾ ಆಗಿದೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳು ಹಿಂದಿ ಬೆಲ್ಟ್‌ನಲ್ಲಿ ಗೆದ್ದು ಬೀಗಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳು ತಮ್ಮದೇ ಮಾರುಕಟ್ಟೆಯನ್ನು ಹಿಂದಿ ಬೆಲ್ಟ್‌ನಲ್ಲಿ ಸೃಷ್ಟಿಸಿವೆ. ಹಿಂದಿ ಭಾಷೆಯ ಏರಿಯಾಗಳಲ್ಲೇ ಬಾಲಿವುಡ್ ಸಿನಿಮಾಗಳನ್ನು ಮೀರಿ ಗಳಿಕೆ ಮಾಡುತ್ತಿವೆ. ಅಸಲಿಗೆ ಈ ಬೆಳವಣಿಗೆ ಹಲವು ಕಾರಣಗಳಿವೆ.

ವಿಮರ್ಶಕರು ಏನಂತಾರೆ?
ಟ್ರೇಡ್ ಅನಲಿಸ್ಟ್ ತರನ್ ಆದರ್ಶ್ ಪ್ರಕಾರ, "ದಕ್ಷಿಣ ಭಾರತದ ಸಿನಿಮಾಗಳು ಸಂಪೂರ್ಣ ಮನರಂಜನೆಯನ್ನು ನೀಡುತ್ತಿವೆ. ಇದರೊಂದಿಗೆ ಅಡೆತಡೆಗಳನ್ನೆಲ್ಲಾ ತಳ್ಳಿ ಹಾಕುತ್ತಿದ್ದಾರೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ " ಬಾಲಿವುಡ್ ಸಿನಿಮಾಗಳು ಮುಂಬೈನ ಬಾಂದ್ರಾ ಹಾಗೂ ವರ್ಸೋವಾ ಜನರನ್ನು ಬಿಟ್ಟು ಯೋಚನೆಯನ್ನೇ ಮಾಡುತ್ತಿಲ್ಲ. ಸಿನಿಮಾದಲ್ಲಿ ಸಂಪೂರ್ಣ ಮನರಂಜನೆ ಬೇಕು ಎನ್ನುವವರು ಏನು ಮಾಡುತ್ತಾರೆ? ಅದಕ್ಕೆ ಬಾಲಿವುಡ್ ಮಂದಿ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯ." ಎಂದು ತರನ್ ಆದರ್ಶ್ ಅಭಿಪ್ರಾಯ ಪಟ್ಟಿದ್ದಾರೆ.

3 ದಕ್ಷಿಣದ ಸಿನಿಮಾ ಕಲೆಕ್ಷನ್‌ಗೆ ಕಂಗಾಲು
ಕೊರೊನಾ ಕಾಲದ ಬಳಿಕ ಮೂರು ಸಿನಿಮಾ ಬಾಲಿವುಡ್ ಮಾರುಕಟ್ಟೆ ಮೇಲೆ ದಾಳಿ ಮಾಡಿವೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಮೊದಲ ದಿನ ವಿಶ್ವದಾದ್ಯಂತ 108 ಕೋಟಿ ಲೂಟಿ ಮಾಡಿತ್ತು. ರಾಜಮೌಳಿ ನಿರ್ದೇಶನದ RRR ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 240 ಕೋಟಿ ದಾಟಿತ್ತು. ಈಗ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಫಸ್ಟ್ ಡೇನೇ 134.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಯಾವುದೇ ಸಿನಿಮಾ ಇಂತಹ ಸಾಧನೆ ಮಾಡುತ್ತಿಲ್ಲ. " ಇದೆಲ್ಲಾ ಒಂದು ರಾತ್ರಿ ಸಿಕ್ಕಿದ್ದಲ್ಲ. ಹಲವು ವರ್ಷಗಳಿಂದ ನಮ್ಮ ಸಿನಿಮಾವನ್ನು, ಕೆಲಸವನ್ನು ಪ್ರೇಕ್ಷಕರು ಅರ್ಥ ಮಾಡಿಕೊಂಡ ಬಳಿಕ ಸಿಕ್ಕಿದ ಯಶಸ್ಸು." ಎಂದು ಯಶ್ ಹಿಂದಿ ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು.

ಬಾಲಿವುಡ್ ಮಂದಿ ಪ್ಯಾನ್ ಇಂಡಿಯಾ ಮಾಡಬೇಕಾ?
ಪ್ಯಾನ್ ಇಂಡಿಯಾ ಮೂಲಕ ದಕ್ಷಿಣದ ಸಿನಿಮಾಗಳು ಬಾಲಿವುಡ್ ಮಾರ್ಕೆಟ್ ಅನ್ನು ಕಬಳಿಸಿವೆ. ಮುಂದೆ ಬರುವ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಎದುರಿಸದೆ ಬಾಲಿವುಡ್‌ಗೆ ಬೇರೆ ದಾರಿಯಿಲ್ಲ. ಆದರೆ, ಬಾಲಿವುಡ್ ಬಳಿ ಹೇಳಿಕೊಳ್ಳುವಂತಹ ಪ್ಯಾನ್ ಇಂಡಿಯಾ ಸಿನಿಮಾವಿಲ್ಲ. 'ಬ್ರಹ್ಮಾಸ್ತ್ರ' ಬಿಟ್ಟರೆ ಬೇರೆ ಬಾಲಿವುಡ್ ಇನ್ನೂ ಪ್ಯಾನ್ ಇಂಡಿಯಾಗೆ ಒಗ್ಗಿ ಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮುಂದಿನ ಹಾದಿ ಬಹಳ ಕಠಿಣವಾಗಿದ್ದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











